ಡಿಕೆಶಿ, ಖರ್ಗೆ ನಿರ್ಲಕ್ಷ್ಯದಿಂದ ಎಐ ಗೂಗಲ್‌ ಹಬ್‌ ನೆರೆ ರಾಜ್ಯದ ಪಾಲು: ಜೆಡಿಎಸ್‌ ಆರೋಪ

ಜಾಗತಿಕ ಟೆಕ್ ದಿಗ್ಗಜ ಗೂಗಲ್‌ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸುಮಾರು 1.3 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ ಎಐ ಹಬ್‌ ಸ್ಥಾಪಿಸಲು ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Update: 2025-10-15 06:11 GMT

ಸಾಂದರ್ಭಿಕ ಚಿತ್ರ

Click the Play button to listen to article

ಬೆಂಗಳೂರಿನ ರಸ್ತೆ ಗುಂಡಿ, ಕಸ ಹಾಗೂ ಮೂಲ ಸೌಕರ್ಯ ಸಮಸ್ಯೆಯು ಕಾರ್ಪೊರೇಟ್‌ ಉದ್ಯಮಗಳ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಜಾಗತಿಕ ಬೃಹತ್ ಹೂಡಿಕೆ ಯೋಜನೆಯೊಂದು ನೆರೆಯ ರಾಜ್ಯ‌ ಆಂಧ್ರಪ್ರದೇಶದ ಪಾಲಾಗಿದೆ ಎಂದು ಜೆಡಿಎಸ್‌ ಆರೋಪಿಸಿದೆ. 

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗ್ರಹಣ ಹಿಡಿದಿದೆ. ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೂ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ನಿರ್ಲಕ್ಷ್ಯದಿಂದಾಗಿ 1.3ಲಕ್ಷ ಕೋಟಿ ರೂ. ಹೂಡಿಕೆಯ ಯೋಜನೆಯಾದ ಗೂಗಲ್‌ ಎಐ ಹಬ್‌ ರಾಜ್ಯದ ಕೈತಪ್ಪಿದೆ. ಕರ್ನಾಟಕಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ ಎಂದು ಜೆಡಿಎಸ್‌ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಿಡಿಕಾರಿದೆ. 

ಜಾಗತಿಕ ಟೆಕ್ ದಿಗ್ಗಜ ಗೂಗಲ್‌ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 1.3 ಲಕ್ಷ ಕೋಟಿ ರೂ. ಹೂಡಿಕೆಯ ಎಐ ಹಬ್‌ ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. 30 ಸಾವಿರ ಉದ್ಯೋಗದ ಜೊತೆಗೆ ವಾರ್ಷಿಕ 10 ಸಾವಿರ ಕೋಟಿ ರೂ. ಆದಾಯ ಗಳಿಸಬಹುದಾಗಿದ್ದ ಈ ಯೋಜನೆಯು ಕರ್ನಾಟಕದ ಕೈತಪ್ಪಿ ಅನ್ಯ ರಾಜ್ಯಕ್ಕೆ ಹೋಗಿದೆ. ಇದಕ್ಕೆ ಬೆಂಗಳೂರಿನ ದುಸ್ಥಿತಿಯೇ ಕಾರಣ ಎಂದು ವಾಗ್ದಾಳಿ ನಡೆಸಿದೆ. 

ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದನ್ನು ಬಿಟ್ಟು, ಉದ್ಯಮಿಗಳು ಬೆಂಗಳೂರು ಬಿಟ್ಟು ಹೋದರೆ ಹೋಗಲಿ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಧಮ್ಕಿ ಹಾಕುತ್ತಾರೆ. ಇದೆಲ್ಲರ ಪರಿಣಾಮ ಬೃಹತ್‌ ಯೋಜನೆಯ ಅವಕಾಶ ತಪ್ಪಿಹೋಗಿದೆ ಎಂದು ದೂರಿದೆ.

ಪ್ರಧಾನಿ ಭೇಟಿಯಾಗಿದ್ದ ಸುಂದರ್‌ ಪಿಚೈ

ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅ.14 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಕೃತಕ ಬುದ್ದಿಮತ್ತೆಯ ಬಗ್ಗೆ ಮಾತನಾಡಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತನ್ನ ಕೃತಕ ಬುದ್ಧಿಮತ್ತೆಯ ಕೇಂದ್ರ ಸ್ಥಾಪನೆಗೆ ಗೂಗಲ್‌ ತೀರ್ಮಾನಿಸಿದೆ. ಇದು ದೇಶದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆಯಾಗಿದೆ ಎಂದು ಸುಂದರ್‌ ಪಿಚೈ ಹೇಳಿದ್ದರು.

ಅಮೆರಿಕದ ಹೊರಗಿನ ತನ್ನ ಅತಿದೊಡ್ಡ ಎಐ ಕೇಂದ್ರವಾದ ವಿಶಾಖಪಟ್ಟಣಂನಲ್ಲಿ ದೈತ್ಯ ಡೇಟಾ ಸೆಂಟರ್ ಮತ್ತು ಕೃತಕ ಬುದ್ಧಿಮತ್ತೆ ನೆಲೆಗಾಗಿ ಗೂಗಲ್ ಅದಾನಿ ಗ್ರೂಪ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 15 ಬಿಲಿಯನ್ ಡಾಲರ್‌(1.3 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ ಹೇಳಿದ್ದರು.

Tags:    

Similar News