Heavy Rain| ಕರ್ನಾಟಕದಲ್ಲಿ ವರುಣನ ಅಬ್ಬರ; ಒಂದೇ ದಿನ 8 ಮಂದಿ ಬಲಿ
ಕೊಪ್ಪಳದಲ್ಲಿ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರು-1, ವಿಜಯಪುರದಲ್ಲೂ ಸಹ ಒಬ್ಬ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಗದಗನಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾರೆ.;
ರಾಜ್ಯದಲ್ಲಿ ಭಾರೀ ಮಳೆಯಾಗಿದೆ.
ರಾಜ್ಯದಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಗೆ 8 ಮಂದಿ ಬಲಿಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.
ಸಿಡಿಲಿಗೆ ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ತಲಾ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಗದಗನಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಮತ್ತೊಂದೆಡೆ ಗೋಕಾಕ್ನಲ್ಲಿ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಭಾರೀ ಮಳೆಯಿಂದಾಗಿ ಗೋಕಾಕ್ ಪಟ್ಟಣದ ಚರಂಡಿಗಳು ತುಂಬಿ ಹರಿಯುತ್ತಿದ್ದವು. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕಾಲು ಜಾರಿ ಬಿದ್ದಿದ್ದು, ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಚರಂಡಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಕಾಶಪ್ಪ ಶಿರಟ್ಟಿಗಾಗಿ ಪೊಲೀಸರು, ನಗರಸಭೆ ಸಿಬ್ಬಂದಿ ಶೋಧ ನಡೆಸಿದ್ದಾರೆ.
ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾರೆ. ಶರಣಪ್ಪ ಹಡಗಲಿ (39) ಕೊಚ್ಚಿಕೊಂಡು ಹೋದವರು. ಶರಣಪ್ಪ ಪತ್ನಿಯ ತವರು ಮನೆ ಬೆನಕೊಪ್ಪಕ್ಕೆ ಹೊರಟ್ಟಿದ್ದರು. ಸಂಜೆ ಸುರಿದ ಭಾರಿ ಮಳೆಗೆ ತುಂಬಿ ಹಳ್ಳ ಹರಿಯುತ್ತಿತ್ತು. ಹಳ್ಳದಲ್ಲೇ ಬೈಕ್ ಓಡಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಗದಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (47) ಮೃತ ದುರ್ದೈವಿ. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಗೆದ್ಲೆಹಳ್ಳಿಗ್ರಾಮದ ಲೋಕೇಶಪ್ಪ (65) ಮೃತ ದುರ್ದೈವಿ. ಕುರಿ ಮೇಯಿಸಲು ತೆರಳಿದ್ದಾಗ ಘಟನೆ ನಡೆದಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿನಲ್ಲೂ ಮಂಗಳವಾರ ಸಂಜೆ ಭಾರೀ ಮಳೆಯಾಗಿದೆ. ಮಳೆ ಅವಾಂತರದಿಂದ ಬುಧವಾರ ಸಂಚಾರ ದಟ್ಟಣೆ ಬುಧವಾರ ಹೆಚ್ಚಾಗಿತ್ತು. ಹೂಡಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತ ಪರಿಣಾಮ ಸವಾರರು ಪರದಾಡುವಂತಾಯಿತು.
ಬೆಂಗಳೂರಿನ ಬಿಬಿಎಂಪಿಯ 8 ವಲಯಗಳಲ್ಲಿ 27ಕ್ಕೂ ಹೆಚ್ಚು ಮರ ಹಾಗೂ 94 ಕೊಂಬೆಗಳು ಮುರಿದು ಬಿದ್ದಿವೆ. ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಮರಗಳು ಬಿದ್ದಿರುವ ವರದಿಯಾಗಿದೆ.