ಉತ್ತರ ಕರ್ನಾಟಕಕ್ಕೆ ಕಚೇರಿಗಳ ಸ್ಥಳಾಂತರ: ಸರ್ಕಾರಿ ಆದೇಶಕ್ಕೆ ಕಿಮ್ಮತ್ತು ಕೊಡದ ಅಧಿಕಾರಿಶಾಹಿ?

ಇಷ್ಟೆಲ್ಲಾ ಆದೇಶಗಳ ಹೊರತಾಗಿಯೂ "ಸ್ಥಳಾಂತರಗೊಂಡ" ಕಚೇರಿಗಳು ಈಗಲೂ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಕಚೇರಿಗಳ ಸ್ಥಳಾಂತರಕ್ಕಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟಗಳು ನಡೆಯುತ್ತಿವೆ.;

By :  Anil Basur
Update: 2025-03-24 02:30 GMT
ಪ್ರಾದೇಶಿಕ ಸಮತೋಲನ ಕಾಪಾಡಲು ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರ ಹೊರಡಿಸಿದ್ದ ಅದೇಶ

ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ನಿಟ್ಟಿನಲ್ಲಿ ಜೆಡಿಎಸ್-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಹತ್ವದ ತೀರ್ಮಾನ ತೆಗೆದುಕೊಂಡು 9 ಇಲಾಖೆಗಳ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿದ್ದರು. ಸರ್ಕಾರದ ತೀರ್ಮಾನವನ್ನು  ಹೈಕೋರ್ಟ್​ ಕೂಡಾ ಎತ್ತಿಹಿಡಿದಿತ್ತು.

ಆದರೆ, ಇಷ್ಟೆಲ್ಲಾ ಆದೇಶಗಳ ಹೊರತಾಗಿಯೂ "ಸ್ಥಳಾಂತರಗೊಂಡ" ಕಚೇರಿಗಳು ಈಗಲೂ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಕಚೇರಿಗಳ ಸ್ಥಳಾಂತರಕ್ಕಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟಗಳು ನಡೆಯುತ್ತಿವೆ. ಧರಣಿ ಸತ್ಯಾಗ್ರಹ, ಪಾದಯಾತ್ರೆ ಜೊತೆಗೆ ಕಾನೂನು ಹೋರಾಟ ಕೂಡ ನಡೆದಿವೆ. ಆದರೆ ಅಧಿಕಾರಿಗಳು ಮಾತ್ರ ಬೆಂಗಳೂರಿನಿಂದ ಹೊರಗೆ ಹೋಗಲು ಮುಂದಾಗುತ್ತಿಲ್ಲ!

ಪ್ರಮುಖವಾಗಿ 9 ಕಚೇರಿಗಳನ್ನು ಬೆಂಗಳೂರಿನಿಂದ ಹೊರೆಗೆ ಕಾರ್ಯನಿರ್ವಹಿಸುವಂತೆ ಆಗಿನ ಸಿಎಂ ಕುಮಾರಸ್ವಾಮಿ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು. ನಂತರ 2019ರ ಜನವರಿ 10 ರಂದು ಗೆಜೆಟ್​ನಲ್ಲಿ ಪ್ರಕಟಿಸುವ ಮೂಲಕ ಅಧಿಕೃತವಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಅವುಗಳಲ್ಲಿ ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತದಲ್ಲಿನ ಎರಡು ಉಪಲೋಕಾಯುಕ್ತ ಕಚೇರಿಗಳ ಪೈಕಿ ಒಂದನ್ನು ಧಾರವಾಡಕ್ಕೆ ಸ್ಥಳಾಂತರ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿತ್ತು. ಉಳಿದ 8 ಕಚೇರಿಗಳ ಸ್ಥಳಾಂತರಕ್ಕೆ ಆದೇಶ ಮಾಡಿತ್ತು. ಸರ್ಕಾರ ಆದೇಶ ಮಾಡಿ 6 ವರ್ಷಗಳ ಮೇಲಾಗಿದೆ. ಆದರೆ ಕಚೇರಿಗಳು ಮಾತ್ರ ಸ್ಥಳಾಂತರವಾಗಿಲ್ಲ ಎಂಬುದು ಅಧಿಕಾರಶಾಹಿ ವ್ಯವಸ್ಥೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತಿದೆ.

ಯಾವ ಕಚೇರಿಗಳು ಸ್ಥಳಾಂತರವಾಬೇಕಿತ್ತು?

