ಅನುದಾನವಿಲ್ಲ ಎಂದು ಆರೋಪಿಸುವ ಶಾಸಕರ 1000 ಕೋಟಿ ರೂ. ಕೆಲ್ಯಾಡ್ಸ್ ನಿಧಿ ಖರ್ಚೇ ಆಗಿಲ್ಲ!
ಅನುದಾನ ಸಿಗದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂಬುದು ಶಾಸಕರ ಪಕ್ಷಾತೀತ ಆರೋಪ. ಆದರೆ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಂಕಿ ಸಂಖ್ಯೆ ಗಮನಿಸಿದರೆ ಶಾಸಕರ ಆರೋಪಗಳ ಬಗ್ಗೆ ಉತ್ತರ ಸಿಗುತ್ತದೆ;
ಕ್ಷೇತ್ರಾಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬುದು ಪಕ್ಷಾತೀತವಾಗಿ ಕೇಳಿ ಬರುತ್ತಿರುವ ಬಲವಾದ ಆರೋಪಗಳಾಗಿವೆ. ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಶಾಸಕರ ಒಕ್ಕೊರಲ ಧ್ವನಿಯೇ ʼಅನುದಾನ ಬಿಡುಗಡೆಯಾಗುತ್ತಿಲ್ಲʼ ಎನ್ನುವುದು!
ಸಮರ್ಪಕವಾಗಿ ಅನುದಾನ ನೀಡದ ಕಾರಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂಬುದು ಶಾಸಕರ ಆರೋಪ. ಆದರೆ, ವಾಸ್ತವವೇ ಬೇರೆಯಾಗಿದ್ದು, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಂಕಿ ಸಂಖ್ಯೆ ಗಮನಿಸಿದರೆ ಶಾಸಕರ ಆರೋಪಗಳು ಎಷ್ಟರ ಮಟ್ಟಿಗೆ ಸಮಂಜಸವಾಗಿದೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಕೆಲ್ಯಾಡ್ಸ್- Karnataka Legislators’ Local Area Development Scheme -KLLADS) ನೀಡಲಾಗಿರುವ ಅನುದಾನದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಬಳಕೆಯಾಗದೆ ಹಾಗೆಯೇ ಉಳಿದಿರುವುದು ಬೆಳಕಿಗೆ ಬಂದಿದೆ. 2024-25ನೇ ಸಾಲಿನಲ್ಲಿ ಖರ್ಚಾಗಿದ್ದು ಕೇವಲ ಶೇ.32ರಷ್ಟು ಮಾತ್ರ..!
ಸರ್ಕಾರ ವಿರುದ್ಧ ಆರೋಪ ಮಾಡಿರುವ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾಮಗಾರಿಗಳಿಗೆ ನಿಧಿ ಬಳಕೆಯಲ್ಲಿ ನಿರಾಸಕ್ತಿ ತೋರಿರುವುದು ಕಂಡುಬಂದಿದೆ. 2024-25ನೇ ಸಾಲಿನ ಅಂತ್ಯಕ್ಕೆ ಕೆಲ್ಯಾಡ್ಸ್‌ಗೆ ಒಟ್ಟಾರೆ 1,479.85 ಕೋಟಿ ರು. ಅನುದಾನ ನಿಗದಿ ಮಾಡಲಾಗಿತ್ತು. ಆದರೆ, ಅದರಲ್ಲಿ ವೆಚ್ಚವಾಗಿದ್ದು ಮಾತ್ರ 460.78 ಕೋಟಿ ರು. ಆಗಿದೆ.
