ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ ಬರಾಕ್, ಮಿಶೆಲ್

ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಮತ್ತು ಅವರ ಪತ್ನಿ ಮತ್ತು ಏಷ್ಯಾದ ಮೂಲದ ಉಪಾಧ್ಯಕ್ಷೆ ನಡುವಿನ ಸ್ನೇಹ ಮತ್ತು ಸಂಬಂಧಕ್ಕೆ ಈ ಬೆಂಬಲ ಪೂರಕವಾಗಿದೆ

Update: 2024-07-26 10:46 GMT

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಅವರು ಕಮಲಾ ಹ್ಯಾರಿಸ್ ಅವರ ಹೆಸರನ್ನು ಅನುಮೋದಿಸಿದ್ದಾರೆ. ಇದರಿಂದ ಕಮಲಾ ಅವರಿಗೆ ರಾಷ್ಟ್ರದ ಇಬ್ಬರು ಜನಪ್ರಿಯ ಡೆಮೋಕ್ರಾಟ್‌ಗಳ ನಿರ್ಣಾಯಕ ಬೆಂಬಲ ದೊರೆತಂತೆ ಆಗಿದೆ.

ಶುಕ್ರವಾರ (ಜುಲೈ 26) ಬೆಳಗ್ಗೆ ಕಂಡುಬಂದ ವಿಡಿಯೋದಲ್ಲಿ ಹ್ಯಾರಿಸ್ ಅವರು ಒಬಾಮಾ ದಂಪತಿಯಿಂದ ಫೋನ್ ಕರೆಯನ್ನು ಸ್ವೀಕರಿಸುತ್ತಿರುವುದನ್ನು ತೋರಿಸುತ್ತದೆ. ಅಧ್ಯಕ್ಷ ಜೋ ಬಿಡೆನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಮುಂಚೂಣಿಗೆ ಬಂದ ಕಮಲಾ ಅವರು ಕ್ರಮೇಣ ವೇಗವನ್ನು ಹೆಚ್ಚಿಸುತ್ತಿದ್ದಾರೆ. 

ಐತಿಹಾಸಿಕ ಸಂಬಂಧ: ರಾಷ್ಟ್ರದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಮತ್ತು ಅವರ ಪತ್ನಿ ಹಾಗೂ ಏಷ್ಯಾದ ಮೂಲದ ಮೊದಲ ಮಹಿಳೆ ನಡುವಿನ ಸ್ನೇಹ ಮತ್ತು ಐತಿಹಾಸಿಕ ಸಂಬಂಧವನ್ನು ಎತ್ತಿ ತೋರಿಸುತ್ತದೆ. ʻಮಿಶೆಲ್ ಮತ್ತು ನಾನು ನಿಮ್ಮನ್ನು ಅನುಮೋದಿಸಲು ಮತ್ತು ಚುನಾವಣೆ ಮೂಲಕ ಓವಲ್ ಕಚೇರಿಯಲ್ಲಿ ನಿಮ್ಮನ್ನು ಕಾಣಲು ಹೆಮ್ಮೆಪಡುತ್ತೇವೆ,ʼ ಎಂದು ಒಬಾಮಾ ಅವರು ಹ್ಯಾರಿಸ್‌ ಅವರಿಗೆ ಹೇಳಿದರು. 

2008ರ ಚುನಾವಣೆಗೆ ಮೊದಲಿನಿಂದಲೇ ಒಬಾಮಾ ಅವರ ಪರಿಚಯವಿರುವ ಹ್ಯಾರಿಸ್, ಅವರ ಸ್ನೇಹಕ್ಕಾಗಿ ಧನ್ಯವಾದ ಅರ್ಪಿಸಿದರು. ಒಬಾಮಾ ಪ್ರಾಯಶಃ ಹ್ಯಾರಿಸ್ ಅವರನ್ನು ಔಪಚಾರಿಕವಾಗಿ ಅನುಮೋದಿಸಿದ ಪಕ್ಷದ ಕೊನೆಯ ಪ್ರಮುಖ ಮುಖಂಡ. ಒಬಾಮಾ ದಂಪತಿ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಅತಿ ಹೆಚ್ಚು ನಿಧಿ ಸಂಗ್ರಹ ಮಾಡಿಕೊಡುವವರಾಗಿದ್ದಾರೆ. ಈಗಾಗಲೇ 120 ಮಿಲಿಯನ್‌ ಡಾಲರ್‌ ಗಿಂತ ಹೆಚ್ಚು ಹಣ ಸಂಗ್ರಹಿಸಿದ್ದಾರೆ.

ಅಸೋಸಿಯೇಟೆಡ್ ಪ್ರೆಸ್ ಸಮೀಕ್ಷೆ ಪ್ರಕಾರ, ಹ್ಯಾರಿಸ್ ಈಗಾಗಲೇ ಚಿಕಾಗೋದಲ್ಲಿ ಆಗಸ್ಟ್ 19 ರಿಂದ ಪ್ರಾರಂಭವಾಗುವ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಶನ್‌ಗೆ ಬಹುಪಾಲು ಪ್ರತಿನಿಧಿಗಳ ಸಾರ್ವಜನಿಕ ಬೆಂಬಲ ಪಡೆದುಕೊಂಡಿದ್ದಾರೆ. ಆಗಸ್ಟ್ 7 ರ ವೇಳೆಗೆ ಹ್ಯಾರಿಸ್ ಅವರು ಸಹವರ್ತಿಯನ್ನು ಹೆಸರಿಸಬೇಕಿದೆ. 

ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ, ಸೆನೆಟ್ ನಾಯಕ ಚಕ್ ಶುಮರ್, ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್, ಜಿಮ್ ಕ್ಲೈಬರ್ನ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಈಗಾಗಲೇ ಹ್ರಾರಿಸ್‌ ಅವರ ಉಮೇದುವಾರಿಕೆಯನ್ನು ಅನುಮೋದಿಸಿದ್ದಾರೆ.

Tags:    

Similar News