ರಾಜ್ಯಕ್ಕೆ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ ದೃಢ; ಚಿಂತಾಮಣಿಯಲ್ಲಿ 100 ಹಂದಿ ಸಾವು
ಹಂದಿಗಳ ಅಸಹಜ ಸಾವು ಹಿನ್ನೆಲೆಯಲ್ಲಿ ಭೋಪಾಲ್‌ನ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಯಲ್ಲಿ ಆಫ್ರಿಕನ್ ಹಂದಿ ಜ್ವರದ ಸೋಂಕು ದೃಢಪಟ್ಟಿದೆ.;
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ. ಗ್ರಾಮದ ಹಂದಿ ಸಾಕಾಣಿಕೆ ಕೇಂದ್ರದ ಹಂದಿಗಳಲ್ಲಿ ಈ ಸೋಂಕು ಪತ್ತೆಯಾಗಿ, ಈಗಾಗಲೇ 100 ಹಂದಿಗಳು ಮೃತಪಟ್ಟಿವೆ. ಯಾರ್ಕ್‌ಶೇರ್ ತಳಿಯ ಹಂದಿಗಳಲ್ಲಿ ಜ್ವರ ದೃಢಪಟ್ಟಿದ್ದು, ಹಂದಿ ಜ್ವರ ವ್ಯಾಪಿಸುವ ಆತಂಕ ಎದುರಾಗಿದೆ.
ಚಿಕ್ಕಬಳ್ಳಾಪುರದ ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ ಮಾತನಾಡಿ, "ಹಂದಿಗಳ ಅಸಹಜ ಸಾವು ಹಿನ್ನೆಲೆಯಲ್ಲಿ ಭೋಪಾಲ್‌ನ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಯಲ್ಲಿ ಆಫ್ರಿಕನ್ ಹಂದಿ ಜ್ವರದ ಸೋಂಕು ದೃಢಪಟ್ಟಿದೆ. ಸೋಂಕು ಹರಡುವುದನ್ನು ತಪ್ಪಿಸಲು ಹಂದಿಗಳ ಸಾಗಾಟ ಮತ್ತು ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ" ಎಂದು ಹೇಳಿದ್ದಾರೆ.
ಜನರಿಗೆ ಅಪಾಯವಿಲ್ಲ
ಆಫ್ರಿಕನ್ ಹಂದಿ ಜ್ವರ ಸೋಂಕು ಇರುವ ಹಂದಿಗಳಿಂದ ಮನುಷ್ಯರಿಗೆ ಯಾವುದೇ ರೋಗ ಹರಡುವುದಿಲ್ಲ. ಹಂದಿಗಳನ್ನು ಹೊಸಕೋಟೆ ಮೂಲಕ ನಾಗಲ್ಯಾಂಡ್‌ಗೆ ರವಾನಿಸಲಾಗುತ್ತಿತ್ತು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಂಗಪ್ಪ ತಿಳಿಸಿದ್ದಾರೆ.
ಆಫ್ರಿಕನ್ ಹಂದಿ ಜ್ವರವು ಒಂದು ಸಾಂಕ್ರಾಮಿಕ ರೋಗ. ದೇಶೀಯ ಮತ್ತು ಕಾಡು ಹಂದಿಗಳ ಮೂಲಕ ಹರಡಲಿದೆ. ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಅಥವಾ ಔಷಧ ಲಭ್ಯವಿಲ್ಲ. ಜ್ವರ ದೃಢಪಟ್ಟ ಸ್ಥಳದ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಹಂದಿಗಳನ್ನು ಕೊಲ್ಲಲಾಗುತ್ತದೆ ಎಂದು ಹೇಳಿದ್ದಾರೆ.