ಶಾಸಕರ ನಿಧಿಗೆ ಪ್ರತಿವರ್ಷ ಅನುದಾನ ನೀಡಲಾಗುತ್ತದೆ. ಈ ಅನುದಾನವನ್ನು ಬಳಸಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತಾವು ಬಯಸುವ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬಹುದಾಗಿದೆ. ಪ್ರತಿ ಶಾಸಕರಿಗೆ ಶಾಸಕರ ನಿಧಿ ಎಂದು ವಾರ್ಷಿಕ 2 ಕೋಟಿ ರೂ. ಅನುದಾನ ನೀಡಲಾಗುತ್ತದೆ. 224 ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್‌ನ 75 ಸದಸ್ಯರಿಗೆ ಪ್ರತಿವರ್ಷ ತಲಾ 2 ಕೋಟಿ ರೂಪಾಯಿ ಶಾಸಕರ ನಿಧಿ ಅನುದಾನ ಮಂಜೂರಾಗುತ್ತದೆ.
ಡಿಸಿಗಳ ಪಿಡಿ ಖಾತೆಯಲ್ಲಿರುತ್ತದೆ ಅನುದಾನ
ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗುವುದಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಅನುದಾನದ ಮೂಲಕ ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಸರಬರಾಜು, ಶಾಲಾ, ಕಾಲೇಜು ಕಟ್ಟಡ ನಿರ್ಮಾಣ, ಶೌಚಾಲಯ ನಿರ್ಮಾಣ, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಬಸ್ ನಿಲ್ದಾಣ, ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಹಲವು ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಆದರೆ, ಕ್ಷೇತ್ರದ ಸಾರ್ವಜನಿಕರ ಆಶೋತ್ತರಗಳನ್ನು ಈಡೇರಿಸುವ ನಿಧಿ ಬಳಕೆಯಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬುದು ಗೊತ್ತಾಗಿದೆ.
2024-25 ಸಾಲಿನಲ್ಲಿ ನಿಧಿ ಬಳಕೆ ಕೇವಲ ಶೇ.32
2024-25 ಸಾಲಿನಲ್ಲಿ ಕ್ಷೇತ್ರಾಭಿವೃದ್ಧಿ ನಿಧಿ ಅನುದಾನ ಬಳಕೆಯಲ್ಲಿ ತಮ್ಮ ನಿರಾಸಕ್ತಿಯನ್ನು ಮುಂದುವರಿಸಿದ್ದಾರೆ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಕೆಲ್ಯಾಡ್ಸ್) 2024-25 ಸಾಲಿನಲ್ಲಿ ಕೇವಲ ಶೇ.32 ಮಾತ್ರ ಖರ್ಚಾಗಿದೆ. 2024-25 ಸಾಲಿನಲ್ಲಿ ರಾಜ್ಯದ ಶಾಸಕರಿಗೆ ಕೆಲ್ಯಾಡ್ಸ್ ಅಡಿಯಲ್ಲಿ ಹಿಂದಿನ ವರ್ಷಗಳ ಬಾಕಿ ಮೊತ್ತವಾದ 884.85 ಕೋಟಿ ರೂಪಾಯಿ ಹಾಗೂ ಸರ್ಕಾರದಿಂದ 595 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆ ಮೂಲಕ 2024-25 ಸಾಲಿನಲ್ಲಿ ಕೆಲ್ಯಾಡ್ಸ್ ಯೋಜನೆಯಡಿ ಸುಮಾರು 1,448.95 ಕೋಟಿ ರೂಪಾಯಿ ಅನುದಾನ ಲಭ್ಯವಿತ್ತು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನೀಡಿದ ಅಂಕಿ ಅಂಶದ ಪ್ರಕಾರ ಒಟ್ಟು 1,448.95 ಕೋಟಿ ರೂಪಾಯಿ ಶಾಸಕರ ನಿಧಿ ಅನುದಾನ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿತ್ತು. ಈ ಲಭ್ಯ ಅನುದಾನದ ಪೈಕಿ 2024-25 ಸಾಲಿನಲ್ಲಿ ವೆಚ್ಚವಾಗಿರುವುದು ಕೇವಲ 460.78 ಕೋಟಿ ರೂ. ಮಾತ್ರ. ಅಂದರೆ 460.78 ಕೋಟಿ ರೂ. ಮೊತ್ತವನ್ನು ಶಾಸಕರು ವಿವಿಧ ಕಾಮಗಾರಿಗಳಿಗಾಗಿ ವೆಚ್ಚ ಮಾಡಿದ್ದಾರೆ. ಲಭ್ಯ ಅನುದಾನದ ಪೈಕಿ ಕೇವಲ ಶೇ.32 ಮಾತ್ರ ವೆಚ್ಚವಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನೂ 988 ಕೋಟಿ ರೂ. ಅನುದಾನ ಬಾಕಿ ಉಳಿದುಕೊಂಡಿದೆ.
