7th pay commission | ಸಂಪುಟ ಸಭೆಯಲ್ಲಿ ಏನಾಯ್ತು? ನಿಜವಾಗುವುದೇ ನೌಕರರ ನಿರೀಕ್ಷೆ?

ರಾಜ್ಯದ ಹನ್ನೆರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಗುರುವಾರ(ಜು.4)ದ ರಾಜ್ಯ ಸಂಪುಟ ಸಭೆಯ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದರು. ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಸಂಪುಟ ಸಭೆ ಕೊಟ್ಟ ಸಂದೇಶವೇನು?;

Update: 2024-07-04 13:28 GMT

ರಾಜ್ಯದ ಹನ್ನೆರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಗುರುವಾರ(ಜು.4)ದ ರಾಜ್ಯ ಸಂಪುಟ ಸಭೆಯ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದರು. ಆದರೆ, ಅವರ ಬಹುದಿನಗಳ ಬೇಡಿಕೆಯ ಏಳನೇ ವೇತನ ಆಯೋಗದ ಶಿಫಾರಸು ಜಾರಿಯ ಕುರಿತು ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆಯದೇ ಇರುವ ಹಿನ್ನೆಲೆಯಲ್ಲಿ ಆ ನಿರೀಕ್ಷೆಗಳು ಮತ್ತೆ ಹುಸಿಯಾಗಿವೆ.

ವೇತನ ಆಯೋಗ ವರದಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಅದರ ಶಿಫಾರಸುಗಳನ್ನು ಜಾರಿಗೆ ತರದೇ ಇರುವ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಜೂನ್ ಅಂತ್ಯದೊಳಗೆ ಈ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳದೇ ಹೋದರೆ ನೌಕರರ ಮುಂದಿನ ಹೋರಾಟದ ಬಗ್ಗೆ ಯೋಚಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಕಳೆದ ವಾರ ಬಹಿರಂಗ ಹೇಳಿಕೆ ನೀಡಿದ್ದರು.

ಆ ಹಿನ್ನೆಲೆಯಲ್ಲಿ ಚುನಾವಣಾ ನೀತಿಸಂಹಿತೆಯ ಬಳಿಕ ಜೂನ್ ಮೂರನೇ ವಾರದ ಸಂಪುಟ ಸಭೆಯಲ್ಲೇ ವೇತನ ಆಯೋಗದ ಶಿಫಾರಸು ಜಾರಿಯ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಆ ಸಭೆಯಲ್ಲೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿರಲಿಲ್ಲ. ಇದೀಗ ಗುರುವಾರದ ಸಂಪುಟ ಸಭೆಯಲ್ಲಿಯೂ ಏಳನೇ ವೇತನ ಆಯೋಗದ ಕುರಿತು ಚರ್ಚೆಯೇ ಆಗಿಲ್ಲ.

ಆ ಹಿನ್ನೆಲೆಯಲ್ಲಿ ನೌಕರರ ಸಂಘಟನೆಗಳ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ವೇತನ ಆಯೋಗದ ಹಿನ್ನೆಲೆ

ಕಳೆದ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಮುನ್ನ ಏಳನೇ ವೇತನ ಆಯೋಗದ ವರದಿಯನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನೀತಿ ಸಂಹಿತೆ ಮುಗಿಯುತ್ತಲೇ ವರದಿ ಜಾರಿಗೊಳಿಸುವ ಪರೋಕ್ಷ ಸಂದೇಶ ನೀಡಿತ್ತು.

ಆದರೆ, ಚುನಾವಣಾ ನೀತಿ ಸಂಹಿತೆಯ ನೆಪ ಅಡ್ಡಬಂದ ಹಿನ್ನೆಲೆಯಲ್ಲಿ ಚುನಾವಣೆಯ ಬಳಿಕ ಮೊದಲ ಸಂಪುಟ ಸಭೆಯಲ್ಲಿಯೇ ಆ ಕುರಿತು ನಿರ್ಣಯ ಕೈಗೊಳ್ಳುವ ನಿರೀಕ್ಷೆ ನೌಕರರದ್ದಾಗಿತ್ತು.

ಆ ನಿರೀಕ್ಷೆಯಲ್ಲಿಯೇ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿತ್ತು. ಆ ಸಂದರ್ಭದಲ್ಲಿ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ, ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು.

ಆ ಬಳಿಕ ಸಿಎಂ, ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಈ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ್ದು, ಕೆಲವು ಸಚಿವರು ಶೇ.25ರಷ್ಟು ವೇತನ ಹೆಚ್ಚಳಕ್ಕೂ, ಮತ್ತೆ ಕೆಲವರು ಆಯೋಗದ ಶಿಫಾರಸಿನಂತೆ ಶೇ.27ರಷ್ಟು ಹೆಚ್ಚಳಕ್ಕೂ ಒಲವು ತೋರಿಸಿದ್ದಾರೆ ಎನ್ನಲಾಗಿತ್ತು. ಅಲ್ಲದೆ, ಸಿದ್ದರಾಮಯ್ಯ ಕೂಡ ಶೇ.27ರಷ್ಟು ವೇತನ ಹೆಚ್ಚಳದ ಮೂಲಕ ಮುಂಬರುವ ಜಿಲ್ಲಾ ಮತ್ತು ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಒಲವು ಗಳಿಸುವ ಲೆಕ್ಕಾಚಾರದಲ್ಲಿದ್ದಾರೆ ಎಂದೂ ಹೇಳಲಾಗಿತ್ತು.

ಆ ಹಿನ್ನೆಲೆಯಲ್ಲಿಯೇ ಗುರುವಾರದ ಸಚಿವ ಸಂಪುಟ ಸಭೆಯ ಮೇಲೆ ರಾಜ್ಯ ಸರ್ಕಾರಿ ನೌಕರರ ಕಣ್ಣು ನೆಟ್ಟಿದ್ದವು. ಸಂಪುಟ ಸಭೆಯ ಬಳಿಕ ಖುದ್ದು ಮುಖ್ಯಮಂತ್ರಿಗಳೇ ಪತ್ರಿಕಾಗೋಷ್ಠಿ ನಡೆಸಿ ವೇತನ ಆಯೋಗದ ಶಿಫಾರಸು ಜಾರಿಯ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ನೌಕರರು ನಿರೀಕ್ಷಿಸಿದ್ದರು.

ಆದರೆ, ಅಂತಹ ಯಾವುದೇ ಚರ್ಚೆಯೇ ನಡೆಯದೆ ಸಚಿವ ಸಂಪುಟ ಸಭೆ ಮುಕ್ತಾಯವಾಗಿದೆ. ಸಂಪುಟ ಸಭೆಯ ನಿರ್ಣಯಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಸಚಿವ ಎಚ್ ಕೆ ಪಾಟೀಲ್ ಅವರು ವೇತನ ಆಯೋಗದ ಕುರಿತ ಯಾವುದೇ ಚರ್ಚೆ ನಡೆದಿಲ್ಲ ಎನ್ನುವ ಮೂಲಕ ಎಲ್ಲಾ ನಿರೀಕ್ಷೆಗಳಿಗೆ ತೆರೆ ಎಳೆದಿದ್ದಾರೆ.

Tags:    

Similar News