ಯೂನುಸ್​​ 'ಪ್ರಜಾಪ್ರಭುತ್ವ ವಿರೋಧಿ ಗುಂಪು'ಗಳ ನಾಯಕ; ಶೇಖ್​ ಹಸೀನಾ ಆರೋಪ

ಬಾಂಗ್ಲಾದೇಶದ ವಿಜಯ ದಿವಸ (ಡಿಸೆಂಬರ್​ 16) ಹಿನ್ನೆಲೆಯಲ್ಲಿ ಮಾತನಾಡಿದ ಶೇಖ್ ಹಸೀನಾ ಅವರು ಹಂಗಾಮಿ ಪ್ರಧಾನಿ ಯೂನುಸ್ ಅವರ ಕಾರ್ಯವೈಖರಿಯನ್ನು ಟೀಕಿಸಿದರು. ಅವರು ಕೋಮುವಾದಿ ಶಕ್ತಿಗಳನಾಯಕ ಎಂದು ಕರೆದರು.;

Update: 2024-12-16 04:05 GMT
ಬಾಂಗ್ಳಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ನೆರೆಯ ದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಆ ದೇಶದೊಂದಿಗಿನ ಸಂಬಂಧ ಹದಗೆಟ್ಟಿದೆ. ಏತನ್ಮಧ್ಯೆ ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸಲು ಭಾರತ ಪ್ರಯತ್ನಿಸುತ್ತಿದ್ದು, ಈ ನಡುವೆ ಭಾರತದ ಆಶ್ರಯದಲ್ಲಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ನೀಡಿದ ಹೇಳಿಕೆಯು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ಭಾನುವಾರ (ಡಿಸೆಂಬರ್ 15) ಸಂದರ್ಶನವೊಂದರಲ್ಲಿಆ ಮಧ್ಯಂತರ ನಾಯಕ ಮುಹಮ್ಮದ್ ಯೂನುಸ್ ಅವರನ್ನು ನಿರಂಕುಶವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿಗಳ ಗುಂಪಿನ ನಾಯಕ ಎಂದು ಕರೆದಿದ್ದಾರೆ. ತನ್ನ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಾಗಿ ಅವರು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಲಿದೆ.

ಯೂನುಸ್ ವಿರುದ್ಧ ವಾಗ್ದಾಳಿ

ಜವಾಬ್ದಾರಿಯಿಲ್ಲದ "ಪ್ರಜಾಪ್ರಭುತ್ವ ವಿರೋಧಿ ಗುಂಪನ್ನು" ಯೂನುಸ್ ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಹಸೀನಾ, ಬಾಂಗ್ಲಾದೇಶದ ನಾಯಕ ''ಬಲಪಂಥೀಯವಾದಿ" ಮತ್ತು ಅವರ ನೇತೃತ್ವದ ಸರ್ಕಾರದ ಮುಖ್ಯ ಉದ್ದೇಶ ವಿಮೋಚನಾ ಯುದ್ಧ ಮತ್ತು ವಿಮೋಚನಾ ಪರ ಮನೋಭಾವವನ್ನು ನಿಗ್ರಹಿಸುವುದು ಎಂದು ಹೇಳಿದರು

ಬಾಂಗ್ಲಾದೇಶವು ಡಿಸೆಂಬರ್ 16 ಅನ್ನು 'ಬಿಜೋಯ್ ದಿಬೋಸ್​' (ವಿಜಯ ದಿನ) ಆಚರಿಸುತ್ತದೆ. ಡಿಸೆಂಬರ್ 16, 1971ರಂದು, ಅಂದಿನ ಪಾಕಿಸ್ತಾನಿ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ. 93,000 ಸೈನಿಕರೊಂದಿಗೆ ಭಾರತದ ಸೇನೆಗೆ ಶರಣಾಗಿದ್ದರು. 13 ದಿನಗಳ ಕಾಲ ನಡೆದ ಯುದ್ಧದ ಬಳಿಕ ಭಾರತ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕಲ್ಪಿಸಿತ್ತು.

