ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಹೊತ್ತಲ್ಲೇ ರಾಮನಗರ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಮಹಿಳೆಯೊಬ್ಬರ ಜತೆಗೆ ವಾಟ್ಸ್ ಆಪ್ ಕಾಲ್ ನಲ್ಲಿ ಮಾತನಾಡಿರುವ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸದ್ಯ ರಾಮನಗರದಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಪದಾಧಿಕಾರಿ ಎನ್ನಲಾದ ಮಹಿಳೆಯೊಬ್ಬರ ಜತೆಗೆ ಇಕ್ಬಾಲ್ ಹುಸೇನ್ ಅವರು ವಿಡಿಯೋ ಕಾಲ್‌ನಲ್ಲಿ 2 ನಿಮಿಷ 27 ಸೆಕೆಂಡ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವಿಡಿಯೋವನ್ನು ಸೀನ್ ರೆಕಾರ್ಡರ್ ಮೂಲಕ ರೆಕಾರ್ಡ್ ಮಾಡಲಾಗಿದ್ದು, ಸಂಭಾಷಣೆ ಕೇಳಿಸುವುದಿಲ್ಲ.
ಹಾಸನ ಸಂಸದ ಪುಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಮಾಡಿ ಬಿಜೆಪಿ – ಜೆಡಿಎಸ್ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿರುವ ನಡುವೆಯೇ, ಈ ವಿಡಿಯೋ ಬಹಿರಂಗವಾಗಿದೆ. ಅಲ್ಲದೆ, ವಿಡಿಯೋದಲ್ಲಿ ಇರುವ ಮಹಿಳೆ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಹಿರಿಯ ನಾಯಕರೊಟ್ಟಿಗೆ ಫೋಟೋ ತೆಗೆಸಿಕೊಂಡಿರುವುದು ಸಹ ಚರ್ಚೆಗೆ ಕಾರಣವಾಗಿದೆ. ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
ವಿಡಿಯೋ ತನ್ನದೇ ಎಂದು ಒಪ್ಪಿಕೊಂಡ ಶಾಸಕ
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಇಕ್ಬಾಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಯಾರದೋ ಮೇಲಿನ ಕೋಪವನ್ನು ತೀರಿಸಿಕೊಳ್ಳಲು ನನ್ನನ್ನು ಸಿಲುಕಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.
ʻʻಸಮಸ್ಯೆಗಳನ್ನು ಹೇಳಿಕೊಳ್ಳಲು ಹಲವಾರು ಮಂದಿ ಕರೆ ಮಾಡುತ್ತಾರೆ. ವಿಡಿಯೋ ಕಾಲ್ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಈ ಕರೆ ಸುಮಾರು ಒಂದೂವರೆ ವರ್ಷ ಹಿಂದಿನದು. ಹೀಗೆ ಕಾಲ್ ರೆಕಾರ್ಡ್ ಮಾಡಿಕೊಂಡು ಈಗ ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆʼʼ ಎಂದಿದ್ದಾರೆ.
ʻʻನಾನು ಗೆದ್ದಿರುವುದಕ್ಕೆ ಎದುರಾಳಿಗಳು ಈ ರೀತಿಯ ವಿಡಿಯೊ ಹರಿಬಿಟ್ಟಿದ್ದಾರೆ. ಇಂತಹವೆಲ್ಲಾ ಬರುತ್ತಿರುತ್ತವೆ. ಅದರಲ್ಲಿರುವ ಸತ್ಯಾಂಶವೇನು ಎಂದು ನೋಡುವೆ. ಪೊಲೀಸ್ ದೂರು ಸೇರಿದಂತೆ ಕಾನೂನು ಕ್ರಮ ಕುರಿತು ಇನ್ನೂ ನಿರ್ಧರಿಸಿಲ್ಲʼʼ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.