Ground Report| ರಾಜ್ಯದಲ್ಲಿ ಶೇ 40ರಷ್ಟು ರಾಗಿ ಬೆಳೆ ನಾಶ; ಪರಿಹಾರಕ್ಕಾಗಿ ರೈತರ ಮೊರೆ
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಹಿಂಗಾರು ಅವಧಿಯ ಅತಿವೃಷ್ಟಿ ಹಾಗೂ ಸರಣಿ ಚಂಡಮಾರುತಗಳಿಂದ ಶೇ 30-40ರಷ್ಟು ರಾಗಿ ಬೆಳೆ ಹಾಳಾಗಿದೆ. ಶೇ 5 ರಷ್ಟು ಮೆಕ್ಕೆಜೋಳ; ಶೇ 8-10 ರಷ್ಟು ದ್ರಾಕ್ಷಿಬೆಳೆ ನಷ್ಟವಾಗಿದೆ.;
ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಕಂಗಾಲಾದ ರೈತರನ್ನು ಚಂಡಮಾರುತ ಕೂಡ ನಷ್ಟ ಸುಳಿಗೆ ತಳ್ಳಿದೆ. ಹಳೆ ಮೈಸೂರು ಹಾಗೂ ಬಯಲು ಸೀಮೆ ಪ್ರದೇಶಗಳ ಪ್ರಮುಖ ಆಹಾರ ಬೆಳೆಯಾಗಿರುವ ರಾಗಿ ಹಾನಿಗೊಳಗಾಗಿದೆ. ಹಲವೆಡೆ ಬೆಳೆ ನೆಲಕಚ್ಚಿದ್ದು, ಫಸಲು ತೆಗೆಯಲು ರೈತರು ಪಟ್ಟ ಶ್ರಮವೆಲ್ಲವೂ ಮಣ್ಣುಪಾಲಾಗಿದೆ.
ಕಟಾವಿಗೆ ಸಿದ್ಧವಾಗಿದ್ದ ರಾಗಿ, ಮೆಕ್ಕೆಜೋಳವು ಚಂಡಮಾರುತಗಳಿಂದ ಹಾನಿಯಾಗಿದೆ. ನೆಲಕಚ್ಚಿದ ರಾಗಿ ತೆನೆಯಲ್ಲಿ ಹೊಸ ಮೊಳಕೆಯೊಡೆದಿದ ಪರಿಣಾಮ ʼಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆʼ.
ʼದ ಫೆಡರಲ್ ಕರ್ನಾಟಕʼ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ನೆಲಮಂಗಲ, ಯಲಹಂಕ .. ಹೀಗೆ ಹಲವು ರಾಗಿ ಬೆಳೆ ಪ್ರದೇಶಗಳಿಗೆ ಭೇಟಿ ನೀಡಿ ರಾಗಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ಕಂಡಿತು. ಹಲವು ರೈತರನ್ನು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಮಾತನಾಡಿಸಿ ರಾಗಿ ಬೆಳೆ ಸಮಸ್ಯೆ ಸಂಬಂಧ ಬೆಳಕುಚೆಲ್ಲಲು ಪ್ರಯತ್ನಿಸಲಾಯಿತು.
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಹಿಂಗಾರು ಅವಧಿಯ ಅತಿವೃಷ್ಟಿ ಹಾಗೂ ಸರಣಿ ಚಂಡಮಾರುತಗಳಿಂದ ಶೇ 30-40ರಷ್ಟು ರಾಗಿ ಬೆಳೆ ಹಾಳಾಗಿದೆ. ಶೇ 5 ರಷ್ಟು ಮೆಕ್ಕೇಜೋಳ, ಶೇ 8-10 ರಷ್ಟು ದ್ರಾಕ್ಷಿಬೆಳೆ ನಷ್ಟವಾಗಿದೆ. ಸತತ ಮಳೆಯಿಂದಾಗಿ ಮೆಕ್ಕೆಜೋಳದ ಕಾಳು ಕಪ್ಪಾಗಿವೆ. ಇನ್ನು ತೊಗರಿ ಬೆಳೆ ಕೂಡ ಕುಂಠಿತವಾಗಿದೆ. ಡಿಸೆಂಬರ್ ಅವಧಿಗಾಗಲೇ ತೊಗರಿ ಕಾಯಿ ಬಿಡಬೇಕಿತ್ತು. ಆದರೆ, ಅತಿಯಾದ ಮಳೆ ಹಾಗೂ ಶೀತ ವಾತಾವರಣದಿಂದ ಇನ್ನೂ ಹೂವನ್ನೇ ಬಿಟ್ಟಿಲ್ಲ. ಫಸಲು ಬಿಡುವ ಹೊತ್ತಿಗೆ ಮಳೆ ಕೈಕೊಟ್ಟರೆ, ನೀರಿನ ಅಭಾವ ಎದುರಾಗಿ ನಷ್ಟ ಸಂಭವಿಸಲಿದೆ ಎನ್ನಲಾಗಿದೆ.