ಪ್ರಮುಖವಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಕಚೇರಿಯನ್ನು ವಿಜಯಪುರ ಜಿಲ್ಲೆಯ ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ (KNNL)ದ ಕಚೇರಿಯನ್ನು ದಾವಣಗೆರೆಗೆ, ಜವಳಿ ನಿಗಮದ ಕಚೇರಿ ಹಾಗೂ ಸಕ್ಕರೆ ನಿರ್ದೇಶಕರು ಹಾಗೂ ಕಬ್ಬು ಆಯುಕ್ತರ ಕಚೇರಿಯನ್ನು ಬೆಳಗಾವಿ ಸುವರ್ಣಸೌಧಕ್ಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ವಿಭಜಿಸಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕಚೇರಿ ಸ್ಥಾಪಸಿ ಅದನ್ನು ಹುಬ್ಬಳ್ಳಿಗೆ, ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರುಗಳ ಪೈಕಿ ಒಂದನ್ನು ಬೆಳಗಾವಿಗೆ, ಮತ್ತೊಂದನ್ನು ಕಲಬುರಗಿಗೆ, ಕರ್ನಾಟಕ ಲೋಕಾಯುಕ್ತದಲ್ಲಿರುವ ಎರಡು ಕಚೇರಿಗಳ ಪೈಕಿ ಒಂದು ಉಪಲೋಕಾಯುಕ್ತ ಕಚೇರಿಯನ್ನು ಧಾರವಾಡಕ್ಕೆ ಹಾಗೂ ಮೈಸೂರಿನಲ್ಲಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕರ ಕಚೇರಿಯನ್ನು ಹಂಪಿಗೆ ಸ್ಥಳಾಂತರ ಮಾಡಲು ಆದೇಶ ಹೊರಡಿಸಲಾಗಿತ್ತು. ಆದರೆ ಆಡಳಿತಾತ್ಮಕ ವಿಷಯದ ಹಿನ್ನಲೆಯಲ್ಲಿ ಉಪಲೋಕಾಯುಕ್ತ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿತ್ತು. ಆದರೆ ಉಳಿದ 8 ಕಚೇರಿಗಳು 2019ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಸೂಚಿಸಿದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರ ಆದೇಶ ಮಾಡಿತ್ತು.

 

ಕೆಬಿಜಿಎನ್ಎಲ್ ಕಚೇರಿ​ ಸ್ಥಳಾಂತರಕ್ಕೆ ಕಾನೂನು ಹೋರಾಟ

ಜಲಸಂಪನ್ಮೂಲ ಇಲಾಖೆಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜಿಎನ್​ಎಲ್​) ದ ಕಚೇರಿ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಚೇರಿ ಸ್ಥಳಾಂತರಕ್ಕಾಗಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಹಲವು ಹೋರಾಟಗಳು ನಡೆದಿವೆ. ಜೊತೆಗೆ ಜಲಸಂಪನ್ಮೂಲ ಇಲಾಖೆಯು ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯನ್ನು ಸ್ಥಳಾಂತರಿಸಲು 3 ಬಾರಿ ಆದೇಶ ಹೊರಡಿಸಿದ್ದರೂ ಕೆಬಿಜೆಎನ್​ಎಲ್​ ಕಚೇರಿ ಮಾತ್ರ ಆಲಮಟ್ಟಿಗೆ ಸ್ಥಳಾಂತರವಾಗಿಲ್ಲ.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹಿನ್ನೆಲೆಯಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ಮಾಡಿದ್ದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಹಲವು ಸಬೂಬುಗಳನ್ನು ಕೆಬಿಜಿಎನ್​ಎಲ್ ಅಧಿಕಾರಿಗಳು ಕೊಡುತ್ತಲೇ ಹೋಗುತ್ತಿದ್ದಾರೆ. ಅದಕ್ಕೆ ಇಲಾಖೆ ಸಚಿವರ ಸಾಥ್‌ ಕೂಡಾ ಇದೆಎನ್ನುತ್ತಾರೆ ಹೋರಾಟಗಾರರು.

ಆದೇಶದ ಹೊರತಾಗಿಯೂ ಸ್ಥಳಾಂತರವಾಗದ ಕೆಬಿಜಿಎನ್​ಎಲ್​ ಕಚೇರಿ 

ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮದ ಕಚೇರಿಗಳು 2021ರವರೆಗೆ ಸ್ಥಳಾಂತರ  ಆಗದಿದ್ದನ್ನು ಪ್ರಶ್ನಿಸಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷ ಯಾಸಿನ್ ಎನ್ ಜವಳಿ ಹೈಕೋರ್ಟ್​ನಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2021ರಲ್ಲಿ ಸಲ್ಲಿಸಿದ್ದರು. ಅರ್ಜಿ ಆಧರಿಸಿ ಹೈಕೋರ್ಟ್​ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ತಕ್ಷಣ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸುವಂತೆ 2021ರ ಅಕ್ಟೋಬರ್ 30 ರಂದು ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ  ಅವರು, ಕೆಬಿಜಿಎನ್​ಎಲ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಿಗೆ ಸೂಚಿಸಿದ್ದರು.

