The Federal Explainer | 7th Pay Commission: ವೇತನ ಹೆಚ್ಚಳ ಎಷ್ಟಾಯಿತು? ಯಾರಿಗೆಲ್ಲಾ ಲಾಭ?
ಏಳನೇ ವೇತನ ಆಯೋಗದ ಶಿಫಾರಸು ಜಾರಿಯಿಂದಾಗಿ ರಾಜ್ಯದ ಎಷ್ಟು ನೌಕರರಿಗೆ ಪ್ರಯೋಜನವಾಗಲಿದೆ? ಏನೆಲ್ಲಾ ಅನುಕೂಲತೆಗಳಿವೆ? ಸರ್ಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಪ್ರತಿಕ್ರಿಯೆ ಏನು? ವಿವರ ಇಲ್ಲಿದೆ..;
ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತರ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಏಳನೇ ವೇತನ ಆಯೋಗದ ಶಿಫಾರಸಿನಿಂದ ವೇತನ ಹೆಚ್ಚಳವನ್ನು ಜಾರಿ ಮಾಡಲು ಸಚಿವ ಸಂಪುಟ ನಿರ್ಧಾರ ಕೈಗೊಂಡ ಬೆನ್ನಲ್ಲೇ, ಸ್ವತಃ ಮುಖ್ಯಮಂತ್ರಿಗಳೇ ವಿಧಾನಸಭೆಯಲ್ಲಿ ಈ ವಿಷಯವನ್ನು ಘೋಷಿಸುವ ಮೂಲಕ ಹನ್ನೆರಡು ಲಕ್ಷ ನೌಕರರು ಮತ್ತು ನಿವೃತ್ತರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಎಂಟನೇ ವೇತನ ಆಯೋಗ ಜಾರಿಯ ತಯಾರಿಯಲ್ಲಿರುವಾಗ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿಯಾಗಿದೆ. ಐದಾರು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಜೀವನಮಟ್ಟ ದುಬಾರಿಯಾಗಿರುವುದು, ಸರಕು ಮತ್ತು ಸಾಮಗ್ರಿಗಳ ಬೆಲೆ ಹೆಚ್ಚಳ, ಶಿಕ್ಷಣ, ಆರೋಗ್ಯ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಕಾಲ ಕಾಲಕ್ಕೆ ನೌಕರರ ವೇತನ ಹೆಚ್ಚಳ ಮಾಡುವುದು ಸರ್ಕಾರಗಳು ರೂಢಿಸಿಕೊಂಡು ಬಂದಿರುವ ಕ್ರಮ. ಅಂತಹ ಕ್ರಮದ ಭಾಗವಾಗಿ ನಿಗದಿತ ಅವಧಿಗೆ ವೇತನ ಹೆಚ್ಚಳ ಮಾಡುವುದು ಸರ್ಕಾರಗಳಿಗೆ ಅನಿವಾರ್ಯ.
ಇದೀಗ ಸಿದ್ದರಾಮಯ್ಯ ಸರ್ಕಾರ ಕೂಡ, ಗ್ಯಾರಂಟಿ ಯೋಜನೆಗಳ ಹೊರೆ, ಕುಂಠಿತಗೊಂಡಿರುವ ಸರ್ಕಾರದ ಆದಾಯ, ಅಧಿಕವಾಗಿರುವ ಸರ್ಕಾರದ ಸಾಲದ ಮೇಲಿನ ಬಡ್ಡಿದರ, ಮುಂತಾದ ಹಲವು ಬಿಕ್ಕಟ್ಟು ಮತ್ತು ಸವಾಲುಗಳ ನಡುವೆಯೂ ತನ್ನ ನೌಕರರ ಹಿತ ಕಾಯುವ ದಿಟ್ಟ ನಿರ್ಧಾರ ಪ್ರಕಟಿಸಿದೆ.
ಏಳನೇ ವೇತನ ಆಯೋಗದ ಶಿಫಾರಸು ಜಾರಿಯಿಂದಾಗಿ ರಾಜ್ಯದ ಎಷ್ಟು ನೌಕರರಿಗೆ ಪ್ರಯೋಜನವಾಗಲಿದೆ? ಏನೆಲ್ಲಾ ಅನುಕೂಲತೆಗಳಿವೆ? ಸರ್ಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಪ್ರತಿಕ್ರಿಯೆ ಏನು? ವಿವರ ಇಲ್ಲಿದೆ..
ವೇತನ ಹೆಚ್ಚಳ ಕುರಿತು ಸಿಎಂ ಹೇಳಿದ್ದೇನು?
ವಿಧಾನಸಭಾ ಕಲಾಪದ ಎರಡನೇ ದಿನ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಸದನಕ್ಕೆ ಮಾಹಿತಿ ನೀಡಿ, ʻʻ7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು 01.07.2022ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ 01.08.2024ರಿಂದ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ, 01.07.2022ಕ್ಕೆ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿ ಭತ್ಯೆ ಮತ್ತು ಶೇ.27.50 ರಷ್ಟು ಫಿಟ್ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ.58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ.32ರಷ್ಟು ಹೆಚ್ಚಳವಾಗುತ್ತದೆʼʼ ಎಂದಿದ್ದಾರೆ.
