Karnataka Congress | ಕುತೂಹಲ ಘಟ್ಟ ತಲುಪಿದ ನಾಯಕತ್ವ ಬದಲಾವಣೆ ಚರ್ಚೆ; ಸಚಿವರಿಂದ ದೆಹಲಿ ಯಾತ್ರೆ
ಪರಿಶಿಷ್ಟ ಸಮುದಾಯದ ಸಚಿವರ ದೆಹಲಿ ಪ್ರಯಾಣ,ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂಬ ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆ ಹಾಗೂ ಅಧಿಕಾರಕ್ಕಾಗಿ ʼಮ್ಯೂಸಿಕಲ್ ಚೇರ್ʼ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ಚರ್ಚೆ ಹುಟ್ಟು ಹಾಕಿದೆ.;
ಹೈಕಮಾಂಡ್ ಸೂಚನೆ ಹೊರತಾಗಿಯೂ ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಿಂತಿಲ್ಲ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿತ್ತು. ಆದಾಗ್ಯೂ, ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವದ ಬದಲಾವಣೆ ಕೂಗು ಬೇರೆ ಬೇರೆ ರೂಪದಲ್ಲಿ ಮುನ್ನೆಲೆ ಕಾಯ್ದುಕೊಂಡಿದೆ.
ಪರಿಶಿಷ್ಟ ಸಮುದಾಯದ ಸಚಿವರ ದೆಹಲಿ ಪ್ರಯಾಣ,ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂಬ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಹಾಗೂ ಇದಕ್ಕೆ ಪೂರಕವಾಗುವಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನುಡಿದಿರುವ ಭವಿಷ್ಯ ಚರ್ಚೆ ಹುಟ್ಟು ಹಾಕಿದೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇದೇ ವಾರದಲ್ಲಿ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಇದೇ ಬೆನ್ನಲ್ಲೇ ಪರಮೇಶ್ವರ್ ಕೂಡ ಇಲಾಖೆ ಕೆಲಸದ ನೆಪದಲ್ಲಿ ದೆಹಲಿಗೆ ತೆರಳುವುದಾಗಿ ಹೇಳಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಏರ್ಪಾಡು ಮಾಡಿದ್ದ ಡಿನ್ನರ್ ಸಭೆ ಹೈಕಮಾಂಡ್ ಸೂಚನೆ ಮೇರೆಗೆ ರದ್ದಾಗಿತ್ತು. ಡಿನ್ನರ್ ಸಭೆ ರದ್ದಾಗಲು ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ನಾಯಕರು ವಾಗ್ದಾಳಿ ನಡೆಸಿದ್ದರು. ಇದಲ್ಲದೇ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ವಿರುದ್ಧವೂ ಸಿಎಂ ಸಿದ್ದರಾಮಯ್ಯ ಬಣದ ಸಚಿವರು, ಶಾಸಕರು ಅಸಮಾಧಾನ ಹೊರಹಾಕಿದ್ದರು.
ಹೈಕಮಾಂಡ್‌ಗೆ ದೂರು
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಡಿ.ಕೆ.ಶಿವಕುಮಾರ್ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಕೆಲ ಸಚಿವರು ಹಾಗೂ ಶಾಸಕರು ಸಿಎಂ ಸಿದ್ದರಾಮಯ್ಯ ಬಳಿ ಅಸಮಾಧಾನ ತೋಡಿಕೊಂಡಿದ್ದರು. ಅಲ್ಲದೇ ಈ ಸಂಬಂಧ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದ್ದರು. ಈಗ ದೆಹಲಿಗೆ ತೆರಳಲು ಸಜ್ಜಾಗಿರುವ ಮೂವರು ಸಚಿವರು ಹೈಕಮಾಂಡ್ ಬಳಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ, ಶಾಸಕರಲ್ಲಿರುವ ಅಸಮಾಧಾನ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಬದಲಾವಣೆಗೆ ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಲ್ಲದ ಸಿಎಂ ಕುರ್ಚಿಯ ಚರ್ಚೆ
ಸಿಎಂ ಬದಲಾವಣೆ ವಿಚಾರವಾಗಿ ಮಾಗಡಿ ಶಾಸಕ ಬಾಲಕೃಷ್ಣ ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಿರುವುದು ರಾಜ್ಯ ನಾಯಕರಿಗೆ ತಲೆ ನೋವಾಗಿ ಪರಿಗಣಿಸಿವೆ. ಸಂಪುಟ ಪುನಾರಚನೆ ವೇಳೆ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಡಿ.ಕೆ. ಶಿವಕುಮಾರ್ ಒತ್ತಡ ಹೇರುತ್ತಿರುವ ಪರಿಣಾಮ ಸಿಎಂ ಸ್ಥಾನದ ಕುರಿತು ಆಗಾಗ್ಗೆ ಪ್ರಸ್ತಾಪಿಸುತ್ತಿದ್ದಾರೆ ಎನ್ನಲಾಗಿದೆ.
ಭಾನುವಾರ(ಫೆ.2) ರಂದು ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅವರು ‘ಡಿಕೆ ಮುಂದಿನ ಸಿಎಂ’ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಕುತೂಹಲ ಮೂಡಿಸಿದ ಅಶೋಕ್ ಹೇಳಿಕೆ
ನ.15 ಹಾಗೂ 16 ರಂದು ಕಾಂಗ್ರೆಸ್ ಪಕ್ಷದಲ್ಲಿ ಮ್ಯೂಸಿಕಲ್ ಚೇರ್ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಅಧಿಕಾರ ಕಿತ್ತುಕೊಳ್ಳಲಾಗುತ್ತದೆ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಅಶೋಕ್ ಅವರ ಈ ಹೇಳಿಕೆ ಅಚ್ಚರಿಗೂ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪೈಫೋಟಿ ನಡೆದಿತ್ತು. ಆಗ ವರಿಷ್ಠರು ಅಧಿಕಾರ ಹಂಚಿಕೆ ಕುರಿತು ಪ್ರಸ್ತಾಪಿಸಿದ್ದರು. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ತಲಾ ಎರಡೂವರೆ ವರ್ಷ ಸಿಎಂ ಹುದ್ದೆ ನಿಭಾಯಿಸುವ ಕುರಿತು ತೀರ್ಮಾನಕ್ಕೆ ಬರಲಾಗಿತ್ತು. ಆ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡಿದ್ದರು. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನವೆಂಬರ್ ತಿಂಗಳಿಗೆ ಎರಡೂವರೆ ವರ್ಷ ಪೂರ್ಣಗೊಳ್ಳಲಿದೆ. ಒಪ್ಪದಂದಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು. ಈ ಹಿನ್ನೆಲೆಯಲ್ಲಿ ಅಶೋಕ್ ನುಡಿದಿರುವ ಮ್ಯೂಸಿಕಲ್ ಚೇರ್ ಭವಿಷ್ಯ ಚರ್ಚೆಗೆ ಕಾರಣವಾಗಿದೆ,