ಹಿಂದಿನ ಆರ್ಥಿಕ ವರ್ಷಗಳಲ್ಲೂ ಶಾಸಕರ ನಿರಾಸಕ್ತಿ
2022-23 ಸಾಲಿನಲ್ಲಿ ಶಾಸಕರ ತಮ್ಮ ಪ್ರದೇಶಾಭಿವೃದ್ಧಿ ನಿಧಿ ಅನುದಾನ ಬಳಕೆಯಲ್ಲಿ ತೀವ್ರ ನಿರಾಸಕ್ತಿ ತೋರಿದ್ದಾರೆ. 2022-23 ಸಾಲಿನಲ್ಲಿ ಹಿಂದಿನ ವರ್ಷಗಳ ಬಾಕಿ ಮೊತ್ತ 692 ಕೋಟಿ ರೂಪಾಯಿ ಸೇರಿ ಒಟ್ಟು 1,292 ಕೋಟಿ ರೂ. ಶಾಸಕರ ನಿಧಿ ಲಭ್ಯವಿತ್ತು. ಆದರೆ ಈ ಲಭ್ಯ ಅನುದಾನದ ಪೈಕಿ ವೆಚ್ಚವಾಗಿರುವುದು ಕೇವಲ 600 ಕೋಟಿ ರೂಪಾಯಿ ಮಾತ್ರ. ಸುಮಾರು 690 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲೇ ಬಾಕಿ ಉಳಿದುಕೊಂಡಿತ್ತು. ಅಂದರೆ ಒಟ್ಟು ಲಭ್ಯ ಶಾಸಕರ ನಿಧಿ ಪೈಕಿ ಶೇ. 46 ರಷ್ಟು ಮಾತ್ರ ವೆಚ್ಚ ಮಾಡಲಾಗಿದೆ ಎಂದು ಗೊತ್ತಾಗಿದೆ.
2023-24 ಸಾಲಿನಲ್ಲೂ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿ ಅನುದಾನ ಬಳಕೆಯಲ್ಲಿ ಅತಿ ಹೆಚ್ಚು ನಿರುತ್ಸಾಹ ತೋರಿದ್ದರು. 2023-24ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಶಾಸಕರಿಗೆ ಕೆಲ್ಯಾಡ್ಸ್ ಅಡಿಯಲ್ಲಿ ಹಿಂದಿನ ವರ್ಷಗಳ ಬಾಕಿಯೂ ಸೇರಿದಂತೆ ಒಟ್ಟು 1,256 ಕೋಟಿ ಅನುದಾನ ಲಭ್ಯವಿತ್ತು. ಆದರೆ, ಈ ಅನುದಾನದ ಪೈಕಿ ವೆಚ್ಚವಾಗಿರುವುದು ಕೇವಲ 218 ಕೋಟಿ ರೂ. ಮಾತ್ರ. ಅಂದರೆ ಕೇವಲ ಶೇ.17.35 ಮಾತ್ರ ಆಗಿದೆ. ಸುಮಾರು 1,038 ಕೋಟಿ ರೂಪಾಯಿಯಷ್ಟು ಅನುದಾನ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳಲ್ಲಿ ವರ್ಷಗಳಿಂದ ಬಾಕಿ ಉಳಿದುಕೊಂಡಿತ್ತು ಎಂದು ಮೂಲಗಳು ಹೇಳಿವೆ.
