ಪಾಕಿಸ್ತಾನ ವಿರುದ್ಧ ಭಾರತದ ಭಯೋತ್ಪಾದನಾ ವಿರೋಧಿ ದಾಳಿಯಿಂದ ಬಾಂಗ್ಲಾದೇಶವೂ ಪಾಠ ಕಲಿಯಬೇಕು

ಅವಾಮಿ ಲೀಗ್ ಪಕ್ಷದ ಆಡಳಿತಕ್ಕೆ ಬರುವ ಮೊದಲು, ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶವೂ ಭಾರತ ವಿರೋಧಿ ಶಕ್ತಿಗಳಿಗೆ ಒಂದು ಪ್ರಮುಖ ಸುರಕ್ಷಿತ ನೆಲೆಯಾಗಿತ್ತು. ಈಗ, ಯೂನುಸ್ ಸರ್ಕಾರದ ಆಡಳಿತದ ಬಳಿಕ ಅದೇ ಸನ್ನಿವೇಶ ಕಂಡು ಬರುತ್ತಿದೆ.;

Update: 2025-05-09 12:19 GMT

ಭಾರತವು ತನ್ನ ನೆರೆಯ ಪಾಕಿಸ್ತಾನದ ಉಗ್ರರನ್ನು ಪೋಷಿಸುವ ನಡೆಯ ವಿರುದ್ದ ಸಮರ ಸಾರಿದೆ. ಇದು ಬಾಂಗ್ಲಾದೇಶಕ್ಕೂ ಕಣ್ತೆರೆಬೇಕಾದ ಮಹತ್ವದ ಸಂದರ್ಭ ಎಂಬುದರಲ್ಲಿ ಎರಡು ಮಾತಿಲ್ಲ. ಮುಹಮ್ಮದ್ ಯೂನುಸ್ ನೇತೃತ್ವದ ತಾತ್ಕಾಲಿಕ ಸರ್ಕಾರ ಬಾಂಗ್ಲಾದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಆ ದೇಶವು ಮತ್ತೆ ಭಯೋತ್ಪಾದಕರಿಗೆ ನೆಲೆಯಾಗುತ್ತಿದೆ. ಭಾರತ ವಿರೋಧಿ ಶಕ್ತಿಗಳನ್ನು ಪೋಷಿಸುತ್ತಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಭಾರತದ ಕಟ್ಟರ್ ವಿರೋಧಿ ಪಾಕ್​ ಜತೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳುತ್ತಿದೆ. ಇದು ಅತ್ಯಂತ ಆತಂಕಕಾರಿ ವಿಷಯ.

ಅವಾಮಿ ಲೀಗ್ ಪಕ್ಷದ ಆಡಳಿತಕ್ಕೆ ಬರುವ ಮೊದಲು, ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶವೂ ಭಾರತ ವಿರೋಧಿ ಶಕ್ತಿಗಳಿಗೆ ಒಂದು ಪ್ರಮುಖ ಸುರಕ್ಷಿತ ನೆಲೆಯಾಗಿತ್ತು. ಈಗ, ಯೂನುಸ್ ಸರ್ಕಾರದ ಆಡಳಿತದ ಬಳಿಕ ಅದೇ ಸನ್ನಿವೇಶ ಕಂಡು ಬರುತ್ತಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ದಂಗೆಕೋರರ ಗುಂಪುಗಳನ್ನು ಬೆಳೆಸಲು ಮತ್ತು ಅವರಿಗೆ ನೆರವು ನೀಡಲು ಬಾಂಗ್ಲಾದೇಶವು ಸಹಾಯ ಮಾಡುತ್ತಿರುವ ಅಪಾಯಕಾರಿ ಬೆಳವಣಿಗೆ ನಿಧಾನವಾಗಿ ಗೋಚರಿಸುತ್ತಿದೆ.

