7th Pay Commission | ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತ ಹೇಳಿಕೆ

Update: 2024-07-16 09:48 GMT

ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಆಗಸ್ಟ್ ಒಂದರಿಂದ ಜಾರಿಗೆ ತರಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಂಗಳವಾರ(ಜು.16) ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ವಿಧಾನಸಭಾ ಕಲಾಪದ ಎರಡನೇ ದಿನ ಸಿಎಂ ಸಿದ್ದರಾಮಯ್ಯ ಅವರು, 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಸದನಕ್ಕೆ ಮಾಹಿತಿ ನೀಡಿ, ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಷ್ಕರಿಸಲು 19.11.2022ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ಅದರಂತೆ, ವೇತನ ಆಯೋಗವು 24.03.2024ರಂದು ವರದಿಯನ್ನು ಸಲ್ಲಿಸಿತ್ತು ಎಂದು ತಿಳಿಸಿದರು.

ʻʻ7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು 01.07.2022ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ 01.08.2024ರಿಂದ ಅನುಷ್ಠಾನಗೊಳಿಸಲು 15.07.2024ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ, 01.07.2022ಕ್ಕೆ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿ ಭತ್ಯೆ ಮತ್ತು ಶೇ. 27.50 ರಷ್ಟು ಫಿಟ್‌ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗುತ್ತದೆʼʼ ಎಂದು ಹೇಳಿದರು.

ʻʻನೌಕರರ ಕನಿಷ್ಟ ಮೂಲವೇತನವು ರೂ. 17,000/- ರಿಂದ ರೂ. 27,000-/ಕ್ಕೆ ಗರಿಷ್ಟ ವೇತನವು ರೂ. 1,50,600/- ರಿಂದ ರೂ. 2,41,200/-ಗಳಿಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು ರೂ.8,500/-ರಿಂದ ರೂ.13,500/-ಕ್ಕೆ ಮತ್ತು ಗರಿಷ್ಠ ಪಿಂಚಣಿಯು ರೂ.75,300/- ರಿಂದ ರೂ. 1,20,600ಕ್ಕೆ ಪರಿಷ್ಕರಣೆಗೊಳ್ಳುತ್ತದೆ. ಈ ಪರಿಷ್ಕರಣೆಯು, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆʼʼ ಎಂದು ಮಾಹಿತಿ ನೀಡಿದರು.

ʻʻನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ರೂ.20,208/- ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆʼʼ ಎಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

Tags:    

Similar News