ಅರ್ಧದಷ್ಟು ರಾಗಿ ಬೆಳೆ ಮಣ್ಣುಪಾಲು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಹೆಚ್ಚು ರಾಗಿ ಬೆಳೆ ಹಾನಿಯಾಗಿದೆ. ದೇವನಹಳ್ಳಿ ಹಾಗೂ ಹೊಸಕೋಟೆಯಲ್ಲಿ ಈಗ ತೆನೆ ಕಟ್ಟಿದ್ದು, ಕಟಾವು ಹಂತಕ್ಕೆ ಬಂದಿಲ್ಲ. ಆದರೆ, ಮುಂಗಾರು ಪೂರ್ವದಲ್ಲೇ ಬಿತ್ತನೆ ಮಾಡಿದ ಹಲವೆಡೆ ರಾಗಿ ಬೆಳೆ ಈಗ ಚಂಡಮಾರುತದಿಂದ ಹಾನಿಯಾಗಿದೆ. ಸೈಕ್ಲೋನ್‌ನಿಂದ ರಾಗಿ ಹೊಲ ನೆಲಕಚ್ಚಿದೆ. ಒಣಗಿದ ರಾಗಿ ತೆನೆಗಳೇ ಮೊಳಕೆಯೊಡೆಯುತ್ತಿವೆ. ವಿಧಿಯಿಲ್ಲದೇ ಬಂದಷ್ಟು ರಾಗಿ ಬರಲಿ ಎಂದು ಕಟಾವು ಮಾಡುತ್ತಿದ್ದೇವೆ, ಈ ಭಾಗದಲ್ಲಿ ಎಲ್ಲ ರೈತರ ರಾಗಿ ಹೊಲಗಳು ಸಂಪೂರ್ಣ ಹಾಳಾಗಿವೆ ಎಂದು ಯಲಹಂಕ ತಾಲೂಕಿನ ಹನಿಯೂರು ಗ್ರಾಮಮ ರೈತರ ಆಂಜಿನಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಇನ್ನು ದೊಡ್ಡಬಳ್ಳಾಪುರ ತಾಲೂಕಿ ಗೌಡಹಳ್ಳಿ ಗ್ರಾಮದ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಇಡೀ ರಾಗಿ ಹೊಲ ಒಣಗಿ ನೆಲಕಚ್ಚಿದೆ. ಅರ್ಧದಷ್ಟು ರಾಗಿ ಕಾಳು ಉದುರಿ ಹೋಗಿವೆ. ನಾವು ಮೂರು ಎಕರೆಯಲ್ಲಿ ರಾಗಿ ಬೆಳೆದಿದ್ದೆವು. ಆದರೆ, ಸೈಕ್ಲೋನ್ ಮಳೆಯಿಂದ ಬೆಳೆ ನಾಶವಾಗಿದೆ. ಜಮೀನು ಉಳುಮೆಯಿಂದ ಫಸಲು ತೆಗೆಯುವವರೆಗೆ ಎಕರೆಗೆ ೨೫ ಸಾವಿರ ರೂ. ಖರ್ಚು ಮಾಡಿದ್ದೇವೆ. ಆದರೆ, ಈಗ ಎಕರೆಗೆ ಕನಿಷ್ಠ ೮ ಕ್ವಿಂಟಲ್ ಬಂದರೆ ಹೆಚ್ಚೆಚ್ಚು. ಕೃಷಿ ಇಲಾಖೆ ಸೂಕ್ತ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹನಿಯೂರು ಗ್ರಾಮದ ಮತ್ತೊಬ್ಬ ರೈತ ಅಂಜನಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮುಂಗಾರು, ಹಿಂಗಾರಿನಲ್ಲಾದ ನಷ್ಟವೆಷ್ಟು?
ಹಿಂಗಾರು ಅವಧಿಯಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಅಂದಾಜು 120 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಅದೇ ರೀತಿ ಮುಂಗಾರು ಅವಧಿಯಲ್ಲಿ 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಮನೆ ಹಾನಿ, ಬೆಳೆನಾಶ ಹಾಗೂ ಜೀವಹಾನಿಗೆ ಒಟ್ಟು 162 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದರು. ಆದರೆ. ಈಗ ಕೃಷಿ ಇಲಾಖೆ ಅಧಿಕಾರಿಗಳು ಚಂಡಮಾರುತದಿಂದ ಆದ ಬೆಳೆ ನಷ್ಟದ ಕುರಿತು ಯಾವುದೇ ಸಮೀಕ್ಷೆ ನಡೆಸಿಲ್ಲ. ಬೆಳೆ ಪರಿಹಾರ ನೀಡುವುದಕ್ಕೂ ಪರಿಗಣಿಸಿಲ್ಲ ಎಂಬುದು ರೈತರ ಆರೋಪವಾಗಿದೆ.
