ಕುಸಿದು ಬಿದ್ದ ಏರ್ ಇಂಡಿಯಾ ಪೈಲಟ್, ತಪ್ಪಿದ ಭಾರೀ ದುರಂತ
ಏರ್ ಇಂಡಿಯಾ ವಿಮಾನ AI2414 ತಾಂತ್ರಿಕ ದಾಖಲೆಗಳಿಗೆ ಸಹಿ ಹಾಕುವ ಸಂದರ್ಭದಲ್ಲಿ ಪೈಲಟ್ ದಿಢೀರನೆ ಕಾಕ್‌ಪಿಟ್‌ನಲ್ಲಿ ಕುಸಿದು ಬಿದ್ದರುವ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.;
ಏರ್ ಇಂಡಿಯಾ ವಿಮಾನ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಸುಕಿನ ಜಾವ ಆತಂಕಕಾರಿ ಘಟನೆಯೊಂದು ನಡೆದಿದೆ. ದೆಹಲಿಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ತಾಂತ್ರಿಕ ದಾಖಲೆಗಳಿಗೆ ಸಹಿ ಹಾಕುವ ಸಂದರ್ಭದಲ್ಲೇ ಕಾಕ್‌ಪಿಟ್‌ನಲ್ಲಿ ದಿಢೀರನೆ ಕುಸಿದು ಬಿದ್ದಿದ್ದಾರೆ. ಈ ಸಮಯೋಚಿತ ಘಟನೆಯಿಂದ ದೊಡ್ಡ ದುರಂತವೊಂದು ತಪ್ಪಿದ್ದು, ಏರ್ ಇಂಡಿಯಾ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ವಿಮಾನವನ್ನು ದೆಹಲಿಗೆ ಕಳುಹಿಸಿದೆ.
ಜುಲೈ 4ರಂದು ಬೆಳಗ್ಗೆ 3.00 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ AI2414ರ ಪೈಲಟ್, ವಿಮಾನದ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿ, ಪೈಲಟ್‌ಗೆ ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ವಿಮಾನ ನಿಲ್ದಾಣದ ಸಮೀಪದ ಆಸ್ಪತ್ರೆಗೆ ದಾಖಲಿಸಿದರು.
ಪೈಲಟ್‌ಗೆ ಆರೋಗ್ಯ ಸಮಸ್ಯೆ ಕಾರಣದಿಂದ ಈ ಘಟನೆ ಸಂಭವಿಸಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಏರ್ ಇಂಡಿಯಾದ ತ್ವರಿತ ಕ್ರಮ: ಪ್ರಯಾಣಿಕರ ಪ್ರಶಂಸೆ
ಈ ಅನಿರೀಕ್ಷಿತ ಘಟನೆಯಿಂದಾಗಿ ವಿಮಾನ AI2414 ಸುಮಾರು 90ರಿಂದ 120 ನಿಮಿಷಗಳ ಕಾಲ ವಿಳಂಬವಾಯಿತು. ಆದರೆ ಏರ್ ಇಂಡಿಯಾ ಯಾವುದೇ ಸಮಯ ವ್ಯರ್ಥ ಮಾಡದೆ, ತಕ್ಷಣವೇ ಮತ್ತೊಬ್ಬ ಅರ್ಹ ಪೈಲಟ್ ಅನ್ನು ನಿಯೋಜಿಸಿತು. ನಂತರ, ವಿಮಾನವು ಬೆಳಗ್ಗೆ 4.36ಕ್ಕೆ ದೆಹಲಿಗೆ ಹೊರಟು, 7.30ರ ವೇಳೆಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಏರ್ ಇಂಡಿಯಾ ವಕ್ತಾರರು ದೃಢಪಡಿಸಿದ್ದಾರೆ.
ಈ ಘಟನೆಯ ಸಂದರ್ಭದಲ್ಲಿ ಪ್ರಯಾಣಿಕರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿತ್ತು. ಏರ್ ಇಂಡಿಯಾದ ಈ ವೃತ್ತಿಪರ ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ನೀಡಿದ ಆದ್ಯತೆಗೆ ಕೆಲವು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೈಲಟ್‌ಗಳ ಆರೋಗ್ಯದ ಬಗ್ಗೆ ಹೆಚ್ಚಿದ ಕಾಳಜಿ
ಈ ಘಟನೆ ನಡೆಯುವ ಕೆಲವೇ ದಿನಗಳ ಮೊದಲು, ಏಪ್ರಿಲ್ 9ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 36 ವರ್ಷದ ಫಸ್ಟ್ ಆಫೀಸರ್ ಒಬ್ಬರು ಶ್ರೀನಗರದಿಂದ ದೆಹಲಿಗೆ ವಿಮಾನ ಚಲಾಯಿಸಿದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ತನಿಖೆಯನ್ನು ಆದೇಶಿಸಿತ್ತು. ಈ ತನಿಖೆಯು ಪೈಲಟ್‌ಗಳ ಆರೋಗ್ಯ ಪರೀಕ್ಷೆ, ಕೆಲಸದ ವೇಳಾಪಟ್ಟಿ, ಮತ್ತು ತುರ್ತು ಸಂದರ್ಭಗಳ ನಿರ್ವಹಣೆಯ ಕುರಿತಾದ ಮಾರ್ಗಸೂಚಿಗಳನ್ನು ಪರಿಶೀಲಿಸುತ್ತಿದೆ.