ಶುದ್ಧೀಕರಣ | ವಿರೋಧಿಗಳ ವಿರುದ್ಧ ಬಿಜೆಪಿ ಪ್ರಯೋಗಿಸಿದ ಅಸ್ತ್ರ ಈಗ ತನ್ನನ್ನೇ ಸುತ್ತಿಕೊಂಡಿತೆ?

ಶುದ್ಧೀಕರಣ, ಪವಿತ್ರೀಕರಣದಂತಹ ಧಾರ್ಮಿಕ ಆಚರಣೆಗಳನ್ನು ರಾಜಕೀಯ ಲಾಭಕ್ಕಾಗಿ ಬೀದಿಗೆ ತಂದು, ರಾಜಕೀಯ ವಿರೋಧಿಗಳ ವಿರುದ್ಧದ ಪ್ರದರ್ಶನವಾಗಿ ಬಳಸಿದ್ದ ಪಕ್ಷದ ಅಂತರಂಗದಲ್ಲೇ ಈಗ ಅದರದ್ದೇ ಶುದ್ಧೀಕರಣದ ಕೂಗು ಎದ್ದಿದೆ.

Update: 2024-03-23 01:20 GMT

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಉದ್ದಗಲಕ್ಕೆ ʼಶುದ್ಧೀಕರಣʼ ಎಂಬುದನ್ನು ರಾಜಕೀಯ ಥಿಯೇಟ್ರಿಕಲ್ ಈವೆಂಟ್ ಆಗಿ ಆಚರಿಸಿಕೊಂಡು ಬರುತ್ತಿದ್ದ ಬಿಜೆಪಿಯನ್ನೇ ಶುದ್ಧೀಕರಿಸುವ ಅಭಿಯಾನ ಪಕ್ಷದ ಒಳಗಿನಿಂದಲೇ ಶುರುವಾಗಿದೆ!

ಪಕ್ಷವನ್ನು ಕಟ್ಟಿಬೆಳೆಸಿದ ನಾಯಕರೇ ಈಗ "ಪಕ್ಷ ಕೆಲವರ ಕೈಗೊಂಬೆಯಾಗಿದೆ. ಹಾಗಾಗಿ ಪಕ್ಷದ ಶುದ್ಧೀಕರಣ ಮಾಡಬೇಕಿದೆ" ಎಂದು ಒಬ್ಬರಾದ ಮೇಲೊಬ್ಬರು ಆಡತೊಡಗಿದ್ದಾರೆ. ಶುದ್ಧೀಕರಣ, ಪವಿತ್ರೀಕರಣದಂತಹ ಧಾರ್ಮಿಕ ಆಚರಣೆಗಳನ್ನು ರಾಜಕೀಯ ಲಾಭಕ್ಕಾಗಿ ಬೀದಿಗೆ ತಂದು, ರಾಜಕೀಯ ವಿರೋಧಿಗಳ ವಿರುದ್ಧದ ಪ್ರದರ್ಶನವಾಗಿ ಬಳಸಿದ್ದ ಪಕ್ಷದ ಅಂತರಂಗದಲ್ಲೇ ಈಗ ಅದರದ್ದೇ ಶುದ್ಧೀಕರಣದ ಕೂಗು ಎದ್ದಿದೆ.

ಕಳೆದ ಏಳೆಂಟು ವರ್ಷಗಳಿಂದ ದೇಶದ ವಿವಿಧೆಡೆಯಂತೆ ಕರ್ನಾಟಕದಲ್ಲೂ ಬಿಜೆಪಿ ಮತ್ತು ಅದರ ಪರಿವಾರ ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳು, ಪ್ರತಿಪಕ್ಷಗಳ ನಾಯಕರ ಮಾತು, ಪ್ರತಿಭಟನೆಗಳನ್ನು ಎದುರಿಸಲು, ಅವರನ್ನು ಹೀಗಳೆಯಲು ಶುದ್ಧೀಕರಣ ಎಂಬುದನ್ನು ಬಳಸುತ್ತಿದ್ದರು. ತಮ್ಮ ವಿರೋಧಿಗಳು, ಟೀಕಾಕಾರರು ಮಾತನಾಡಿದ ವೇದಿಕೆ, ಬಂದು ಹೋದ ಬೀದಿ, ಭೇಟಿ ನೀಡಿದ ಜಾಗಗಳನ್ನು ಗಂಗಾ ಜಲ ಹಾಕಿ, ಗೋಮೂತ್ರ ಸಿಂಪಡಿಸಿ ಮಂತ್ರ ಪಠಿಸಿ ಶುದ್ಧೀಕರಿಸುವುದನ್ನು ಒಂದು ರಾಜಕೀಯ ಆಚರಣೆಯಾಗಿ ರೂಢಿಸಿಕೊಂಡಿದ್ದರು.