'ತೀವ್ರಗಾಮಿ ಕೋಮುವಾದಿ ಶಕ್ತಿಗಳಿಗೆ ಯೂನುಸ್ ಬೆಂಬಲ  

ಸರ್ಕಾರಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್​​ನಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಇದೀಗ ಬಂಗಾಳಿ ಭಾಷೆಯಲ್ಲಿ ಹೇಳಿಕೆ ನೀಡಿದ ಅವರು "ರಾಷ್ಟ್ರ ವಿರೋಧಿ ಗುಂಪುಗಳು" ಅಸಾಂವಿಧಾನಿಕವಾಗಿ ಅಧಿಕಾರ ವಶಪಡಿಸಿಕೊಂಡಿವೆ ಎಂದು ಹೇಳಿದ್ದಾರೆ.

"ಯೂನುಸ್​ ಅಧಿಕಾರವನ್ನು ಕೈಗೆತ್ತಿಕೊಂಡಿದ್ದಾರೆ ಹಾಗೂ ಎಲ್ಲಾ ಸಾರ್ವಜನಿಕ ಕಲ್ಯಾಣ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ" ಎಂದು ಹಸೀನಾ ಆರೋಪಿಸಿದರು. ಬೆಲೆ ಏರಿಕೆಯಿಂದ ಬಾಂಗ್ಲಾದೇಶದ ಜನರು ತತ್ತರಿಸುವಂತಾಗಿದೆ ಎಂದು ಹೇಳಿದರು.

"ಈ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗದ ಕಾರಣ ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ವಿಮೋಚನಾ ಯುದ್ಧ ಮತ್ತು ವಿಮೋಚನಾ ಪರ ಹೋರಾಟದ ಮನೋಭಾವವನ್ನು ನಿಗ್ರಹಿಸುವುದು ಮತ್ತು ಅವರ ಧ್ವನಿಯನ್ನು ಅಡಗಿಸುವುದ ಅವರ ಮುಖ್ಯ ಉದ್ದೇಶ" ಎಂದು ಹಸೀನಾ ಹೇಳಿದರು.

ಯೂನುಸ್​​ ಅವರು ಸ್ವಾತಂತ್ರ್ಯ ವಿರೋಧಿ ತೀವ್ರಗಾಮಿ ಕೋಮುವಾದಿ ಶಕ್ತಿಗಳನ್ನು ರಹಸ್ಯವಾಗಿ ಬೆಂಬಲಿಸುತ್ತಿದ್ದಾರೆ. ವಿಮೋಚನಾ ಯುದ್ಧ ಮತ್ತು ಅದರ ಇತಿಹಾಸದ ಬಗ್ಗೆ ಫ್ಯಾಸಿಸ್ಟ್ ಯೂನುಸ್ ಸೇರಿದಂತೆ ಈ ಸರ್ಕಾರದ ನಾಯಕರ ಸಂವೇದನಾಶೀಲತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಭಾರತ-ಬಾಂಗ್ಲಾದೇಶ ಸಂಬಂಧ ಹಾಳು 

ಅವಾಮಿ ಲೀಗ್ ನಾಯಕಿ ಹಸೀನಾ ಬಾಂಗ್ಲಾದೇಶವನ್ನು ತೊರೆದಾಗಿನಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾದ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಬಿಗಡಾಯಿಸಿವೆ.

ಆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಸರಣಿ ದಾಳಿಗಳು ನಡೆದಿವೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕಳೆದ ವಾರ ಢಾಕಾಗೆ ಭೇಟಿ ನೀಡಿ ಭಾರತದ ಕಳವಳಗಳನ್ನು ವ್ಯಕ್ತಪಡಿಸಿದ್ದರು.

"ಈ ಪರಸ್ಪರ ಸಹಕಾರವು ನಮ್ಮ ಎರಡೂ ಜನರ ಹಿತದೃಷ್ಟಿಯಿಂದ ಒಳಿತು. ಆ ನಿಟ್ಟಿನಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಂದಿಗೆ ಕೆಲಸ ಮಾಡುವ ಭಾರತದ ಬಯಕೆ ವ್ಯಕ್ತಪಡಿಸುತ್ತಿದ್ದೇನೆ" ಎಂದು ಮಿಸ್ರಿ ಢಾಕಾದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದ್ದರು. 

Tags:    

Similar News