ಮರದ ಕೊಂಬೆ ಬಿದ್ದು ಯುವಕ ಗಾಯ: ಬಿಬಿಎಂಪಿ ಅಧಿಕಾರಿಗಳ ಅಮಾನತಿಗೆ ಆಮ್ ಆದ್ಮಿ ಪಕ್ಷದ ಆಗ್ರಹ
ಸರ್ಕಾರವು ಅಧಿಕಾರಿಗಳ ಉತ್ತರದಾಯಿತ್ವವನ್ನು ನಿಜಕ್ಕೂ ಪ್ರಶ್ನಿಸುವ ತಾಕತ್ತನ್ನು ಹೊಂದಿದ್ದಲ್ಲಿ ಕೂಡಲೇ ಈ ವಿಭಾಗದ ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.;
ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ
ಜಯನಗರದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಅಕ್ಷಯ್ ಅವರನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ತಮ್ಮ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೀತಾರಾಮ್ ಗುಂಡಪ್ಪ, ಈ ಘಟನೆಗೆ ನೇರವಾಗಿ ಕಾರಣವಾಗಿರುವ ಬಿಬಿಎಂಪಿಯ ಅರಣ್ಯ ವಿಭಾಗದ ಉನ್ನತ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದರು.
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ:
"ನಮ್ಮ ಪಕ್ಷದ ಬೆಂಗಳೂರಿನ ಕಾರ್ಯಕರ್ತರುಗಳು ಅನೇಕ ಬಾರಿ ಹಳೆಯ ಮರಗಳು ಹಾಗೂ ಒಣಗಿದ ಕೊಂಬೆಗಳನ್ನು ತೆಗೆಯಲು ಹಲವು ವರ್ಷಗಳಿಂದ ನಿರಂತರವಾಗಿ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ, ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ" ಎಂದು ಸೀತಾರಾಮ್ ಗುಂಡಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ಇವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಅಕ್ಷಯ್ ಅವರಂತಹ ನೂರಾರು ಬೆಂಗಳೂರಿನ ನಾಗರಿಕರುಗಳ ಪ್ರಾಣಕ್ಕೆ ಸಂಚಕಾರ ಬಂದಿದೆ. ಇಂತಹ ಅನೇಕ ದುರ್ಘಟನೆಗಳು ಪದೇಪದೇ ಸಂಭವಿಸಿದ್ದರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ" ಎಂದು ಅವರು ದೂರಿದರು.
ಕಠಿಣ ಕ್ರಮಕ್ಕೆ ಸೀತಾರಾಮ್ ಗುಂಡಪ್ಪ ಆಗ್ರಹ:
"ಸರ್ಕಾರವು ಅಧಿಕಾರಿಗಳ ಉತ್ತರದಾಯಿತ್ವವನ್ನು ನಿಜಕ್ಕೂ ಪ್ರಶ್ನಿಸುವ ತಾಕತ್ತನ್ನು ಹೊಂದಿದ್ದಲ್ಲಿ, ಕೂಡಲೇ ಈ ವಿಭಾಗದ ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಠಿಣ ಕ್ರಮಕ್ಕೆ ಮುಂದಾಗಬೇಕು" ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸರವಣ, ಇರ್ತಾದ್, ವೀಣಾ ಸರಾವ್, ಮಣಿಕಂಠ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದು, ಬಿಬಿಎಂಪಿಯ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.