Tiger Death | ಅಂಬ್ಲಿಗೊಳ್ಳ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿ ಸಾವು!

Update: 2025-02-26 13:04 GMT

ಶಿವಮೊಗ್ಗ ಜಿಲ್ಲೆಯ ಅಂಬ್ಲಿಗೊಳ್ಳ ಜಲಾಶಯದ ಹಿನ್ನೀರಿನಲ್ಲಿ ಭಾರೀ ಗಾತ್ರದ ಹುಲಿಯೊಂದು ನಿಗೂಢ ಸಾವು ಕಂಡ ಬೆನ್ನಲ್ಲೇ ಇದೀಗ ಜಿಲ್ಲೆಯ ತ್ಯಾವರೇಕೊಪ್ಪ ಹುಲಿ-ಸಿಂಹ ಧಾಮದಲ್ಲಿ ಹುಲಿಯ ಸಾವೊಂದು ವರದಿಯಾಗಿದೆ.

ಕೆಲವು ದಿನಗಳ ಹಿಂದೆ ಸಾಗರ ತಾಲೂಕಿನ ಅಂಬ್ಲಿಗೊಳ್ಳ ಜಲಾಶಯದ ಹಿನ್ನೀರಿನಲ್ಲಿ ಗಂಡು ಹುಲಿಯೊಂದು ಸಾವು ಕಂಡಿತ್ತು. ಮಾಹಿತಿ ತಿಳಿದ ಬಳಿಕ ನೀರಿನಲ್ಲಿ ತೇಲುತ್ತಿದ್ದ ಹುಲಿಯ ಕಳೇಬರವನ್ನು ಇಲಾಖೆಯ ಅಧಿಕಾರಿಗಳು ದಡಕ್ಕೆ ತಂದು, ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಹುಲಿಯ ದೇಹದಲ್ಲಿ ಗುಂಡಿನ ಗುರುತು ಇದ್ದು, ಆ ಬಗ್ಗೆ ತನಿಖೆಯಾಗಬೇಕು ಎಂದು ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದರು. ಬಳಿಕ ಅರಣ್ಯ ಸಚಿವರ ಸೂಚನೆಯಂತೆ ಹುಲಿಯ ದೇಹದ ಭಾಗಗಳನ್ನು ಪರೀಕ್ಷೆಗಾಗಿ ಕಳಿಸಲಾಗಿತ್ತು.

ಆ ಪರೀಕ್ಷೆಯ ವರದಿ ಬರುವ ಮುನ್ನವೇ ಇಲಾಖೆ, ಒಂಭತ್ತು ವರ್ಷ ಪ್ರಾಯದ ಹುಲಿ ದೇಹವನ್ನು ಸುಟ್ಟುಹಾಕಿದ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿದೆ. ಈಗಾಗಲೇ ಪ್ರಕರಣದ ಕುರಿತು ಎನ್ಟಿಸಿಎ(ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ)ಗೂ ದೂರು ನೀಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಈ ನಡುವೆ, ಜಿಲ್ಲೆಯ ತ್ಯಾವರೇಕೊಪ್ಪ ಹುಲಿ- ಸಿಂಹ ಧಾಮದಲ್ಲಿ 17 ವರ್ಷದ ವಿಜಯ ಎಂಬ ಹುಲಿ ಸಾವು ಕಂಡಿದೆ. ಆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಂಹಧಾಮದ ಸಿಇಒ ಅಮರಾಕ್ಷರ, ಇದೇ ಸಫಾರಿಯಲ್ಲಿ ಜನಿಸಿದ್ದ ವಿಜಯ ಹುಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು. ಮಂಗಳವಾರ(ಫೆ.25) ಸಾವು ಕಂಡಿದೆ. ವನ್ಯಜೀವಿ ಕಾಯ್ದೆಯ ಪ್ರಕಾರ ಅದರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಿಂಹಧಾಮದ ಪ್ರವಾಸಿ ಆಕರ್ಷಣೆಯಾಗಿದ್ದ ಈ ವಿಜಯ ಹುಲಿಯ ಸಾವಿನಿಂದಾಗಿ ಸಿಂಹಧಾಮಕ್ಕೆ ಭಾರೀ ನಷ್ಟವಾಗಿದೆ. ಅದರ ಸಾವಿನಿಂದಾಗಿ ಇದೀಗ ಧಾಮದಲ್ಲಿ ಕೇವಲ ನಾಲ್ಕು ಹುಲಿಗಳು ಮಾತ್ರ ಉಳಿದಂತಾಗಿದೆ. ಉಳಿದಿರುವ ನಾಲ್ಕೂ ಹೆಣ್ಣು ಹುಲಿಗಳೇ ಆಗಿವೆ. 17 ವರ್ಷದ ದರ್ಶಿನಿ, 16 ವರ್ಷದ ಸೀತಾ, 12 ವರ್ಷದ ಪೂರ್ಣಿಮಾ ಹಾಗೂ ನಿವೇದಿತಾ ಹುಲಿಗಳು ಈಗ ಸಿಂಹಧಾಮದಲ್ಲಿ ಉಳಿದಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಜನವರಿ ಎರಡನೇ ವಾರ, ಕೂಡ ತ್ಯಾವರೆಕೊಪ್ಪ ಸಿಂಹಧಾಮದ ʼಅಂಜಾನಿʼ ಎಂಬ 17 ವರ್ಷದ ಹೆಣ್ಣು ಹುಲಿ ಸಾವು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Tags:    

Similar News