ಈಶಾನ್ಯ ರಾಜ್ಯಗಳಲ್ಲಿ ಹೊಸ ಬಂಡಾಯ ಗುಂಪುಗಳಿಗೆ ಚೈತನ್ಯ

ಭಾರತೀಯ ಭದ್ರತಾ ಸಂಸ್ಥೆಗಳ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದ ರಕ್ಷಣಾ ಗುಪ್ತಚರ ಸಂಸ್ಥೆ (DGFI) ಆಶ್ರಯದಲ್ಲಿ ರೂಪುಗೊಂಡ 'ತ್ರಿಪುರಾ ಯುನೈಟೆಡ್ ನ್ಯಾಷನಲ್ ಫ್ರಂಟ್ (TUNF)' ಈಶಾನ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸ ದಂಗೆಕೋರ ಸಂಘಟನೆಯಾಗಿದೆ. TUNF ತನ್ನ ಲೆಟರ್‌ಹೆಡ್‌ನಲ್ಲಿ 2019ರಲ್ಲಿ ಸ್ಥಾಪನೆಗೊಂಡಿದ್ದೇವೆ ಎಂದು ಹೇಳಿಕೊಂಡರೂ, ಇತ್ತೀಚೆಗೆ ಬಂಧಿತರಾದ ಸದಸ್ಯರು ಬಾಯ್ಬಿಟ್ಟ ಪ್ರಕಾರ 2024ರ ಕೊನೆಯಲ್ಲಿ ಅಂದರೆ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಪತನದ ನಂತರ ಅದು ಹುಟ್ಟಿಕೊಂಡಿದೆ. ಇನ್ನೂ ಹೇಳುವುದಾದರೆ, ಬಾಂಗ್ಲಾದೇಶದ ಚಿತ್ತಗಾಂಗ್​ ಹಿಲ್ ಟ್ರಾಕ್ಟ್ಸ್ ಪ್ರದೇಶದಲ್ಲಿ ಸಂಘಟನೆ ರೂಪುಗೊಂಡಿದೆ.

ಈ ಗುಂಪಿನಲ್ಲಿ ಹೆಚ್ಚಾಗಿ ರಿಯಾಂಗ್/ಬ್ರೂ ಸಮುದಾಯದ ಹಿಂದಿನ NLFT ಕಾರ್ಯಕರ್ತರಿದ್ದಾರೆ. ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ವೇಳೆಯೂ ಅವರೆಲ್ಲರೂ ಶರಣಾಗಲು ನಿರಾಕರಿಸಿದ್ದವರು. TUNF, THBTA ಎಂಬ ಗುಂಪಿನ ಒಂದು ಶಾಖೆಯಾಗಿದ್ದು. ಇದನ್ನು ರಚಿಸಲು ಕಳೆದ ವರ್ಷ ಬಾಂಗ್ಲಾದೇಶ ಸೇನೆಯ 203ನೇ ಇನ್‌ಫೆಂಟ್ರಿ ಬ್ರಿಗೇಡ್ ನೆರವು ನೀಡಿದೆ ಎಂಬ ಆರೋಪವಿದೆ.

ಈ ಗುಂಪು ಸಶಸ್ತ್ರ ಹೋರಾಟದ ಮೂಲಕ ಸಾರ್ವಭೌಮ ತ್ರಿಪುರಾ ರಾಜ್ಯವನ್ನು ಸ್ಥಾಪಿಸುವ ಗುರಿ ಹೊಂದಿದೆ. ಬಂಧಿತ ನಾಯಕರ ವಿಚಾರಣೆ ವೇಳೆ, ಗುಂಪಿನ ರಚನೆ, ಕಾರ್ಯನಿರ್ವಹಣೆ ಸ್ಥಳಗಳು (ಸಾಜೆಕ್ ಬೆಟ್ಟ, ಕಚಲಾಂಗ್ ಅರಣ್ಯ ಪ್ರದೇಶ) ಮತ್ತು DGFI ಹಾಗೂ ಬಾಂಗ್ಲಾದೇಶ ಸೇನಾ ಅಧಿಕಾರಿಗಳೊಂದಿಗಿನ ಅವರು ಹೊಂದಿರುವ ನಿಯಮಿತ ಸಂಪರ್ಕದ ಬಗ್ಗೆ ಮಾಹಿತಿ ಲಭ್ಯವಾಗಿದೆ. DGFI ನಿರ್ದೇಶನದಂತೆ ಬಾಂಗ್ಲಾದೇಶ ಸೇನೆಯು ಈ ಗುಂಪಿಗೆ ಆಶ್ರಯ, ತರಬೇತಿ ಮತ್ತು AK ಮಾದರಿಯ ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ವರದಿಗಳು ಹೇಳುತ್ತವೆ.

