7th Pay Commission | ಆಯೋಗದ ಶಿಫಾರಸು ಜಾರಿಗೆ ಸಂಪುಟ ಅಸ್ತು: ಆಗಸ್ಟ್‌ 1ರಿಂದಲೇ ವೇತನ ಹೆಚ್ಚಳ

Update: 2024-07-16 06:43 GMT

7th Pay Commission | ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ಶಿಫಾರಸು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಆಗಸ್ಟ್ ಒಂದರಿಂದ ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾಗಲಿದ್ದು, ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರು, ಆಯೋಗದ ಶಿಫಾರಸು ಜಾರಿಗೊಳಿಸದೇ ಇದ್ದಲ್ಲಿ ಜು.29 ರಿಂದ ರಾಜ್ಯವ್ಯಾಪಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಸುವುದಾಗಿ ನೌಕರರ ಸಂಘಟನೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿತ್ತು.

ಆ ಹೋರಾಟದ ಘೋಷಣೆಯ ಬೆನ್ನಲ್ಲೇ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವೇತನ ಆಯೋಗದ ಶಿಫಾರಸು ಜಾರಿಯ ತೀರ್ಮಾನ ಹೊರಬಿದ್ದಿದೆ.

ಶೇ.27.5 ರಷ್ಟು ವೇತನ ಹೆಚ್ಚಳಕ್ಕೆ ಅಸ್ತು

ಏಳನೇ ವೇತನ‌ ಆಯೋಗ ವರದಿಯಲ್ಲಿ ಶಿಫಾರಸು ಮಾಡಿರುವಂತೆ 27.5%ರಷ್ಟು ವೇತನ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ. ಬೊಮ್ಮಾಯಿ ಸರ್ಕಾರ ಕಳೆದ ವರ್ಷ ಮಾರ್ಚ್‌ನಲ್ಲಿ ಏ.1ರಿಂದ ಅನ್ವಯವಾಗುವಂತೆ ಶೇ.17ರಷ್ಟು ವೇತನವನ್ನು ಹೆಚ್ಚಳ ಮಾಡಿದ್ದರು. ಬಾಕಿ ಉಳಿದಿರುವ ಶೇ.10.5 ರಷ್ಟು ವೇತನವನ್ನು ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ಇದು ಆಗಸ್ಟ್​ 1ರಿಂದ ಜಾರಿಯಾಗಲಿದೆ. ಈ ಮೂಲಕ ಶೇ.17 ಮತ್ತು ಶೇ 10.5 ರಷ್ಟು ಸೇರಿ ಒಟ್ಟು ಶೇ.27ರಷ್ಟು ವೇತನ ಹೆಚ್ಚಿಸಲಾಗುತ್ತದೆ. ಇದರಿಂದ ಆರಂಭಿಕ ನೌಕರರ ಕನಿಷ್ಠ ವೇತನ 17 ಸಾವಿರದಿಂದ 27 ಸಾವಿರಕ್ಕೆ ಏರಿಕೆಯಾಗಿದೆ.

ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ವೇತನ ಪರಿಷ್ಕರಣೆ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ವೇತನ ಪರಿಷ್ಕರಣೆಯಿಂದ ಬೊಕ್ಕಸದ ಮೇಲಾಗುವ ಹೊರೆ, ಆರ್ಥಿಕ ಸ್ಥಿತಿಗತಿ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಅಂತಿಮವಾಗಿ ವೇತನ ಪರಿಷ್ಕರಣೆಗೆ ಸಂಪುಟ ಸಭೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಣಕಾಸು ಒತ್ತಡದ ಮಧ್ಯೆ ರಾಜ್ಯ ಸರ್ಕಾರಕ್ಕೆ ವೇತನ ಪರಿಷ್ಕರಣೆಯ ಅನಿವಾರ್ಯತೆ ಎದುರಾಗಿತ್ತು. 

ಲೋಕಸಭೆ ಚುನಾವಣೆ ಘೋಷಣೆಯ ಮುನ್ನ ಮಾ. 16 ರಂದು ಕೆ. ಸುಧಾಕರ್ ರಾವ್ ಅಧ್ಯಕ್ಷತೆಯ ವೇತನ ಆಯೋಗ ವರದಿಯನ್ನು ಸಲ್ಲಿಸಿತ್ತು. 30 ವಿವಿಧ ಶಿಫಾರಸುಗಳೊಂದಿಗೆ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಲಾಗಿತ್ತು. ವೇತನ ಆಯೋಗದ ವರದಿ ಶಿಫಾರಸ್ಸಿನಂತೆ 27.5% ವೇತನ ಪರಿಷ್ಕರಣೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ 2024-25ನೇ ಸಾಲಿನಲ್ಲಿ 17,440.15 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆ ಬೀಳಲಿದೆ.

27.5% ಪರಿಷ್ಕರಣೆಯಂತೆ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ. 17,000 ರಿಂದ ರೂ. 27,000ಗೆ ಹೆಚ್ಚಿಗೆ ಆಗಲಿದೆ. 2024-25 ನೇಸಾಲಿನ ಬಜೆಟ್​ನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೇತನ‌ ಪರಿಷ್ಕರಣೆ ಹಿನ್ನೆಲೆ 15,000 ಕೋಟಿ ರೂ. ಮೀಸಲಿಟ್ಟಿದೆ. ಅಂದರೆ ಇನ್ನೂ 2,500 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿರಲಿಲ್ಲ. ಅಲ್ಲದೇ ಸಂಪನ್ಮೂಲ ಕೊರತೆ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಸಲಹೆ ಆಧರಿಸಿ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ತೀರ್ಮಾನವನ್ನು ರಾಜ್ಯ ಸರ್ಕಾರ ಮುಂದೂಡುತ್ತಾ ಬಂದಿತ್ತು. ಇದೀಗ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.

Tags:    

Similar News