ಕೆಲ್ಯಾಡ್ಸ್ ವೆಚ್ಚಕ್ಕೆ 11 ತಿಂಗಳ ಗುರಿ
2025-26ನೇ ಸಾಲಿನ ಆರಂಭದಲ್ಲಿ ಕೆಲ್ಯಾಡ್‌ನಲ್ಲಿ ಉಳಿದಿರುವ 988.17 ಕೋಟಿ ರೂಪಾಯಿಗೆ ಸಂಬಂಧಪಟ್ಟಂತೆ ಈಗಾಗಲೇ ರೂಪಿಸಲಾಗಿರುವ ಕ್ರಿಯಾಯೋಜನೆ ಅನುಷ್ಠಾನಕ್ಕೆ ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 11 ತಿಂಗಳ ಗುರಿ ನಿಗದಿ ಮಾಡಿದೆ. ಅದರಂತೆ 2024-25ನೇ ಸಾಲಿನಲ್ಲಿ ಆರಂಭವಾಗದೇ ಇರುವ ಎಲ್ಲ ಕಾಮಗಾರಿಗಳ ಅನುಷ್ಠಾನದ ಹೊಣೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಅದರೊಂದಿಗೆ ಕೆಲ್ಯಾಡ್ಸ್ ಅನುದಾನ ಬಳಕೆ ಹೆಚ್ಚಿಸಲು ತುರ್ತು ಅಥವಾ ತ್ವರಿತವಾಗಿ ಅನುಷ್ಠಾನಗೊಳ್ಳಬೇಕಿರುವ 5 ಲಕ್ಷ ರೂ.ವರೆಗಿನ ಪ್ರಸ್ತಾಪಿತ ಕಾಮಗಾರಿಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ನೀಡುವ ಜವಾಬ್ದಾರಿ ನಿಗದಿತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ವಹಿಸಲಾಗಿದೆ.
ನಿಧಿ ಪ್ರಗತಿ ಕ್ಷೀಣಕ್ಕೆ ಕಾರಣ
ಪ್ರತಿ ವರ್ಷ ಜೂನ್ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ತಲಾ 2 ಕೋಟಿ ರೂಪಾಯಿವರೆಗೆ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಆದರೆ, ಶಾಸಕರು ನಿಗದಿತ ಸಮಯದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವುದು ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ಶಾಸಕರು ಶಿಫಾರಸು ಮಾಡಿದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ. ಮುಂಗಡ ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡಲಾಗುತ್ತಿದೆ. ಅನುಷ್ಠಾನ ಏಜೆನ್ಸಿಗಳಿಂದ ಕಾಮಗಾರಿಗಳ ಆರಂಭಕ್ಕೆ ನಿರಾಸಕ್ತಿ ತೋರಲಾಗುತ್ತಿದೆ. ಇನ್ನು ಪೂರ್ಣಗೊಂಡ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್ ಪಾವತಿಸದೇ ಇರುವುದು ಕೆಲ್ಯಾಡ್ಸ್ ಅನುದಾನ ಬಳಕೆಯಲ್ಲಿ ಪ್ರಗತಿ ಕ್ಷೀಣಿಸಲು ಪ್ರಮುಖ ಕಾರಣವಾಗಿದೆ ಎಂಬುದು ಆರ್ಥಿಕ ಇಲಾಖೆಯ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