ಆದರೆ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ 2021ರ ನವೆಂಬರ್ 24ರಂದು ಪತ್ರ ಬರೆದಿದ್ದ ಕೆಬಿಜಿಎನ್​ಎಲ್ ಎಂಡಿ, ಸಂಪೂರ್ಣವಾಗಿ ಕಚೇರಿ ಸ್ಥಳಾಂತರ ಆಡಳಿತಾತ್ಮಕ ದೃಷ್ಟಿಯಿಂದ ತೊಂದರೆಗಳಾಗುತ್ತವೆ. ಹೀಗಾಗಿ ಕನಿಷ್ಠ ಸಿಬ್ಬಂದಿಯನ್ನು ಬೆಂಗಳೂರಿನ ಕಚೇರಿಯಲ್ಲಿ ಇಟ್ಟುಕೊಂಡು ಉಳಿದ ಕಚೇರಿ ಸಿಬ್ಬಂದಿಯನ್ನು 4 ರಿಂದ 6 ವಾರಗಳಲ್ಲಿ ಸ್ಥಳಾಂತರಿಸುವುದಾಗಿ ತಿಳಿಸಿದ್ದರು.

ಆದರೆ ಪ್ರಸ್ತಾವನೆಯನ್ನು ನಿರಾಕರಿಸುವ ಜಲಸಂಪುನ್ಮೂಲ ಇಲಾಖೆ ತಕ್ಷಣ ಕಚೇರಿಯನ್ನು ಸ್ಥಳಾಂತರಿಸಬೇಕು ಎಂದು 2022ರ ಮೇ 12ರಂದು ತುರ್ತು ಪತ್ರ ಬರೆದು ಸೂಚಿಸಿದ್ದಾರೆ. ಜೊತೆಗೆ ಜನರ ಹಿತಾಸಕ್ತಿ ಕಾಪಾಡಲು ಒಂದು ವಾರದಲ್ಲಿ ಕಚೇರಿಯನ್ನು ಸ್ಥಳಾಂತರಿಸಿ ಅನುಪಾಲನಾ ವರದಿಯನ್ನು ಕೊಡಿ ಎಂದು ತಿಳಿಸಿದ್ದರು. ಜೊತೆಗೆ ಶೀಘ್ರ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸುತ್ತೇವೆ ಎಂದು ಜಲಸಂಪನ್ಮೂಲ ಇಲಾಖೆ ಹೈಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿತ್ತು. ಜೊತೆಗೆ 2022ರ ಜೂನ್ 6 ರಂದು ಕಚೇರಿ ಸ್ಥಳಾಂತರ ಮಾಡುವಂತೆ ಕೆಬಿಜಿಎನ್​ಎಲ್​ಗೆ ಸೂಚಿಸುತ್ತದೆ. ರಾಜ್ಯ ಸರ್ಕಾರ ಹೈಕೋರ್ಟ್​ಗೆ ಅಫಿಡವಿಟ್ ಕೊಟ್ಟು 2 ವರ್ಷಗಳ ಮೇಲಾಗಿದೆ. ಆದರೆ ಇನ್ನೂ ಕೂಡ ಕಚೇರಿ ಸ್ಥಳಾಂತರವಾಗಿಲ್ಲ.