ಪಾಕಿಸ್ತಾನದ ಐಎಸ್‌ಐ ನೆರವು

ಭಾರತದ ಈಶಾನ್ಯದಲ್ಲಿ ಬಾಂಗ್ಲಾದೇಶ ಸೇನೆಯ ಗುಪ್ತ ಯೋಜನೆಗಳನ್ನು ರೂಪಿಸುವಲ್ಲಿ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ISI) ಪಾತ್ರವನ್ನೂ ತಳ್ಳಿಹಾಕಲಾಗದು. ಈ ವರ್ಷದ ಆರಂಭದಲ್ಲಿ ಮೇಜರ್ ಜನರಲ್ ಶಾಹಿದ್ ಅಮೀರ್ ಅಫ್ಸರ್ ನೇತೃತ್ವದ ಉನ್ನತ ಮಟ್ಟದ ISI ತಂಡ, ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ULFA) ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಭೇಟಿಯಾಗಿತ್ತು ಮತ್ತು ಭಾರತದ ಗಡಿ ಸಮೀಪವಿರುವ "ಸೂಕ್ಷ್ಮ ಪ್ರದೇಶಗಳಿಗೆ" ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಇದು ಬಾಂಗ್ಲಾದೇಶದ ನೆಲದಲ್ಲಿ ಪಾಕಿಸ್ತಾನದ ಪರೋಕ್ಷ ಪಾತ್ರದ ಸ್ಪಷ್ಟ ಸೂಚನೆಯಾಗಿದೆ. 1990ರ ದಶಕದ ಅಂತ್ಯದಲ್ಲಿ ಮತ್ತು 2000ದ ದಶಕದ ಮಧ್ಯಭಾಗದಲ್ಲಿ ಇಂತಹ ISI-ಬೆಂಬಲಿತ ಕಾರ್ಯಾಚರಣೆಗಳು ಬಾಂಗ್ಲಾದೇಶವನ್ನು ಭಾರತ ವಿರೋಧಿ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಪುನರುಜ್ಜೀವನ ಮತ್ತು ಪಾಕ್ ಸಂಪರ್ಕ

ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳು ಕೂಡ ಭಾರತದಲ್ಲಿ ತಮ್ಮ ಸ್ಲೀಪರ್​​ ಸೆಲ್​ಗಳನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿವೆ. ಆಗಸ್ಟ್‌ನಲ್ಲಿ ಯೂನುಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಭಯೋತ್ಪಾದಕ ಗುಂಪುಗಳ ನಾಯಕರು ಜೈಲಿನಿಂದ ಪರಾರಿಯಾಗಿದ್ದರು. ಕೆಲವರು ಬಿಡುಗಡೆಯಾಗಿದ್ದರು. (ಉದಾಹರಣೆಗೆ ABT ಮುಖ್ಯಸ್ಥ ಮುಫ್ತಿ ಜಾಶಿಮುದ್ದೀನ್ ರಹಮಾನಿ, JAFHS ಸಂಸ್ಥಾಪಕ ಶಮೀಮ್ ಮಹ್ಫುಜ್, ABT ಯ ಭಾರತ ಕಾರ್ಯಾಚರಣೆಯ ಮುಖ್ಯಸ್ಥ ಇಕ್ರಾಮುಲ್ ಹಕ್ ಉರ್ಫ್ ಅಬು ತಲ್ಹಾ). ABT ಮತ್ತು ಇತರ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪುಗಳು ಇತ್ತೀಚೆಗೆ ಪಾಕಿಸ್ತಾನದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ ಜತೆ ಮತ್ತೆ ಸಂಪರ್ಕ ಸಾಧಿಸಿಕೊಂಡಿವೆ. ಬಾಂಗ್ಲಾದೇಶದ ನೆಲವನ್ನು ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಲು ಬಳಸುವ ಮಾರ್ಗಗಳಾಗಿ ಕಂಡುಕೊಂಡಿವೆ. ಹಮಾಸ್‌ನ ಹಿರಿಯ ನಾಯಕರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದು (ಶೇಖ್ ಖಾಲಿದ್ ಮಿಶಾಲ್, ಖಾಲಿದ್ ಅಲ್-ಕದೌಮಿ) ಮತ್ತು ಅಲ್-ಕದೌಮಿ POKಯಲ್ಲಿ JeM/LeT ನಾಯಕರೊಂದಿಗೆ ಸಭೆ ನಡೆಸಿದ್ದು, ಭಾರತ ವಿರೋಧಿ ಚಟುವಟಿಕೆಗಳಲ್ಲಿ ಹಮಾಸ್‌ನ ಪಾತ್ರದ ಸೂಚನೆ ನೀಡುತ್ತದೆ. JMB ನಾಯಕ ಗೋಲಂ ಸರೋವರ್ ರಹತ್ (2014 ರ ಖಗ್ರಗರ್ ಸ್ಫೋಟ ಆರೋಪಿ) ಈ ವರ್ಷ ಫೆಬ್ರವರಿಯಲ್ಲಿ ಯೂನುಸ್ ಜೊತೆಗೆ ಕಾಣಿಸಿಕೊಂಡಿದ್ದು, ತಾತ್ಕಾಲಿಕ ಸರ್ಕಾರವು ಉಗ್ರ ಶಕ್ತಿಗಳ ಬಗ್ಗೆ ಮೃದು ಧೋರಣೆ ಹೊಂದಿದೆ ಎಂಬುದಕ್ಕೆ ಪ್ರಬಲ ಪುರಾವೆ.