ಜಿಲ್ಲಾವಾರು ನಿಧಿ ಬಳಕೆ ಮಾಹಿತಿ
ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ನೀಡಿದ ಅಂಕಿಅಂಶಗಳ ಪ್ರಕಾರ 2024-25 ಸಾಲಿನಲ್ಲಿ ರಾಯಚೂರಲ್ಲಿಕೇವಲ ಶೇ.16ರಷ್ಟು ವೆಚ್ಚವಾಗಿದೆ. ಕಲಬುರಗಿಯಲ್ಲಿ ಶೇ.17 ವೆಚ್ಚವಾಗಿದೆ. ಬೀದರ್‌ನಲ್ಲಿ ಕೇವಲ ಶೇ.18 ರಷ್ಟು ಬಳಕೆಯಾಗಿದೆ. ಬೆಳಗಾವಿಯಲ್ಲಿ ಶೇ. 20, ಬಳ್ಳಾರಿಯಲ್ಲಿ ಶೇ.22 ವೆಚ್ಚವಾಗಿದೆ. ರಾಮನಗರದಲ್ಲಿ ಶೇ. 23, ಚಾಮರಾಜನಗರದಲ್ಲಿ ಶೇ.23, ಕೋಲಾರದಲ್ಲಿ ಶೇ.24 ಶಾಸಕರ ನಿಧಿ ಅನುದಾನ ಬಳಕೆಯಾಗಿದೆ. ಯಾದಗಿರಿಯಲ್ಲಿ ಶೇ.26, ಕೊಡಗಿನಲ್ಲಿ ಶೇ. 26, ಶಿವಮೊಗ್ಗದಲ್ಲಿ ಶೇ.28, ಕೊಪ್ಪಳದಲ್ಲಿ ಶೇ. 29 ರಷ್ಟು ಅನುದಾನ ಬಳಕೆಯಾಗಿದೆ.
ಚಿತ್ರದುರ್ಗದಲ್ಲಿ ಶೇ.31 ರಷ್ಟು ಬಳಕೆಯಾದರೆ, ಬಾಗಲಕೋಟೆಯಲ್ಲಿಶೇ. 32ರಷ್ಟು ಬಳಕೆಯಾಗಿದೆ. ಮೈಸೂರಲ್ಲಿ ಶೇ.33, ಉಡುಪಿಯಲ್ಲಿ ಶೇ.34, ತುಮಕೂರಲ್ಲಿ ಶೇ.34, ಧಾರವಾಡದಲ್ಲಿಶೇ. 34 ನಿಧಿ ಅನುದಾನ ವೆಚ್ಚವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಶೇ. 35, ಮಂಡ್ಯದಲ್ಲಿ ಶೇ. 35, ದಕ್ಷಿಣ ಕನ್ನಡದಲ್ಲಿ ಶೇ. 36, ಬೆಂಗಳೂರು ನಗರದಲ್ಲಿ ಶೇ.39, ಬೆಂಗಳೂರು ಗ್ರಾಮಾಂತರದಲ್ಲಿ ಶೇ.39, ದಾವಣಗೆರೆಯಲ್ಲಿ ಶೇ.41, ಉತ್ತರ ಕನ್ನಡದಲ್ಲಿ ಶೇ.42, ಚಿಕ್ಕಮಗಳೂರಲ್ಲಿ ಶೇ.45, ಹಾವೇರಿಯಲ್ಲಿ ಶೇ.47, ಹಾಸನದಲ್ಲಿ ಶೇ.47, ವಿಜಯನಗರದಲ್ಲಿ ಶೇ.49, ಗದಗದಲ್ಲಿ ಶೇ.51 ಮತ್ತು ವಿಜಯಪುರದಲ್ಲಿ ಶೇ.51 ಶಾಸಕರ ನಿಧಿ ಬಳಕೆಯಾಗಿರುವುದು ಗೊತ್ತಾಗಿದೆ.
ಹಂತ ಹಂತವಾಗಿ ಹಣ ಬಿಡುಗಡೆ; ನಿಗದಿತ ಸಮಯದಲ್ಲಿ ಕಾಮಗಾರಿ ಸಾಧ್ಯವಿಲ್ಲ!