 ಇಬ್ಬರೂ ವ್ಯವಸ್ಥಾಪಕ ನಿರ್ದೇಶಕರನ್ನು ವಜಾ ಮಾಡಬೇಕು

ಈ ಕುರಿತು ದ ಫಡೆರಲ್ ಕರ್ನಾಟಕದೊಂದಿಗೆ ಕಾನೂನು ಹೋರಾಟದ ಕುರಿತು ಮಾಹಿತಿ ಹಂಚಿಕೊಂಡಿರುವ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷ ಯಾಸಿನ್ ಎನ್ ಜವಳಿ, ಕೆಬಿಜಿಎನ್​ಎಲ್ ಕಚೇರಿ ಸ್ಥಳಾಂತರಕ್ಕೆ ಸರ್ಕಾರ ಆದೇಶ ಮಾಡಿದೆ. ಸ್ಥಳಾಂತರ ಮಾಡುವುದಾಗಿ ಹೈಕೋರ್ಟ್​ಗೆ ಸರ್ಕಾರ ಅಫಿಡವಿಟ್ ಕೊಟ್ಟಿದೆ. ಆದರೆ ಸರ್ಕಾರದಿಂದ ಯಾವುದೇ ಆದೇಶ ನಮಗೆ ಬಂದಿಲ್ಲ ಎಂದು ಆರ್​ಟಿಐ ಅಡಿ ಕೇಳಿದ ಮಾಹಿತಿಗೆ ಕೃಷ್ಣಾ ಭಾಗ್ಯ ಜನ ನಿಗಮ ಉತ್ತರ ಕೊಟ್ಟಿದೆ. ಕಾನೂನು ಬಾಹೀರವಾಗಿ ಕೆಬಿಜಿಎನ್​​ಎಲ್​ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರಿನಲ್ಲಿ ಇದ್ದಾರೆ. ಸರ್ಕಾರ ಆದೇಶ ಮಾಡಿದ ಬಳಿಕ ಕರ್ನಾಟಕ ನೀರಾವರಿ ನಿಗಮ ಹಾಗೂ ಕೆಬಿಜಿಎನ್​ಎಲ್​ಗೆ ಯಾವುದೇ ಅಧಿಕಾರವಿಲ್ಲ. ತಮ್ಮ ಅನಕೂಲಕ್ಕಾಗಿ ಬೆಂಗಳೂತರಿನಲ್ಲಿದ್ದಾರೆ. ಕೋರ್ಟ್​ ಹಾಗೂ ಸರ್ಕಾರದ ಆದೇಶ ಪಾಲನೆ ಮಾಡದ ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಭರಪೂರ ಬಾಡಿಗೆ ಕೊಡುತ್ತಿವೆ ನೀರಾವರಿ ನಿಗಮಗಳು

ಕರ್ನಾಟಕ ನೀರಾವರಿ ನಿಮಗದ ಕಚೇರಿ ಬೆಂಗಳೂರು ಕಾಫಿ ಬೋರ್ಡ್​ನಲ್ಲಿದ್ದು, ಪ್ರತಿ ತಿಂಗಳು 30 ಲಕ್ಷ ರೂ. ಬಾಡಿಗೆ ಕೊಡುತ್ತಿದೆ. ಸರ್ಕಾರ ಆದೇಶ ಮಾಡಿ ಈಗಾಗಲೇ 2 ವರ್ಷ ಕಳೆದಿವೆ. ಎರಡು ವರ್ಷಗಳಲ್ಲಿ ಸುಮಾರು 7.2 ಕೋಟಿ ರೂ.ಗಳನ್ನು ಬಾಡಿಗೆ ರೂಪದಲ್ಲಿ ನೀರಾವರಿ ನಿಗಮ ವ್ಯಯಿಸಿದೆ. ಸರ್ಕಾರದ ಆದೇಶದ ಬಳಿಕ 14 ಕೋಟಿ ರೂ. ಗಳನ್ನು ವ್ಯಯಿಸಿ ಆಲಮಟ್ಟಿಯಲ್ಲಿ ಸಚಿವರಿಗೆ, ಅಧಿಕಾರಿಗಳಿಗೆ ಅನುಕೂಲವಾಗುವಂತೆ ಐಬಿ (ಇನ್ಸೆಪೆಕ್ಷನ್‌ ಬಂಗಲೆ) ನಿರ್ಮಿಸಿದ್ದಾರೆ. ಜೊತೆಗೆ 2.38 ಕೋಟಿ ರೂ. ವ್ಯಯಿಸಿ ಆಲಮಟ್ಟಿಯಲ್ಲಿನ ಕೆಬಿಜಿಎನ್​ಎಲ್​ ಕಚೇರಿಯನ್ನು ನವೀಕರಿಸಲಾಗಿದೆ. ಆದರೆ ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಉತ್ತರ ಕರ್ನಾಟಕ ಭಾಗದ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಯಾಸಿನ್ ಜವಳಿ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆಬಿಜಿಎನ್​ಎಲ್​ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಲು ದ ಫಡೆರಲ್ ಪ್ರಯತ್ನಿಸಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಕನಸು ಕನಸಾಗಿಯೇ ಉಳಿದಿದೆ. ಅಲ್ಲಿಂದ ಬೆಂಗಳೂರು ಬಂದು ಅಲೆದಾಡುವ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.  ಕೆಬಿಜಿಎನ್‌ಎಲ್‌ ಒಂದು ಉದಾಹರಣೆ ಅಷ್ಟೇ!

Tags:    

Similar News