ಅಂತಹ ಶುದ್ಧೀಕರಣ ಪ್ರಕ್ರಿಯೆಯನ್ನು ಮೊಬೈಲ್, ಟಿವಿ ಮೂಲಕ ಮೆಗಾ ಈವೆಂಟ್ ನಂತೆ ಪ್ರಸಾರ ಮಾಡಿ ಅದನ್ನೊಂದು ರಾಜಕಾರಣದ ಥಿಯೇಟ್ರಿಕಲ್ ಈವೆಂಟಿನಂತೆ ಬಿಂಬಿಸಲಾಗುತ್ತಿತ್ತು. ಇಂತಹ ಶುದ್ಧೀಕರಣದಲ್ಲಿ ಅಪಾರ ನಂಬಿಕೆ ಇರುವ ಶಾಸ್ತ್ರ, ಆಚರಣೆಯನ್ನು ಧಾರ್ಮಿಕತೆಯ ಭಾಗವೆಂದು ನಂಬುವ ಬಹುಸಂಖ್ಯಾತ ಸಮುದಾಯವನ್ನು ಮೆಚ್ಚಿಸುವ, ಅವರ ಕಣ್ಣಲ್ಲಿ ಧರ್ಮನಿಷ್ಠ ಪಕ್ಷವೆಂಬ ತನ್ನ ಚಿತ್ರಣವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನಗಳನ್ನು ಬಿಜೆಪಿ ಮತ್ತು ಪರಿವಾರ ನಡೆಸುತ್ತಲೇ ಬಂದಿವೆ. 

ಆದರೆ, ಇದೀಗ ಲೋಕಸಭಾ ಚುನಾವಣಾ ಟಿಕೆಟ್ ಪೈಪೋಟಿ ಈ ಶುದ್ಧೀಕರಣದ ಆಚರಣೆಯನ್ನು ಬಿಜೆಪಿಯ ನಡುಮನೆಗೇ ತಂದು ನಿಲ್ಲಿಸಿದೆ. ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರೇ ಇದೀಗ ಪಕ್ಷ ಅಶುದ್ಧವಾಗಿದೆ, ಅದನ್ನು ಶುದ್ಧೀಕರಿಸಬೇಕು ಎಂದು ಹೇಳತೊಡಗಿದ್ದಾರೆ.

