Kalyana Karnataka | 371(J) ಅಡಿ ನೇಮಕಾತಿ, ಮುಂಬಡ್ತಿ ವಿಳಂಬ; ಸಚಿವ ಸಂಪುಟ ಉಪ ಸಮಿತಿ ಆಕ್ಷೇಪ

ಹಿಂದಿನ ಸಭೆಯ ನಡಾವಳಿಗೆ ಸಂಬಂಧಿಸಿ ಅನುಪಾಲನ ವರದಿ ಸಲ್ಲಿಸದ ಒಳಾಡಳಿತ ಇಲಾಖೆ, ಅಬಕಾರಿ ಇಲಾಖೆ ಹಾಗೂ ಪೊಲೀಸ್‌ ವೈರ್‌ಲೆಸ್‌ ಘಟಕದ ವಿರುದ್ಧ ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ನೋಟಿಸ್‌ ನೀಡಲು ಸಂಪುಟ ಉಪ ಸಮಿತಿ ತೀರ್ಮಾನಿಸಿತು.;

Update: 2025-03-11 02:36 GMT
ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕದ ಪ್ರತಿ ಪರಿಶೀಲನೆ ಸಭೆ ನಡೆಯಿತು

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹುದ್ದೆಗಳ ನೇಮಕಾತಿ, ಮುಂಬಡ್ತಿ, ಜೇಷ್ಠತೆಯಲ್ಲಿ ಲೋಪದೋಷ ಮುಂತಾದ ಪ್ರಕ್ರಿಯೆಗಳು ಮಂದಗತಿಯಲ್ಲಿ ಆಗುತ್ತಿರುವುದಕ್ಕೆ 371 (ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶನಾ ಕುರಿತ ಸಂಪುಟ ಉಪಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. 

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಇಲಾಖೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಮಿತಿಯು, ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಿ, ಐದು ಇಲಾಖೆಗಳ ಪ್ರಗತಿ ವರದಿಯನ್ನು ಕೂಲಂಕಶವಾಗಿ ಪರಿಶೀಲಿಸಲು ನಿರ್ಧರಿಸಲಾಯಿತು. 

ಕಳೆದ ಸಭೆಯ ನಡಾವಳಿಗೆ ಸಂಬಂಧಿಸಿ ಅನುಪಾಲನ ವರದಿ ಸಲ್ಲಿಸದ ಒಳಾಡಳಿತ ಇಲಾಖೆ, ಅಬಕಾರಿ ಇಲಾಖೆ ಹಾಗೂ ಪೊಲೀಸ್‌ ವೈರ್‌ಲೆಸ್‌ ಘಟಕದ ವಿರುದ್ಧ ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ನೋಟಿಸ್‌ ನೀಡಲು ತೀರ್ಮಾನಿಸಲಾಯಿತು.

ಸ್ಥಳೀಯ ವೃಂದದ ಅಧಿಕಾರಿಗಳು ಹಾಗೂ ನೌಕರರಿಗೆ ಮುಂಬಡ್ತಿ ಹಾಗೂ ಸೇವಾ ಜೇಷ್ಠತೆ ಪರಿಗಣಿಸಲು ಸೂಚಿಸಿದ್ದರೂ ಬೆಂಗಳೂರಿನ ಅಪೆಕ್ಸ್ ಬ್ಯಾಂಕ್‌ ನಿರ್ಲಕ್ಷ್ಯ ವಹಿಸಿರುವುದನ್ನು ಕಟುವಾಗಿ ಟೀಕಿಸಲಾಯಿತು. ಪರಿಶೀಲನಾ ಸಭೆಗೆ ಸಹಕಾರ ಇಲಾಖೆಯ ಯಾವುದೇ ಅಧಿಕಾರಿಗಳು ಬಾರದೆ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಭೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್‌ ನೀಡಲು ನಿರ್ದೇಶಿಸಿತು. 

ಮುಂದಿನ ಸಭೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು. ವಿವಿಧ ಹುದ್ದೆಗಳ ನೇಮಕಾತಿ, ಮುಂಬಡ್ತಿ, ಜೇಷ್ಠತೆಯಲ್ಲಿ ಲೋಪದೋಷ ಪ್ರಕರಣಗಳಲ್ಲಿ ನ್ಯಾಯಾಲಯಗಳನ್ನು ಪ್ರತಿನಿಧಿಸುತ್ತಿರುವ ವಕೀಲರನ್ನೂ ಸಭೆಗೆ ಆಹ್ವಾನಿಸಬೇಕು ಎಂದು ಕಾನೂನು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಸೂಚಿಸಿದರು.

ಆದೇಶ ಅನುಷ್ಠಾನಕ್ಕೆ ಖಡಕ್‌ ಸೂಚನೆ

ಪ್ರಾದೇಶಿಕ ಅಸಮತೋಲನ ನಿವಾರಣೆಗೆ 371 (ಜೆ) ಅಡಿ ಕಲ್ಪಿಸಿರುವ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ನಿಯಮಗಳ ಸಮರ್ಪಕ ಜಾರಿ ಮತ್ತು ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು. ಪ್ರಗತಿ ಪರಿಶೀಲನಾ ಸಭೆಗಳಿಗೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಿಂತ ಮೇಲ್ಪಟ್ಟ ಅಧಿಕಾರಿಗಳು ಖುದ್ದು ಹಾಜರಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.

