ಶಾಲಾ ಕಾಲೇಜುಗಳಲ್ಲಿ ಹೊಸ ಶಿಕ್ಷಣ ನೀತಿ, ದ್ವಿಭಾಷಾ ನೀತಿ ಜಾರಿಗೆ ಮುಂದಡಿ
ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹೊರಬಂದು ರಾಜ್ಯ ಶಿಕ್ಷಣ ನೀತಿ ತರಲು ನಿರ್ಧಾರ ಮಾಡಲಾಗಿದೆ ಹಾಗೂ ಅದನ್ನು ಶೀಘ್ರದಲ್ಲೇ ಸಚಿವ ಸಂಪುಟ ಸಭೆಗೆ ತಂದು ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.;
ಇಂದಿನಿಂದ ಶಾಲೆಗಳು ಆರಂಭವಾಗಿವೆ.
ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹೊರಬಂದು ರಾಜ್ಯ ಶಿಕ್ಷಣ ನೀತಿ ತರಲು ನಿರ್ಧಾರ ಮಾಡಲಾಗಿದೆ ಹಾಗೂ ಅದನ್ನು ಶೀಘ್ರದಲ್ಲೇ ಸಚಿವ ಸಂಪುಟ ಸಭೆಗೆ ತಂದು ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಜತೆಗೆ 2000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ‘ಶಿಕ್ಷಣದ ಪರಿವರ್ತನೆ’ ಕಾರ್ಯಕ್ರಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಆ ಮೂಲಕ ಶಿಕ್ಷಣ ನೀತಿಗಳ ಪರಿವರ್ತನೆಗೆ ಸಹಕಾರಿಯಾಗುವ ವಾತಾವರಣ ಸೃಷ್ಟಿಸಲೂ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿಕೆ ನೀಡಿದ್ದಾರೆ. ಅವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಉದ್ಘಾಟಿಸಿದ ಭಾರತ ರತ್ನ ಡಾ. ಸರ್ವೆಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗೆ ನಡೆದ ʼಶಿಕ್ಷಕರ ದಿನಾಚರಣೆʼ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದ್ವಿಭಾಷಾ ಸೂತ್ರ
ದ್ವಿಭಾಷಾ ಸೂತ್ರವನ್ನು ಶಿಕ್ಷಣದಲ್ಲಿ ಜಾರಿಗೊಳಿಸುವ ಸಂಬಂಧವೂ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣವನ್ನು 5000 ಶಾಲೆಗಳಲ್ಲಿ ಜಾರಿಗೆ ತಂದಿದ್ದೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರೆ, ದ್ವಿಭಾಷಾ ಸೂತ್ರದ ಬಗ್ಗೆ ಪೋಷಕರ ಕನಸನ್ನು ಅರ್ಥ ಮಾಡಿಕೊಂಡು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಯೋಜನೆ ರೂಪಿಸುತ್ತಿದ್ದೇವೆ ಎಂದು ಎಂ. ಸಿ. ಸುಧಾಕರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಅಭಿವೃದ್ಧಿ ನಡೆದಿದೆ. ಮೊದಲು 500 ಕೆಪಿಎ ಶಾಲೆಗಳಿದ್ದರೆ, ಈಗ ಅದು 800 ಕ್ಕೆ ಏರಿಕೆಯಾಗಿದೆ. ಜೊತೆಗೆ ಮೂರು ಪ್ರೌಢಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. 50 ಪಿಯುಸಿ ಕಾಲೇಜು ಮತ್ತು 4000 ಎಲ್‌ಕೆಜಿ–ಯುಕೆಜಿ ಶಾಲೆಗಳಿಗೂ ಸರ್ಕಾರ ಅನುಮೋದನೆ ನೀಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.
ಮಕ್ಕಳ ಪೌಷ್ಠಿಕತೆಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಅಡುಗೆ ಸಹಾಯಕರ ಸಂಬಳ ಹೆಚ್ಚಿಸುವ ಚರ್ಚೆಯೂ ನಡೆಯುತ್ತಿದೆ. 11 ತಿಂಗಳಲ್ಲಿ 13 ಸಾವಿರ ಶಿಕ್ಷಕರು ಪಾಠ ಹೇಳುತ್ತಿದ್ದಾರೆ. ಅನುದಾನಿತ ಶಾಲೆಗಳಿಗೆ 2016–25ರೊಳಗೆ 18 ಸಾವಿರ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನೈತಿಕ ವಿಜ್ಞಾನ ಪ್ರತ್ಯೇಕ ವಿಷಯವಾಗಿ ರೂಪುಗೊಳ್ಳಲಿದೆ. ನಮ್ಮ ರಾಜ್ಯದ ಮಕ್ಕಳು ಸಂವಿಧಾನದ ಪೀಠಿಕೆ ಪಠಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
200 ಭೋದಕರ ನೇಮಕಾತಿ
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾತನಾಡಿ, ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಕಾಲೇಜು ಶಿಕ್ಷಣದವರೆಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ನಾನು ಸ್ವತಃ 10 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ರಾಧಾಕೃಷ್ಣನ್ ಹಾಗೂ ಸಾವಿತ್ರಿ ಭಾಯಿ ಪುಲೆ ಅವರ ಸಿದ್ಧಾಂತಗಳನ್ನು ಅನುಸರಿಸಿ ನಾವು ಮುಂದುವರಿಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಬದಲಾವಣೆ ಅತ್ಯಂತ ಮುಖ್ಯ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ. 200 ಭೋದಕರ ನೇಮಕಾತಿ ಕಾರ್ಯ ನಡೆಯುತ್ತಿದೆ. ಒಳಮೀಸಲಾತಿ ಬಗೆಹರಿದ ಬಳಿಕ ಪ್ರಕಟಣೆ ಹೊರಡಿಸಲಾಗುವುದು. 6,800ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಕಾಲೇಜು ಮಟ್ಟದಲ್ಲಿ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಎಬಿವಿಪಿ ಕಾರ್ಯಕ್ರಮವನ್ನು 68 ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದೇವೆ. 5-6 ಸೆಮಿಸ್ಟರ್‌ಗಳಲ್ಲಿ ರಿಟೈಲ್ ವಿಷಯವನ್ನು ಸೇರಿಸಿದ್ದೇವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ನೇರವಾಗಿ ಸ್ಟೇ ಫಂಡ್ ಪಡೆಯಲು ಸಾಧ್ಯವಾಗಲಿದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್ ಮೂಲಕ ಪದವಿ ಪಡೆದ ಹೆಣ್ಣುಮಕ್ಕಳಿಗೆ ಪ್ರತಿ ವರ್ಷ 30 ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ನೆರವೇರಿಸಿದರು. ಜೊತೆಗೆ ನ್ಯಾಕ್ ಮಾನ್ಯತೆ ಪಡೆದ ಸರ್ಕಾರಿ ಕಾಲೇಜುಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗೂ ಪ್ರಶಸ್ತಿ ಪ್ರದಾನ ನಡೆಯಿತು.