ಅಮೆರಿಕ ವಿದ್ಯಾರ್ಥಿ ವಿಸಾ ಸಂದರ್ಶನಕ್ಕೆ ಬ್ರೇಕ್: ಆತಂಕದಲ್ಲಿ ಸಾವಿರಾರು ವಿದ್ಯಾರ್ಥಿಗಳು
ಅಮೆರಿಕದ ಹೊಸ ವಿಸಾ ಕ್ರಮ: ವಿದೇಶಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮ ಪರಿಶೀಲನೆ ವಿಸ್ತರಣೆ; ಏನಿದರ ಅರ್ಥ? ಅಮೆರಿಕದಲ್ಲಿ ಅಧ್ಯಯನ ಮಾಡಲು ಬರುವ ಎಲ್ಲ ಅಂತಾರಾಷ್ಟ್ರೀಯ ವಿದ್ಯಾರ್ಥಿಕಗಳಿಗೆ ಸಾಮಾಜಿಕ ಮಾಧ್ಯಮ ಪರಿಶೀಲನೆ ಬೇಕೆ?;
ಅಮೆರಿಕದ ರಾಯಭಾರ ಕಚೇರಿಗಳು ಮತ್ತು ವಿಶ್ವಾದ್ಯಂತ ಇರುವ ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಹೊಸದೊಂದು ಸುತ್ತೋಲೆ ಹೊರಡಿಸಿದೆ. ಹೊಸ ವಿಸಾ ಸಂದರ್ಶನದ ವೇಳಾಪಟ್ಟಿಯನ್ನು ತಕ್ಷಣ ನಿಲ್ಲಿಸಬೇಕು ಎಂಬುದು ಅದರಲ್ಲಿರುವ ಒಕ್ಕಣಿಕೆ. ಇದು ವಿದೇಶಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆತಂಕವನ್ನು ಸೃಷ್ಟಿಸಿದೆ.
ಎಲ್ಲ ವಿದ್ಯಾರ್ಥಿಗಳು ಮತ್ತು ವಿನಿಮಯ ಸಂದರ್ಶಕರ ವಿಸಾ ಅರ್ಜಿಗಳಿಗೆ ಸಾಮಾಜಿಕ ಮಾಧ್ಯಮ ಪರಿಶೀಲನೆ ನಡೆಸಬೇಕು ಎಂದು ಅಮೆರಿಕ ಸರ್ಕಾರದ ಯೋಜನೆ ರೂಪಿಸಿದ ಬಳಿಕ ಈ ಆದೇಶ ಹೊರಬಿದ್ದಿದೆ.
“ಮುಂದಿನ ಮಾರ್ಗದರ್ಶಿ ಸೂತ್ರಗಳು ಹೊರಬೀಳುವ ತನಕ ಕೌನ್ಸಲರ್ ವಿಭಾಗಗಳು ಯಾವುದೇ ಹೆಚ್ಚುವರಿ ವಿದ್ಯಾರ್ಥಿ ಅಥವಾ ವಿನಿಮಯ ಸಂದರ್ಶಕರ (ಎಫ್.ಎಂ. ಮತ್ತು ಜೆ) ವಿಸಾ ನೇಮಕಾತಿಯನ್ನು ಸೇರ್ಪಡೆಗೊಳಿಸಬಾರದು” ಎಂದು ವಿದೇಶಾಂಗ ಇಲಾಖೆಯ ಸಂದೇಶದಲ್ಲಿ ತಿಳಿಸಲಾಗಿದೆ.
ಅಮೆರಿಕಕ್ಕೆ ಅಧ್ಯಯನಕ್ಕೆಂದು ಬರುವ ವಿದ್ಯಾರ್ಥಿಗಳು ಹಾಗೂ ವಿನಿಮಯ ಸಂದರ್ಶಕರ ಸಾಮಾಜಿಕ ಮಾಧ್ಯಮದ ಪರಿಶೀಲನೆಗೆ ಸಂಬಂಧಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ಇಲಾಖೆಯು ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ವಿಸಾ ನೇಮಕಾತಿ ವೇಳಾಪಟ್ಟಿಗೆ ತಡೆ ನೀಡುವಂತೆ ಸೂಚಿಸಲಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ರಾಯಿರ್ಟ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ವರ್ಷದ ಅಂಕಿ-ಸಂಖ್ಯೆಯ ಪ್ರಕಾರ ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ಹತ್ತು ಲಕ್ಷಕ್ಕೂ ಅಧಿಕ. ಅದು ಅಮೆರಿಕದ ಆರ್ಥಿಕತೆಗೆ ಸುಮಾರು 43.8 ಶತಕೋಟಿ ಡಾಲರ್ ಕೊಡುಗೆ ನೀಡುತ್ತಿದೆ ಎಂದು ಎನ್ಎಎಫ್ಎಸ್ಎ ಸಂಘಟನೆ ತಿಳಿಸಿದೆ.