371 (ಜೆ) ಅನುಚ್ಚೇದಕ್ಕೆ ತಿದ್ದುಪಡಿ ತಂದು ಕಲ್ಪಿಸಲಾಗಿರುವ ಸಂವಿಧಾನಾತ್ಮಕ ಹಕ್ಕು ಮತ್ತು ಸೌಕರ್ಯಗಳ ಜಾರಿಗೆ ಅಧಿಕಾರಿಗಳು ಅನಾಸಕ್ತಿ ತೋರುತ್ತಿರುವುದನ್ನು ಗಮನಿಸಲಾಗುತ್ತಿದೆ. ಅನೇಕ ಬಾರಿ ನೆನಪೋಲೆ, ಸುತ್ತೋಲೆ ಕಳುಹಿಸಿದರೂ ಕೆಲ ಇಲಾಖೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ನಿರ್ಲಕ್ಷಿಸುತ್ತಿರುವುದನ್ನು ಸಚಿವ ಸಂಪುಟ ಉಪಸಮಿತಿ ಗಂಭೀರವಾಗಿ ಪರಿಗಣಿಸಿದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಪೊಲೀಸ್ ಮತ್ತು ಇತರೆ ಇಲಾಖೆಗಳು ಕೂಡಲೇ ನೇಮಕಾತಿ ಆದೇಶಗಳನ್ನು ಅಭ್ಯರ್ಥಿಗಳಿಗೆ ನೀಡಿ ಸೇವೆಗೆ ಹಾಜರುಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸ್ಥಳೀಯ ಮತ್ತು ಉಳಿಕೆ ಮಾತೃವೃಂದದ ಸಂಯುಕ್ತ ಜೇಷ್ಠತಾ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಹೊರಡಿಸಬೇಕು. ಈ ವಿಷಯದಲ್ಲಿ ನ್ಯಾಯಲಯದ ಆದೇಶ ಸ್ಪಷ್ಟವಾಗಿದೆ. ಮಾಸಾಂತ್ಯದೊಳಗೆ ಆದೇಶ ಹೊರಡಿಸಿ ಗೊಂದಲ ನಿವಾರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದರು.

2023 ರ ಸುತ್ತೋಲೆಯೇ ಅಂತಿಮ 

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದಂತೆ 2023 ರ ಸುತ್ತೋಲೆ ಮಾತ್ರ ಜಾರಿಯಲ್ಲಿದೆ. ಅದಕ್ಕೂ ಹಿಂದಿನ ಎಲ್ಲಾ ಹಳೆಯ ಆದೇಶಗಳನ್ನು ಹಿಂಪಡೆಯಲಾಗಿದೆ. ಅನಗತ್ಯವಾಗಿ ಸ್ಪಷ್ಟೀಕರಣ, ಮಾರ್ಗದರ್ಶನ ಕೋರಿ ಪತ್ರ ಬರೆದು ಕಾಲಹರಣ ಮಾಡಬಾರದು. ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲಿಯೇ ನೇರ ನೇಮಕಾತಿಗೆ ಸೇರಿದ ಸುಮಾರು 12 ಸಾವಿರ ಹಾಗೂ ಮುಂಬಡ್ತಿಗೆ ಮೀಸಲಿಟ್ಟ ಸುಮಾರು 9 ಸಾವಿರ ಹುದ್ದೆಗಳು ಖಾಲಿ ಇವೆ. ಈಗಾಗಲೇ 5267 ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುತ್ತಿದೆ. ಉಳಿದ 6 ಸಾವಿರ ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ನೇಮಕಾತಿಗೆ ಮುನ್ನ ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವೂ ಕೂಡ ಇದೆ. ಶಿಕ್ಷಣ, ಆರೋಗ್ಯ, ಪೊಲೀಸ್, ಸಾರಿಗೆ, ಇಂಧನ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳನ್ನು ಹೊಂದಿರುವ ಇಲಾಖೆಗಳು ನೇಮಕಾತಿಗೆ ತ್ವರಿತ ಕ್ರಮ ವಹಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ, ಮುಂಬಡ್ತಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳು ತ್ವರಿತ ವಿಲೇವಾರಿಗೆ ಕಾನೂನು ಸಚಿವರು ಹಾಗೂ ಅಡ್ವೋಕೇಟ್ ಜನರಲ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.

ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ 

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸರ್ಕಾರವು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ಎಂಜಿನಿಯರಿಂಗ್ ಕಾಲೇಜುಗಳು, ವಸತಿ ಶಾಲೆ, ಹಾಸ್ಟೆಲ್‍ಗಳನ್ನು ಮಂಜೂರು ಮಾಡಿದೆ. ಅದಕ್ಕನುಗುಣವಾಗಿ ಹುದ್ದೆಗಳನ್ನು ಸೃಜಿಸಿ ನೇಮಕಾತಿಗೆ ಕ್ರಮ ವಹಿಸಬೇಕು. ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಗತ್ಯವಿರುವ ಎಲ್ಲಾ ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಕ್ರಮವಹಿಸಬೇಕು ಎಂದರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಸೇರಿದಂತೆ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದರು.

Tags:    

Similar News