ಭಾರತದ ಸ್ಪಷ್ಟ ಸಂದೇಶ ಮತ್ತು ಪಾಠ

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತವು ಪಾಕಿಸ್ತಾನದೊಳಗೆ ನಡೆಸಿದ ಭಯೋತ್ಪಾದಕ ವಿರೋಧಿ ದಾಳಿ 'ಆಪರೇಷನ್ ಸಿಂದೂರ'ವು ಅತ್ಯಂತ ಮಹತ್ವ ಪಡೆದಿದೆ. ಇದು ಲಷ್ಕರ್-ಎ-ತಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್‌ನಂತಹ ಗುಂಪುಗಳ ನೆಲೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ನಿಖರ ಮತ್ತು ಬೃಹತ್​ ಪ್ರಮಾಣದ ಕಾರ್ಯಾಚರಣೆಯಾಗಿತ್ತು. ಈ ದಾಳಿಯು ಭಯೋತ್ಪಾದಕರಿಗೆ ಮತ್ತು ಅವರಿಗೆ ಬೆಂಬಲ ನೀಡುವ ರಾಷ್ಟ್ರಗಳಿಗೆ ಭಾರತದ ಶೂನ್ಯ ಸಹಿಷ್ಣುತೆ ನೀತಿಯನ್ನು ಸ್ಪಷ್ಟವಾಗಿ ತೋರಿಸಿದೆ.

ಪಾಕಿಸ್ತಾನದಲ್ಲಿ ನಡೆಸಿದ ಈ ದಾಳಿಯು ಬಾಂಗ್ಲಾದೇಶಕ್ಕೆ ಒಂದು ಗಂಭೀರ ಎಚ್ಚರಿಕೆ. ಭಾರತವು ತನ್ನ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಯೂನುಸ್ ಸರ್ಕಾರದ ಆಡಳಿತದಲ್ಲಿ TUNF ನಂತಹ ಬಂಡಾಯ ಗುಂಪುಗಳಿಗೆ ಆಶ್ರಯ ನೀಡುವುದು, ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದು ಅಥವಾ ಭಾರತ ವಿರೋಧಿ ಶಕ್ತಿಗಳಿಗೆ ಬಾಂಗ್ಲಾದೇಶದ ನೆಲೆಯನ್ನು ಬಳಸಲು ಅವಕಾಶ ನೀಡುವುದು ಗಂಭೀರ ಪರಿಣಾಮಗಳನ್ನು ತಂದೊಡ್ಡಬಹುದು ಎಂಬುದನ್ನು ಬಾಂಗ್ಲಾದೇಶ ಅರಿಯಬೇಕು. ಭಾರತದ ಈಗಿನ ದೃಢವಾದ ಭದ್ರತಾ ನೀತಿಯನ್ನು ಗಮನಿಸಿದರೆ ಇದು ಅತ್ಯಂತ ಅಪಾಯಕಾರಿ ನಡೆ.

Tags:    

Similar News