ಬಿಜೆಪಿ ಶುದ್ಧೀಕರಣದ ಮಾತನ್ನು ಮೊದಲು ಪ್ರಸ್ತಾಪಿಸಿದವರು, ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ, ಬಿ ಬಿ ಶಿವಪ್ಪ, ಎ ಕೆ ಸುಬ್ಬಯ್ಯ ಅವರೊಂದಿಗೆ ಹೆಗಲು ಕೊಟ್ಟು ಪಕ್ಷದ ಕಟ್ಟಿದವರಲ್ಲಿ ಒಬ್ಬರಾದ ಕೆ ಎಸ್ ಈಶ್ವರಪ್ಪ. ಕಳೆದ ಬಾರಿ ವಿಧಾನಸಭಾ ಟಿಕೆಟ್ ವಂಚಿತರಾಗಿದ್ದ ಕೆ ಎಸ್ ಈಶ್ವರಪ್ಪ, ದಶಕಗಳ ತಮ್ಮ ಭದ್ರಕೋಟೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕಾರ್ಯಕರ್ತ ಮತ್ತು ತಮ್ಮ ಕಟ್ಟಾ ಶಿಷ್ಯ ಚನ್ನಬಸಪ್ಪ ಅವರಿಗೆ ಬಿಟ್ಟುಕೊಟ್ಟಿದ್ದರು. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸ್ಥಾನ ತ್ಯಾಗ ಮಾಡುವಾಗ, ತಮ್ಮ ಪುತ್ರ ಕೆ ಇ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಭರವಸೆಯನ್ನು ಪಕ್ಷದ ಹೈಕಮಾಂಡ್ ನೀಡಿತ್ತು. ಆದರೆ, ಈಗ ತಮ್ಮ ಪುತ್ರನಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ʼತಮ್ಮ ಎದೆ ಬಗೆದರೆ ಒಂದು ಕಡೆ ಶ್ರೀರಾಮ, ಮತ್ತೊಂದು ಕಡೆ ನರೇಂದ್ರ ಮೋದಿ ಕಾಣುತ್ತಾರೆʼ ಎಂದು ತಮ್ಮ ಬಂಡಾಯದ ಮೊದಲ ಸಭೆಯಲ್ಲಿ ಹೇಳಿರುವ ಈಶ್ವರಪ್ಪ, ʼತಮ್ಮ ಪುತ್ರನಿಗೆ ಟಿಕೆಟ್ ಕೊಟ್ಟು ಅವರ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುವೆʼ ಎಂದು ಹಿಂದೆ ಮಾತುಕೊಟ್ಟಿದ್ದ, ಒಂದು ಕಾಲದ ತಮ್ಮ ಮಿತ್ರ ಬಿ ಎಸ್ ಯಡಿಯೂರಪ್ಪ ಅವರೇ ಈಗ ಟಿಕೆಟ್ ತಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಯಡಿಯೂರಪ್ಪ ಅವರ ಎದೆಯನ್ನು ಬಗೆದರೆ ಒಂದು ಕಡೆ ಅವರ ಇಬ್ಬರು ಮಕ್ಕಳು, ಮತ್ತೊಂದು ಕಡೆ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ" ಎಂದು ಹೇಳಿರುವ ಈಶ್ವರಪ್ಪ, "ತಮ್ಮ ಮಕ್ಕಳು ಮತ್ತು ಆಪ್ತರನ್ನು ಬೆಳೆಸಲು ಯಡಿಯೂರಪ್ಪ ಪಕ್ಷದ ಹಿತ ಬಲಿಕೊಡುತ್ತಿದ್ದಾರೆ. ಕಾರ್ಯಕರ್ತರನ್ನು ಬಲಿಕೊಡುತ್ತಿದ್ದಾರೆ. ಪಕ್ಷ ಯಡಿಯೂರಪ್ಪ ಅವರ ಕೈಗೊಂಬೆಯಾಗಿದೆ. ಹಾಗಾಗಿ ಪಕ್ಷವನ್ನು ಶುದ್ಧೀಕರಿಸಬೇಕಿದೆ. ಶುದ್ಧೀಕರಣ ಮಾಡುವುದಕ್ಕಾಗಿಯೇ ನಾನು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಕಣಕ್ಕಿಳಿಸಿದಿದ್ದೇನೆ" ಎಂದು ವಾಗ್ಧಾಳಿ ನಡೆಸಿದ್ದಾರೆ.

ಈಶ್ವರಪ್ಪ ಹೀಗೆ ಪಕ್ಷದ ʼಶುದ್ಧೀಕರಣʼದ ಮಾತು ಎತ್ತುತ್ತಿದ್ದಂತೆ ಅವರ ದನಿಗೆ ಟಿಕೆಟ್ ವಂಚಿತ ಇತರ ಹಿರಿಯ ನಾಯಕರೂ ದನಿಗೂಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ, ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಅದರಲ್ಲಿ ಪ್ರಮುಖರು. ಗಮನಿಸಬೇಕಾದ ಅಂಶವೆಂದರೆ; ಈ ಎಲ್ಲರೂ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಅದರಲ್ಲೂ ಡಿ ವಿ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದೇ ಯಡಿಯೂರಪ್ಪ. ಹಾಗೇ ಮಾಧುಸ್ವಾಮಿ ಮತ್ತು ಎಂ ಪಿ ರೇಣುಕಾಚಾರ್ಯ ಅವರಿಬ್ಬರೂ ಯಡಿಯೂರಪ್ಪ ಅವರ ಬಲಗೈ ಬಂಟರಾಗಿ ಅವರೊಂದಿಗೆ ದಶಕಗಳಿಂದ ಜೊತೆಗಿದ್ದವರು. ಅವರೇ ಈಗ ಯಡಿಯೂರಪ್ಪ ವಿರುದ್ಧ ಬಹಿರಂಗ ಟೀಕೆ ಮಾಡುತ್ತಲೇ ಪಕ್ಷದ ʼಶುದ್ಧೀಕರಣʼದ ಮಾತುಗಳನ್ನು ಆಡುತ್ತಿದ್ದಾರೆ!

