ಬೆಳಗಾವಿ ಪ್ರಕರಣ | ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ

ವೇಶ್ಯಾವಾಟಿಕೆಯ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಿ ಹೇಯವಾಗಿ ವರ್ತಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ವಡ್ಡರವಾಡಿಯಲ್ಲಿ ನಡೆದಿದೆ.

Update: 2024-11-16 06:48 GMT
ಬೆಳಗಾವಿಯಲ್ಲಿ ಮಹಿಳೆಯ ಬಟ್ಟೆ ಹರಿದು ದೌರ್ಜನ್ಯ ಎಸಗಲಾಗಿದೆ.
Click the Play button to listen to article

ವೇಶ್ಯಾವಾಟಿಕೆಯ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಿದ ಅಮಾನುಷ ಘಟನೆ ಬೆಳಗಾವಿ ಜಿಲ್ಲೆಯ ವಡ್ಡರವಾಡಿಯಲ್ಲಿ ನಡೆದಿದೆ.

ನೆರೆ ಮನೆಯವರೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಕೃತ್ಯದ ವಿಡಿಯೋ ಮೊಬೈಲ್​ ಫೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ವಡ್ಡರವಾಡಿಯ ಮನೆಯೊಂದರಲ್ಲಿ ಬಾಲಕಿಯೊಬ್ಬಳ ಜತೆ ನಾಲ್ವರು ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲೇ ಪಕ್ಕದಲ್ಲಿ ವಾಸವಿರುವ ಮತ್ತೊಂದು ಕುಟುಂಬದವರು, ಮಹಿಳೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ. 

ಸಂಬಂಧ ಇಲ್ಲದವರೆಲ್ಲಾ ಆ ಮಹಿಳೆಯರ ಮನೆಗೆ ಬಂದು ಹೋಗುತ್ತಾರೆ. ಮಹಿಳೆಯರು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನೆರೆ ಮನೆಯವರು ತಾಯಿ-ಮಗಳನ್ನು ಮನೆ ಬಿಡಿಸಲು ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಲಾಗಿದೆ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮಹಿಳೆ ದೂರು ನೀಡಲು ಸಮೀಪದ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, 2 ದಿನ ಪೊಲೀಸ್ ಠಾಣೆಗೆ ಅಲೆದರೂ ದೂರು ಸ್ವೀಕರಿಸಲು ನಿರಾಕರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಮಹಿಳೆ, ‘ಜೀವ ಭಯ ಇದೆ, ರಕ್ಷಣೆ ಕೊಡಿ’ ಎಂದು ಬೆಳಗಾವಿ ಕಮಿಷನರ್​ಗೆ ದೂರು ನೀಡಿದ್ದರು. ನಂತರ ಇದೀಗ ಕಮಿಷನರ್​ ಸೂಚನೆ ಮೇರೆಗೆ ಶುಕ್ರವಾರ ರಾತ್ರಿ ಮೂವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಬಿಎನ್​ಎಸ್ ಕಾಯ್ದೆಯ ಸೆಕ್ಷನ್ 115(2), 3(5), 331, 352 ಹಾಗೂ 74 ರ ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಕಳೆದ ವರ್ಷ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರ ಪುತ್ರ ಯುವತಿಯೊಬ್ಬಳನ್ನು ಪ್ರೇಮಿಸಿ, ಆಕೆಯ ಜೊತೆಗೆ ಹೋಗಿದ್ದಕ್ಕೆ ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿತ್ತು. ಈ ಘಟನೆ  ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.

Tags:    

Similar News