ಶ್ರೀನಿವಾಸಪುರದಲ್ಲಿ ಐವರು ಅಪ್ರಾಪ್ತರು ಸೇರಿ 12 ಜನ ಅಕ್ರಮ ಬಾಂಗ್ಲಾ ವಲಸಿಗರ ವಶ
ಬಂಧಿತ ದಂಪತಿಗಳನ್ನು ಮೊಹಮ್ಮದ್ ಜಾವೀದ್ ಇಸ್ಲಾಂ (22) ಮತ್ತು ಜನ್ನತಿ ಅಥರ್ (19) ಎಂದು ಗುರುತಿಸಲಾಗಿದ್ದು, ಬಾಂಗ್ಲಾ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ಹೊಂದಿರುವುದು ಬಯಲಾಗಿದೆ.;
ಅಕ್ರಮ ಬಾಂಗ್ಲಾ ವಲಸಿಗರು
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 12 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಐವರು ಅಪ್ರಾಪ್ತರು ಸೇರಿದ್ದಾರೆ.
ಶ್ರೀನಿವಾಸಪುರದಲ್ಲಿ ಕಸದ ಬಾಟಲಿಗಳು ಮತ್ತು ಹತ್ತಿ ಸಂಗ್ರಹಿಸುತ್ತಿದ್ದ ಅಪರಿಚಿತ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಿ ಕಾನೂನು ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ.
ಬಂಧಿತ ದಂಪತಿಗಳನ್ನು ಮೊಹಮ್ಮದ್ ಜಾವೀದ್ ಇಸ್ಲಾಂ (22) ಮತ್ತು ಜನ್ನತಿ ಅಥರ್ (19) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಅವರು ಬಾಂಗ್ಲಾ ವಲಸಿಗರು ಎಂದು ತಿಳಿದು ಬಂದಿದೆ.
ಪೊಲೀಸ್ ತಂಡವು ನಂದಗುಡಿಯಲ್ಲಿ ಉಳಿದ ಗುಂಪನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದಿದೆ. ಅಪ್ರಾಪ್ತರಲ್ಲದೇ ಉಳಿದವರ ಬಳಿ ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ತಾಂತ್ರಿಕ ತಜ್ಞರು ಅವುಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಇಬ್ಬರು ವಯಸ್ಕರು ಆಧಾರ್ ಕಾರ್ಡ್ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಆಸ್ಪತ್ರೆಯ ದಾಖಲೆಗಳಿಲ್ಲದೆ ಮನೆಯಲ್ಲಿ ಜನಿಸಿದ ಅವರ ಇಬ್ಬರು ಮಕ್ಕಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.