ಅಮೆರಿಕ ಸರ್ಕಾರ ಹಾಕಿರುವ ಈ ತಡೆಯು ವಿಸಾ ಪರಿಸ್ಕರಣೆಯನ್ನು ಇನ್ನಷ್ಟು ವಿಳಂಬಗೊಳಿಸುವ ಸಾಧ್ಯತೆ ದಟ್ಟವಾಗಿದೆ ಹಾಗೂ ತಮ್ಮ ಆದಾಯಕ್ಕಾಗಿ ವಿದೇಶಿ ವಿದ್ಯಾರ್ಥಿಗಳನ್ನು ಅವಲಂಬಿಸಿರುವ ವಿಶ್ವವಿದ್ಯಾಲಯಗಳ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
ಏನಿದು ಸಾಮಾಜಿಕ ಮಾಧ್ಯಮ ಪರಿಶೀಲನೆ?
ಅರ್ಜಿದಾರರ ಅರ್ಹತೆಯನ್ನು ನಿರ್ಣಯಿಸಲು ಅವರ ಆನ್ಲೈನ್ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುವುದೇ ಸಾಮಾಜಿಕ ಮಾಧ್ಯಮ ಪರಿಶೀಲನೆ. ಅಪೇಕ್ಷಿತ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಗಳನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸುತ್ತಾರೆ. ಅದರ ಆಧಾರದಲ್ಲಿ ಅವರಿಗೆ ಅಮೆರಿಕದ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲು ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.
ಅಂದರೆ ಅರ್ಜಿದಾರರ ಸಾಮಾಜಿಕ ಮಾಧ್ಯಮ ತಾಣಗಳಾದ ಎಕ್ಸ್, ಫೇಸ್ಬುಕ್, ಟಿಕ್-ಟಾಕ್, ಲಿಂಕ್ಡಿನ್ ಮತ್ತು ಇನ್ನೂ ಹಲವಾರು ಖಾತೆಗಳ ಪರಿಶೀಲನೆ ನಡೆಸುವುದು ಈ ಕ್ರಮದಲ್ಲಿ ಒಳಗೊಂಡಿರುತ್ತದೆ.
ಕಳೆದ ಮಾರ್ಚ್ ತಿಂಗಳಿನಿಂದ ಇದನ್ನು ಕೌನ್ಸಲರ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ವಿದ್ಯಾರ್ಥಿಗಳು ಪ್ಯಾಲೆಸ್ತಿನಿಯ ಪರ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಮತ್ತು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವುದು ಬಹಿರಂಗವಾಗಿತ್ತು. ಆ ಮಾಧ್ಯಮ ಪೋಸ್ಟ್ ಗಳ ಸ್ಕ್ರೀನ್-ಶಾಟ್ ಪಡೆದುಕೊಂಡು ಅದನ್ನು ‘ಸಂಭಾವ್ಯ ಅವಹೇಳನಕಾರಿ’ ಎಂದು ಪರಿಗಣಿಸಲಾಗಿತ್ತು. ಅಂತಹ ಪೋಸ್ಟ್ ಹಾಕಿ ಬಳಿಕ ಅದನ್ನು ಡಿಲೀಟ್ ಮಾಡಿದ್ದರೂ ಅದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು.
ಇದು ಚಳವಳಿಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಕಥೆಯಾಯಿತು. ಆದರೆ ಇದನ್ನು ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯ ಮಾಡಲು ಸರ್ಕಾರ ನಿರ್ಧರಿಸಿತು.
ನಿಗದಿಯಾಗಿರುವ ಸಂದರ್ಶನಗಳ ಕಥೆ ಏನು?