ಕೆಲ್ಯಾಡ್ಸ್ ಅನುದಾನ ಬಳಕೆಯಾಗದಿರುವ ಕುರಿತು ದ ಫೆಡರಲ್ ಕರ್ನಾಟಕ ಜತೆಗೆ ಮಾತನಾಡಿದ ಶಾಸಕ ಶರಣಗೌಡ ಕಂದಕೂರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಖರ್ಚಾಗುವ ವಿಚಾರದಲ್ಲಿ ದಾಖಲೆಗಳಲ್ಲಿರುವ ಅಂಶಗಳೇ ಬೇರೆ, ವಾಸ್ತವಾಂಶವೇ ಬೇರೆ ಇದೆ. ಸರ್ಕಾರ ಆದೇಶ ಹೊರಡಿಸಿದ ಬಳಿಕ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ. ಅದಕ್ಕೆ ಆರು ತಿಂಗಳ ಬಳಿಕ ಅನುಮೋದನೆ ಸಿಗಲಿದ್ದು, ವರ್ಷದ ನಂತರ ಹಣ ಬಿಡುಗಡೆಯಾಗುತ್ತದೆ. ಒಟ್ಟಿಗೆ ಹಣ ಬಿಡುಗಡೆಯಾಗುವುದಿಲ್ಲ ಎಂದು ಹೇಳುತ್ತಾರೆ.
ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಹೀಗಿರುವಾಗ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮಾಡಲು ಸಾಧ್ಯವೇ? ಅನುದಾನದ ಬಳಕೆ ಬಗ್ಗೆ ಸರ್ಕಾರಕ್ಕೆ ಸಲ್ಲಿಕೆ ಮಾಡಲು ತಡವಾಗುತ್ತದೆ. ಅಷ್ಟೊತ್ತಿಗೆ ಅನುದಾನ ಬಳಕೆಯಾಗಿಲ್ಲ ಎಂಬ ವರದಿ ಬರುತ್ತದೆ. ಸರ್ಕಾರವು ತಕ್ಷಣವೇ ಹಣ ಬಿಡುಗಡೆ ಮಾಡಿದರೆ ಕಾಮಗಾರಿಗಳನ್ನು ಕೈಗೊಂಡು ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅನುದಾನಕ್ಕಿಂತ ಕಮಿಷನ್ ಮುಖ್ಯವೇ?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಮುಖಂಡ ರವಿಕೃಷ್ಣಾ ರೆಡ್ಡಿ ಮಾತನಾಡಿ, ಶಾಸಕರು ಅನುದಾನ ನೀಡುತ್ತಿಲ್ಲ ಎಂಬ ಆರೋಪಗಳನ್ನು ಮಾಡುತ್ತಾರೆ. ಆದರೆ, ಸರ್ಕಾರ ನೀಡುವ ಅನುದಾನವನ್ನು ಯಾರೂ ಸಹ ಸದ್ಬಳಕೆ ಮಾಡಿಕೊಳ್ಳುವುದಿಲ್ಲ. ಬಹಳಷ್ಟು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಹಿಂದಿನ ಯೋಜನೆಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಮಾಜಿ ಶಾಸಕರು ಕಮಿಷನ್ ಪಡೆದುಕೊಂಡಿರುತ್ತಾರೆ. ಹೀಗಾಗಿ ಹೊಸ ಯೋಜನೆಗಳಿಗೆ ಅನುದಾನ ಬೇಕು ಎಂದು ಬೇಡಿಕೆ ಮಾಡುತ್ತಿರುತ್ತಾರೆ. ಹೆಚ್ಚಿನ ಶಾಸಕರು ಅಭಿವೃದ್ಧಿಗಿಂತ ಕಮಿಷನ್‌ಗಾಗಿಯೇ ಅನುದಾನ ಕೇಳುತ್ತಾರೆ. ಕೋಟ್ಯಂತರ ರೂಪಾಯಿ ಬಳಕೆಯಾಗದೆ ಬಾಕಿ ಉಳಿದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕು. ಶಾಸಕರ ನಿಧಿಗಾಗಿ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಕಟ್ಟಪ್ಪಣೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.