ಹಿರಿಯೂರಿನ ರೈತ ಮಹಿಳೆ ಚೈತ್ರಾ ಮಾತನಾಡಿ, ಈ ಬಾರಿ ಉತ್ತಮ ಫಸಲು ಬಂದಿತ್ತು. ಆದರೆ, ಸತತ ಮಳೆಯಿಂದ ಇಡೀ ಬೆಳೆ ಹಾಳಾಗಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ಹನಿಯೂರು ಗ್ರಾಮದ ಮಧ್ಯೆ ರಾಗಿ ಒಣಗಿಸಿ ತೂರುತ್ತಿದ್ದ ಲೀಲಮ್ಮ ಮಾತನಾಡಿ, ಈ ಬಾರಿ ರಾಗಿ ಬೆಳೆ ಹೆಚ್ಚು ನಷ್ಟವಾಗಿದೆ. ಕಳೆದ ಬಾರಿ ಒಂದು ಎಕರೆಗೆ 15 ಕ್ವಿಂಟಲ್ ರಾಗಿ ಬಂದಿತ್ತು. ಈಗ ಹೆಚ್ಚೆಂದರೆ 8 ಕ್ವಿಂಟಲ್ ಆಗಬಹುದು. ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶ್ರೀನಿವಾಸಪ್ಪ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಈ ಬಾರಿ ಚಳಿಗಾಲ ವಿಸ್ತರಣೆಯಾಗಿದೆ. ಚಂಡಮಾರುತದ ಸಂದರ್ಭದಲ್ಲಿ ಹಳೆ ಮೈಸೂರು ಹಾಗೂ ಬಯಲು ಸೀಮೆ ಪ್ರದೇಶದಲ್ಲಿ ಶೇ 30-40 ರಾಗಿ ಬೆಳೆ ನಾಶವಾಗಿದೆ. ಒಟ್ಟು 52 ಸಾವಿರ ಎಕರೆಯಲ್ಲಿ ಬೆಳೆ ನಾಶವಾಗಿರುವ ಮಾಹಿತಿ ಇದೆ, ಇದಲ್ಲದೇ ತೊಗರಿ, ಮೆಕ್ಕೆಜೋಳವೂ ಹಾಳಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶ್ರೀನಿವಾಸಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೆಳೆ ಸಮೀಕ್ಷೆ ನಡೆಸಿಲ್ಲ
ರಾಗಿ ಬೆಳೆ ಹಾನಿ ಕುರಿತಂತೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕಿ ಗಾಯತ್ರಿ ಮಾತನಾಡಿ, ಚಂಡಮಾರುತದ ಸಂದರ್ಭದಲ್ಲಿ ಹಾನಿಯಾದ ಬೆಳೆಗಳು ಅತ್ಯಲ್ಪ. ಈ ಬಗ್ಗೆ ಯಾವುದೇ ಸಮೀಕ್ಷೆ ನಡೆಸಿಲ್ಲ. ರೈತರು ಸಕಾಲದಲ್ಲಿ ಕಟಾವು ಮಾಡದ ಕಾರಣಕ್ಕೂ ಬೆಳೆ ಹಾನಿಯಾಗಿರಬಹುದು. ಅತಿವೃಷ್ಟಿ ಸಂಭವಿಸಿದ ಹಾಳಾಗಿದ್ದರೆ ಅಂತಹ ಬೆಳೆಗಳನ್ನು ಸಮೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.
ಮಾವು ಬೆಳೆಯಲ್ಲೂ ನಷ್ಟ
ರಾಜ್ಯದಲ್ಲಿ ಹೆಚ್ಚು ಮಾವು ಬೆಳೆಯುವ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಮಾವು ಕೂಡ ಹಾನಿಗೊಳಗಾಗಿದೆ. ಎಲ್ಲೆಡೆ ಮಾವು ಹೂಬಿಟ್ಟು ಕಂಗೊಳಿಸುತ್ತಿತ್ತು. ಆದರೆ, ಚಂಡಮಾರುತ ಹಾಗೂ ಚಳಿಗಾಲದಿಂದಾಗಿ ಹೂವು ಉದುರಿಹೋಗಿದೆ. ಇದರಿಂದ ಬೆಳೆಗಾರರಲ್ಲಿ ಮಾವಿನಫಸಲು ಕ್ಷೀಣಿಸುವ ಆತಂಕ ಎದುರಾಗಿದೆ. ಮಳೆ ಹಾಗೂ ಮಂಜಿನಿಂದ ತರಕಾರಿ ಬೆಳೆಗಳಲ್ಲಿ ರೋಗಭಾದೆ ತೀವ್ರವಾಗಿದೆ. ರೋಗ ನಿಯಂತ್ರಣಕ್ಕೆ ಕೀಟನಾಶ ಸಿಂಪಡಿಸಿದರೂ ತಹಬದಿಗೆ ಬರದಂತಾಗಿದೆ.