ಬಿಜೆಪಿಯ ಹಿರಿಯ ನಾಯಕರು ಹೀಗೆ ಪಕ್ಷದ ಶುದ್ಧೀಕರಣದ ಮಾತುಗಳನ್ನು ಆಡುತ್ತಿರುವ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಮಾತನಾಡಿಸಿದಾಗ, “ಪಕ್ಷದಲ್ಲಿ ಈವರೆಗೆ ಈ ನಾಯಕರು ಎಲ್ಲ ಅಧಿಕಾರ ಅನುಭವಿಸಿದ್ದಾರೆ. ಈಗ ಟಿಕೆಟ್ ಸಿಕ್ಕಿಲ್ಲ ಎಂದು ಹೀಗೆ ಶುದ್ಧೀಕರಣದ ಮಾತನಾಡುವುದು ಸರಿಯಲ್ಲ. ಅವರುಗಳು ಹಿರಿಯರು. ಪಕ್ಷದ ವರಿಷ್ಠರು ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ. ಟಿಕೆಟ್ ವಿಷಯದಲ್ಲಿ ಪಕ್ಷದ ಹಿತ ಪರಿಗಣಿಸಿ ವರಿಷ್ಠರು ತೆಗೆದುಕೊಂಡಿರುವ ನಿರ್ಣಯವನ್ನು ಎಲ್ಲರೂ ಒಪ್ಪಲೇಬೇಕು. ಹಿರಿಯ ನಾಯಕರಾದ ಇವರುಗಳು ಕೂಡ ಆ ನಿರ್ಣಯ ಒಪ್ಪಿ ಪಕ್ಷದಲ್ಲಿ ಮುಂದುವರಿಯುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ಪ್ರತಿಕ್ರಿಯಿಸಿದರು. ನಿರ್ದಿಷ್ಟವಾಗಿ ʼಶುದ್ಧೀಕರಣʼ ಅಗತ್ಯವಿದೆಯೇ? ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದರು.

ಆದರೆ, ಡಿ ವಿ ಸದಾನಂದ ಗೌಡ ಅವರು ಕೂಡ ಪಕ್ಷದ ʼಶುದ್ಧೀಕರಣʼ ವಿಷಯವನ್ನು ಮತ್ತೆಮತ್ತೆ ಪ್ರಸ್ತಾಪಿಸುತ್ತಿದ್ದಾರೆ. "ಕೇಂದ್ರದಲ್ಲಿ ಮೋದಿಯವರ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಆದರೆ, ರಾಜ್ಯದಲ್ಲಿ ಪಕ್ಷದ ʼಶುದ್ಧೀಕರಣʼ ಮಾಡುವವರೆಗೆ ನಾನು ವಿರಮಿಸುವುದಿಲ್ಲ" ಎಂದು ಗೌಡರು ಖಡಾಖಂಡಿತವಾಗಿ ನುಡಿದಿದ್ದಾರೆ.

"ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವವರು ಸ್ವಾರ್ಥಿಗಳಾಗಿದ್ದಾರೆ. ತನಗೆ, ತನ್ನ ಮನೆಯವರಿಗೆ, ತನ್ನ ಚೇಲಾಗಳಿಗೆ ಪಕ್ಷ, ಅಧಿಕಾರ ಎಂಬಂತಾಗಿದೆ. ಸ್ಪರ್ಧೆ ಮಾಡಿ ಎಂದು ನನ್ನನ್ನು ಆರತಿ ಮಾಡಿ ಕರೆದುಕೊಂಡು ಬಂದು, ಮಂಗಳಾರತಿ ಮಾಡಿ ಹೊರಗೆ ಕಳಿಸಿದ್ದಾರೆ. ಪಕ್ಷ ಪರಿವಾರವಾದ ರಹಿತ, ಜಾತಿವಾದ ರಹಿತ, ಭ್ರಷ್ಟಾಚಾರರಹಿತವಾಗಿ ರಾಜ್ಯದಲ್ಲಿ ಇರಬೇಕು. ಹಾಗಾಗಿ ಪಕ್ಷ ಶುದ್ಧೀಕರಣವಾಗಬೇಕು ಎಂದು ಬಯಸುವವರು ಒಂದಿಷ್ಟು ಜನ ಪಕ್ಷದಲ್ಲಿ ಇದ್ದಾರೆ. ಅವರೆಲ್ಲರೊಂದಿಗೆ ಸೇರಿ ಪಕ್ಷದ ಶುದ್ಧೀಕರಣ ಮಾಡುವವರೆಗೆ ನಾನು ಸುಮ್ಮನಿರಲಾರೆ" ಎಂದು ಅವರು ಹೇಳಿದ್ದಾರೆ.

ಸದಾನಂದ ಗೌಡರ ಆ ಆಕ್ರೋಶದ ಮಾತುಗಳ ಗುರಿ ಯಾರು ಎಂಬುದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅವರಿಗೆ ಪಕ್ಷದ ಟಿಕೆಟ್ ಕೈ ತಪ್ಪಿರುವುದು ಮತ್ತು ಆ ಟಿಕೆಟ್ ಯಡಿಯೂರಪ್ಪ ಅವರ ಆಪ್ತರೆಂದೇ ಗುರುತಿಸಿಕೊಂಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾಲಾಗಿರುವ ಬೆಳವಣಿಗೆಯಲ್ಲೇ ಗೊತ್ತಾಗುತ್ತದೆ. ಅದೇನೂ ಗುಟ್ಟಲ್ಲ.

ಇದೇ ವರಸೆಯ ಮಾತುಗಳನ್ನು ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಕೂಡ ಹೇಳಿದ್ದಾರೆ. ಹಾಗೇ ದಾವಣಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂ ಪಿ ರೇಣುಕಾಚಾರ್ಯ, ಕೊಪ್ಪಳ ಟಿಕೆಟ್ ವಂಚಿತ ಸಂಸದ ಸಂಗಣ್ಣ ಕರಡಿ ಕೂಡ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ದನಿ ಎತ್ತಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಬಾರಿ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರೇ ಈ ಶುದ್ಧೀಕರಣದ ಗುರಿ ಎಂಬುದು ಕೂಡ ಬಹಿರಂಗ ಸತ್ಯ. ಆದರೆ ಈ ಬಾರಿ ಯಡಿಯೂರಪ್ಪ ಅವರ ಸಾಂಪ್ರದಾಯಿಕ ವಿರೋಧಿ ಬಣದ ಜೊತೆ ಅವರ ಶಿಷ್ಯಗಣವೂ ಕೈಜೋಡಿಸಿದೆ ಎಂಬುದು ವಿಶೇಷ.

ಆದರೆ, ʼಶುದ್ಧೀಕರಣʼದ ಈ ಕೂಗು ಎಷ್ಟು ದಿನ ಮೊಳಗಲಿದೆ? ಚುನಾವಣಾ ಕಣದಲ್ಲಿಯೇ ಸದ್ದಡಗುವುದೇ? ಅಥವಾ ಬಳಿಕವೂ ಜೋರಾಗುವುದೇ ಎಂಬುದು ಬಿಜೆಪಿ ಕರ್ನಾಟಕದ ನಾಯಕತ್ವದ ಭವಿಷ್ಯವನ್ನು ನಿರ್ಧರಿಸಲಿದೆ.

ಅದೇನೇ ಇದ್ದರೂ, ʼಶುದ್ಧೀಕರಣʼ ಎಂಬುದನ್ನು ರಾಜಕೀಯ ಆಚರಣೆಯಾಗಿ ಬಳಸಿದ ಬಿಜೆಪಿಯ ಒಳಗೇ ಈಗ ʼಶುದ್ಧೀಕರಣʼದ ದನಿಗಳು ಗಟ್ಟಿಯಾಗುತ್ತಿರುವುದು ಮಾತ್ರ ಕುತೂಹಲಕಾರಿ ಬೆಳವಣಿಗೆ.

Tags:    

Similar News