ರಾಹುಲ್ ಗಾಂಧಿ ಮತಕಳವಿನ ಆರೋಪ| ಚುನಾವಣಾ ಆಯೋಗದ ವಿರುದ್ಧ ಆಮ್ ಆದ್ಮಿಯ ಅಶೋಕ್ ಮೃತ್ಯುಂಜಯ ವಾಗ್ದಾಳಿ
ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಅವರು ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ಅಗತ್ಯ ಎಂದು ಅಶೋಕ್ ಮೃತ್ಯುಂಜಯ ಒತ್ತಾಯಿಸಿದ್ದಾರೆ.;
ಆಮ್ ಆದ್ಮಿ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮಾಡಿರುವ ಮತಕಳವಿನ ಆರೋಪದ ಕುರಿತು ಚುನಾವಣಾ ಆಯೋಗವು ಸ್ಪಷ್ಟನೆ ನೀಡುವ ಬದಲು ರಾಜಕೀಯ ಪಕ್ಷಗಳಂತೆ ಪ್ರತಿಕ್ರಿಯಿಸುತ್ತಿರುವುದು ಅಸಂವಿಧಾನಿಕ ಎಂದು ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಗಾಗಿ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ಆಯೋಗ ರಚಿಸಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅಶೋಕ್ ಮೃತ್ಯುಂಜಯ,``ಇತ್ತೀಚಿನ ವರ್ಷಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳಲು ಈ ರೀತಿ ರಾಜಕೀಯ ಪ್ರೇರಿತ ಪತ್ರಿಕಾಗೋಷ್ಠಿಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ?" ಎಂದು ಪ್ರಶ್ನಿಸಿದ್ದಾರೆ.
"ಯುವ ಪೀಳಿಗೆಗೆ ಸಂವಿಧಾನ ಮತ್ತು ಮತದಾನ ಪ್ರಕ್ರಿಯೆಗಳಲ್ಲಿನ ನಂಬಿಕೆ ಕಳೆದುಕೊಳ್ಳುವ ಮುನ್ನ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ರೀತಿಯ ರಾಜಕೀಯ ಆರೋಪ-ಪ್ರತ್ಯಾರೋಪಗಳು ಸರಿಯಲ್ಲ'' ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಅವರು ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ಅಗತ್ಯ ಎಂದು ಅಶೋಕ್ ಮೃತ್ಯುಂಜಯ ಒತ್ತಾಯಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗಳ ಪಾವಿತ್ರ್ಯವನ್ನು ಕಾಪಾಡಲು ಈ ರೀತಿಯ ಕ್ರಮಗಳು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.