ನೌಕರರ ವೇತನದ ಹೆಚ್ಚಳ ಎಷ್ಟಾಗಲಿದೆ?
ವೇತನ ಆಯೋಗದ ಶಿಫಾರಸು ಜಾರಿಯಿಂದಾಗಿ ನೌಕರರ ಕನಿಷ್ಟ ಮೂಲವೇತನ ಕನಿಷ್ಟ ರೂ.17,000 ರಿಂದ 27,000ಕ್ಕೆ ಮತ್ತು ಗರಿಷ್ಟ ರೂ.1,50,600ರಿಂದ 2,41,200ಗಳಿಗೆ ಪರಿಷ್ಕರಣೆಯಾಗಲಿದೆ. ಹಾಗೇ ನೌಕರರ ಕನಿಷ್ಠ ಪಿಂಚಣಿ ರೂ.8,500ರಿಂದ 13,500ಕ್ಕೆ ಮತ್ತು ಗರಿಷ್ಠ ಪಿಂಚಣಿ ರೂ.75,300ರಿಂದ 1,20,600ಕ್ಕೆ ಪರಿಷ್ಕರಣೆಗೊಳ್ಳುತ್ತದೆ. ಅಂದರೆ; ಸರ್ಕಾರ ಸೇವೆಯಲ್ಲಿರುವ ನೌಕರರು ಮತ್ತು ನಿವೃತ್ತ ನೌಕರರು ಸೇರಿದಂತೆ ಎಲ್ಲರಿಗೂ ಈ ವೇತನ ಹೆಚ್ಚಳದ ಪ್ರಯೋಜನ ಸಿಗುವಂತೆ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದೆ.
ತಜ್ಞರ ಲೆಕ್ಕಾಚಾರಗಳ ಪ್ರಕಾರ ಈ ಪ್ರಮಾಣದ ಹೆಚ್ಚಳದಿಂದಾಗಿ, ಎ ವಲಯದಲ್ಲಿ ಕೆಲಸ ಮಾಡುವ ಸಿ ಮತ್ತು ಡಿ ದರ್ಜೆ ನೌಕರರಿಗೆ 01.07.2022ಕ್ಕೆ ಮೊದಲು ಮೂಲ ವೇತನ 17 ಸಾವಿರವಿದ್ದರೆ, ಶೇ.31ರಷ್ಟು ತುಟ್ಟಿಭತ್ಯೆ, ಶೇ.27.50 ಫಿಟ್ಮೆಂಟ್ ಸೇರಿ ಒಟ್ಟು 26,945 ರೂ. ವೇತನ ಸಿಗುತ್ತಿತ್ತು. ಇದೀಗ ವೇತನ ಹೆಚ್ಚಳದಿಂದಾಗಿ ಅವರ ಮೂಲ ವೇತನ 27 ಸಾವಿರವಾಗಲಿದೆ. ಅಂದಾಜು ತುಟ್ಟಿಭತ್ಯೆ ಶೇ.8.5, ಮನೆ ಬಾಡಿಗೆ ಭತ್ಯೆ ಶೇ.20, ವೈದ್ಯಕೀಯ ವೆಚ್ಚ 500, ನಗರ ಪರಿಹಾರ ಭತ್ಯೆ 750 ಸೇರಿ ಒಟ್ಟು 35,945 ರೂ. ಸಿಗಲಿದೆ.
ಎಷ್ಟು ನೌಕರರಿಗೆ ಇದರ ಪ್ರಯೋಜನ ಸಿಗಲಿದೆ?
ಈ ವೇತನ ಹೆಚ್ಚಳ ಕೇವಲ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ನಿವೃತ್ತರಿಗೂ ಸಿಗಲಿದೆ. ಜೊತೆಗೆ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ.
ಅಂದರೆ; ಹಾಲಿ ಇರುವ 5.20 ಲಕ್ಷ ಸರ್ಕಾರಿ ನೌಕರರು, ಸದ್ಯ ಖಾಲಿ ಇರುವ 2 ಲಕ್ಷ ಹುದ್ದೆಗಳು, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ 2.50 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತರು ಸೇರಿದಂತೆ ಒಟ್ಟು 14.20 ಲಕ್ಷ ನೌಕರರಿಗೆ ಈ ವೇತನ ಹೆಚ್ಚಳದ ಪ್ರಯೋಜನ ಸಿಗಲಿದೆ.
ರಾಜ್ಯ ಬೊಕ್ಕಸಕ್ಕೆ ಬೀಳುವ ಹೊರೆ ಎಷ್ಟು?