ಈಗಾಗಲೇ ವೇಳಾಪಟ್ಟಿ ಅಥವಾ ನೇಮಕಾತಿ ನಿಗದಿಯಾಗಿರುವ ವಿದ್ಯಾರ್ಥಿಗಳು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಅದು ತನ್ನ ಈಗಿನ ಮಾರ್ಗದರ್ಶನದಂತೆ ಮುಂದುವರಿಯಲಿದೆ. ಆದರೆ ನೇಮಕಾತಿ ಪಡೆಯದೇ ಇದ್ದವರನ್ನು ಈಗಾಗಲೇ ಮುಂದೂಡಲಾಗಿದೆ ಎಂದು ರುಬಿಯೋ ತಿಳಿಸಿದ್ದಾರೆ.
ಅಷ್ಟಕ್ಕೂ ಸರ್ಕಾರ ಯಾವೆಲ್ಲ ಪರಿಶೀಲನೆ ನಡೆಸಲಿದೆ ಎನ್ನುವ ಬಗ್ಗೆ ವಿದೇಶಾಂಕ ಇಲಾಖೆ ಇನ್ನೂ ನಿರ್ಧರಿಸಿಲ್ಲ. ಆದರೆ ಭಯೋತ್ಪಾದನೆ ಮತ್ತು ಯಹೂದ್ಯ ವಿರೋಧಿ ನೀತಿಯನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ನಿಗದಿಪಡಿಸುವ ಸಾಧ್ಯತೆಗಳಿವೆ.
ಈ ಹಿಂದೆ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಮೇಲೆ ಕ್ರಮ ಕೈಗೊಂಡ ಉದಾಹರಣೆಗಳೂ ಇವೆ. ಇದರಲ್ಲಿ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳನ್ನೂ ಬಿಟ್ಟಿಲ್ಲ ಎಂಬುದು ಗಮನಾರ್ಹ.
ಕೆಲವು ವಿಶ್ವವಿದ್ಯಾಲಯಗಳು ತೀರಾ ಎಡಪಂಥೀಯ ಚಿಂತನೆಗಳಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಆಡಳಿತ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮ ಪರಿಶೀಲನೆ ಎಂಬ ಅಸ್ತ್ರವನ್ನು ಹಿಡಿದು ಮುಂದೆಬಂದಿದೆ.
ಸಾವಿರಾರು ವಿಸಾ ರದ್ದು
ಸಾವಿರಾರು ವಿದ್ಯಾರ್ಥಿಗಳ ವಿಸಾ ಈಗಾಗಲೇ ರದ್ದಾಗಿದೆ ಎಂದು ಕಳೆದ ವಾರವೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೋ ಹೇಳಿದ್ದು ದೊಡ್ಡ ಆತಂಕ ಸೃಷ್ಟಿಸಿತ್ತು. ಇನ್ನೇನು ಹೊಸ ಶೈಕ್ಷಣಿಕ ವರ್ಷ ಆರಂಭವಾಗಲು ತಿಂಗಳುಗಳಿರುವಾಗಲೇ ವಿಸಾ ಸಂದರ್ಶನಗಳನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಸಕಾಲದಲ್ಲಿ ಅಮೆರಿಕ ತಲುಪುವುದು ಕಷ್ಟಸಾಧ್ಯ.
ಅಮೆರಿಕ ಈ ಹೊಸ ನೀತಿ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಬದಲಾಗಿ ಸಂಶೋಧನೆ, ಬೋಧನೆ ಮತ್ತು ಶಿಕ್ಷಣದ ಹಣಕಾಸಿನ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವುದು ಖಚಿತ ಎಂಬುದು ಅಮೆರಿಕದಲ್ಲಿರುವ ಬಹುತೇಕ ಯೂನಿರ್ವಸಿಟಿಗಳ ಅಭಿಪ್ರಾಯವಾಗಿದೆ.
ಸಾಮಾಜಿಕ ಮಾಧ್ಯಮ ಪರಿಶೀಲನೆ ಅಸ್ತ್ರವನ್ನು ಇದೇ ಮೊದಲ ಬಾರಿಗೆ ಜಾರಿಗೆ ತರುತ್ತಿರುವುದಲ್ಲ. 2019ರಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಅದನ್ನೀಗ ವ್ಯಾಪಕವಾಗಿ ವಿಸ್ತರಿಸಲಾಗುತ್ತಿರುವುದು ವಿಶೇಷ.