1 ಲಕ್ಷ ಕೋಟಿ ರೂ. ಗಣಿ ಹಗರಣ: ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಹಿರಿಯ ನಾಯಕರ ಸಮರ!

ವಿ.ಎಸ್. ಉಗ್ರಪ್ಪ, ವಿ.ಆರ್. ಸುದರ್ಶನ್, ಬಿ.ಎಲ್. ಶಂಕರ್, ಡಾ. ಎಲ್. ಹನುಮಂತಯ್ಯ, ಜಯಪ್ರಕಾಶ್ ಹೆಗ್ಡೆ, ಹೆಚ್.ಎಂ. ರೇವಣ್ಣ, ರಾಣಿ ಸತೀಶ್ ಸೇರಿದಂತೆ ಒಟ್ಟು 19 ಹಿರಿಯ ನಾಯಕರು ಸಹಿ ಹಾಕಿದ್ದಾರೆ.;

Update: 2025-09-12 15:24 GMT

ರಾಜ್ಯ ರಾಜಕೀಯದಲ್ಲಿ ದಶಕಗಳ ಕಾಲ ಕಂಪನ ಸೃಷ್ಟಿಸಿದ್ದ, ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಗಣಿಗಾರಿಕೆ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ, ಸ್ವತಃ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ, ತಮ್ಮದೇ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಹಗರಣದ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಜರುಗಿಸುವಂತೆ ಬಲವಾಗಿ ಒತ್ತಾಯಿಸಿದ್ದಾರೆ.

ಸೆಪ್ಟೆಂಬರ್ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ವಿ.ಎಸ್. ಉಗ್ರಪ್ಪ, ವಿ.ಆರ್. ಸುದರ್ಶನ್, ಬಿ.ಎಲ್. ಶಂಕರ್, ಡಾ. ಎಲ್. ಹನುಮಂತಯ್ಯ, ಜಯಪ್ರಕಾಶ್ ಹೆಗ್ಡೆ, ಹೆಚ್.ಎಂ. ರೇವಣ್ಣ, ರಾಣಿ ಸತೀಶ್ ಸೇರಿದಂತೆ ಒಟ್ಟು 19 ಹಿರಿಯ ನಾಯಕರು ಸಹಿ ಹಾಕಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಈ ಹಿಂದೆ ಕಾಂಗ್ರೆಸ್ ಪಕ್ಷ ನಡೆಸಿದ ಹೋರಾಟಗಳನ್ನು ಮತ್ತು ಜನರಿಗೆ ನೀಡಿದ ಭರವಸೆಗಳನ್ನು ಈ ಪತ್ರದಲ್ಲಿ ಸ್ಮರಿಸಲಾಗಿದೆ.

"2011ರಲ್ಲಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ನಾವು ನಡೆಸಿದ ಪಾದಯಾತ್ರೆಯ ಸಂದರ್ಭದಲ್ಲಿ, 'ನಾವು ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ' ಎಂದು ಜನರಿಗೆ ಮಾತು ಕೊಟ್ಟಿದ್ದೆವು. ಈಗ ಆ ಮಾತನ್ನು ಉಳಿಸಿಕೊಳ್ಳುವ ಸಮಯ ಬಂದಿದೆ," ಎಂದು ನಾಯಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವರದಿ ಆಧರಿಸಿ ಕ್ರಮಕ್ಕೆ ಆಗ್ರಹ

ಇತ್ತೀಚೆಗೆ, ಅಕ್ರಮ ಗಣಿಗಾರಿಕೆ ಕುರಿತು ಅಧ್ಯಯನ ಮಾಡಲು ರಚಿಸಲಾಗಿದ್ದ, ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ, ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದವರ ವಿವರಗಳಿದ್ದು, ಹಗರಣದ ಒಟ್ಟು ಮೌಲ್ಯವು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ರಾಜ್ಯ ಸಚಿವ ಸಂಪುಟವು ಈ ವರದಿಯನ್ನು ಈಗಾಗಲೇ ಅಂಗೀಕರಿಸಿದೆ.

ವರದಿಯನ್ನೇ ಆಧಾರವಾಗಿಟ್ಟುಕೊಂಡು, ತಪ್ಪಿತಸ್ಥರು ಯಾವುದೇ ಪಕ್ಷದವರಾಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನಾಯಕರ ಪ್ರಮುಖ ಬೇಡಿಕೆಗಳು

ಹಿರಿಯ ನಾಯಕರು ತಮ್ಮ ಪತ್ರದಲ್ಲಿ ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಹಗರಣದ ಸಮಗ್ರ ಮತ್ತು ಕಾಲಮಿತಿಯ ತನಿಖೆಗಾಗಿ ತಕ್ಷಣವೇ ವಿಶೇಷ ತನಿಖಾ ದಳವನ್ನು (SIT) ರಚಿಸಬೇಕು. ವರದಿಯಲ್ಲಿ ಉಲ್ಲೇಖವಾಗಿರುವ ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಬೇಕು. ಲೂಟಿಯಾದ ಸಂಪತ್ತನ್ನು ವಸೂಲಿ ಮಾಡಲು, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ (MMDR Act) ಅಡಿಯಲ್ಲಿ ಒಂದು "ವಿಶೇಷ ಸೆಲ್" (Special Cell) ರಚಿಸಿ, ಕಾನೂನು ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್​ನಿಂದ ಹೋರಾಟ  

2000ರ ದಶಕದಲ್ಲಿ ನಡೆದ ಈ ಅಕ್ರಮ ಗಣಿಗಾರಿಕೆ ಹಗರಣ, ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವರದಿಯಿಂದಾಗಿ ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದ ಕಾಂಗ್ರೆಸ್, 2011ರಲ್ಲಿ "ಬಳ್ಳಾರಿ ಚಲೋ" ಪಾದಯಾತ್ರೆ ನಡೆಸಿ, ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟವನ್ನೇ ರೂಪಿಸಿತ್ತು. ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು, ಹೆಚ್.ಕೆ. ಪಾಟೀಲ್ ಸಮಿತಿಯ ವರದಿಯೂ ಕೈಯಲ್ಲಿರುವಾಗ, ಹಿರಿಯ ನಾಯಕರು ಪತ್ರ ಬರೆಯುವ ಮೂಲಕ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದಾರೆ. ಈ ಪತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೂ ಪ್ರತಿಗಳನ್ನು ಕಳುಹಿಸಲಾಗಿದೆ.  

Tags:    

Similar News