ಈ ವೇತನ ಹೆಚ್ಚಳದಿಂದಾಗಿ ಈಗಾಗಲೇ ಗ್ಯಾರಂಟಿ ಯೋಜನೆಗಳ ಭಾರದಿಂದ ಕುಸಿಯುತ್ತಿರುವ ರಾಜ್ಯ ಬೊಕ್ಕಸಕ್ಕೆ ಇನ್ನಷ್ಟು ಹೊರೆ ಬೀಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಹೇಳಿದಂತೆ, ʻʻನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ರೂ.20,208 ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ”. ಆದರೆ, “ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆʼʼ ಎಂದೂ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿರುವುದರಿಂದ ಈ ವೆಚ್ಚ ಸರಿದೂಗಿಸಲು ಸರ್ಕಾರ ಇನ್ನಷ್ಟು ತೆರಿಗೆ, ಶುಲ್ಕವನ್ನು ಹೇರಬಹುದು ಎಂಬ ವಾದಕ್ಕೆ ಆಸ್ಪದವಿಲ್ಲ.
ನೌಕರರ ಇತರೆ ಬೇಡಿಕೆಗಳು ಏನೇನು?
ಶೇ.27.7ರಷ್ಟು ವೇತನ ಹೆಚ್ಚಳ ಶಿಫಾರಸಿನ ಜೊತೆಗೆ, ಏಳನೇ ವೇತನ ಆಯೋಗ, ಎ ಗ್ರೂಪ್ ನೌಕರರಿಗೆ 65 ಲಕ್ಷ ಹಾಗೂ ಉಳಿದ ನೌಕರರಿಗೆ 40 ಲಕ್ಷ ಗೃಹ ನಿರ್ಮಾಣ ಭತ್ಯೆ, ವಾರದಲ್ಲಿ ಐದು ದಿನ ಮಾತ್ರ ಕೆಲಸದ ಸೌಲಭ್ಯ, ಹೆರಿಗೆಗೆ 60 ದಿನ ಮತ್ತು ನವಜಾತ ಶಿಶು ಆರೈಕೆಗೆ 18 ತಿಂಗಳ ಹೆರಿಗೆ ರಜೆ ನೀಡುವುದು, ಸೇರಿದಂತೆ ಒಟ್ಟು ಮೂವತ್ತು ಶಿಫಾರಸುಗಳನ್ನು ಆಯೋಗ ಮಾಡಿತ್ತು. ಆದರೆ, ಸರ್ಕಾರ ಸದ್ಯ ಇತರೆ ಬೇಡಿಕೆಗಳ ಬಗ್ಗೆ ಏನನ್ನೂ ಹೇಳಿಲ್ಲ.
ಜೊತೆಗೆ, ಎನ್ಪಿಎಸ್ ಪಿಂಚಣಿ ರದ್ದುಪಡಿಸಿ, ಹಳೆಯ ಒಪಿಎಸ್ ಪಿಂಚಣಿ ಪದ್ಧತಿಯನ್ನು ಜಾರಿಗೆ ತರಬೇಕು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಪುನರ್ ಜಾರಿಗೊಳಿಸಬೇಕು ಎಂಬ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳಿಗೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸರ್ಕಾರಿ ನೌಕರರ ಸಂಘದ ಪ್ರತಿಕ್ರಿಯೆ ಏನು?
ಏಳನೇ ವೇತನ ಆಯೋಗದ ಶಿಫಾರಸು ಜಾರಿಯ ಸಂಪುಟ ನಿರ್ಧಾರವನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು, “ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಜೊತೆಗೆ ಪ್ರಮುಖ ಮೂರು ಬೇಡಿಕೆಗಳಲ್ಲಿ ಇನ್ನೆರಡು ಬೇಡಿಕೆಗಳಾದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಹಾಗೂ ಆರೋಗ್ಯ ಸಂಜೀವಿನ ಯೋಜನೆ ಜಾರಿ ಕುರಿತು ಸರ್ಕಾರ ಆದೇಶ ಹೊರಡಿಸಬೇಕು. ಆ ಬಗ್ಗೆ ಸರ್ಕಾರದ ಕ್ರಮಕೈಗೊಳ್ಳದೇ ಹೋದರೆ, ಪೂರ್ವನಿಗದಿಯಂತೆ ಜು.23ರಂದು ನಡೆಯುವ ಸರ್ಕಾರಿ ನೌಕರರು, ನಿವೃತ್ತರ ವಿವಿಧ ಸಂಘಟನೆಗಳ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು” ಎಂದಿದ್ದಾರೆ. ಆ ಮೂಲಕ 2022ರ ಜುಲೈ 1ರಿಂದ ವೇತನ ಹೆಚ್ಚಳ ಪೂರ್ವಾನ್ವಯ ಸೇರಿದಂತೆ ವೇತನ ಆಯೋಗದ ಎಲ್ಲಾ ಶಿಫಾರಸು ಯಥಾವತ್ತು ಜಾರಿಯಾಗಬೇಕು ಮತ್ತು ಒಪಿಎಸ್ ಹಾಗೂ ಆರೋಗ್ಯ ಸಂಜೀವಿನಿ ಕುರಿತ ತಮ್ಮ ಬೇಡಿಕೆ ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.