USA Election| ಡೊನಾಲ್ಡ್ ಟ್ರಂಪ್ ಹತ್ಯೆಗೆ ಎರಡನೇ ಯತ್ನ; ಗುಂಡಿನ ದಾಳಿಯಿಂದ ಪಾರು
ದಾಳಿಕೋರ ಎಕೆ-47 ದಾಳಿಗೆ ಬಳಸಿದ್ದಾನೆ. ಇದು ಮಾಜಿ ಅಧ್ಯಕ್ಷರ ಮೇಲಿನ ಎರಡನೇ ಹತ್ಯೆಯ ಪ್ರಯತ್ನ ಎಂದು ಎಫ್‌ಬಿಐ ಹೇಳಿದೆ.;
ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ಗಾಲ್ಫ್ ಕೋರ್ಸ್‌ನ ಹೊರಗೆ ಎರಡನೇ ಹತ್ಯೆ ಪ್ರಯತ್ನದಿಂದ ಭಾನುವಾರ (ಸೆಪ್ಟೆಂಬರ್ 15) ಪಾರಾಗಿದ್ದಾರೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ತಿಳಿಸಿದೆ.
ʻಟ್ರಂಪ್ ಅವರ ಸುತ್ತಮುತ್ತ ಗುಂಡಿನ ದಾಳಿ ನಡೆದಿದ್ದು, ಅವರು ಸುರಕ್ಷಿತವಾಗಿದ್ದಾರೆ,ʼ ಎಂದು ಟ್ರಂಪ್ ಪ್ರಚಾರ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಹೇಳಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಘಟನೆಯನ್ನು ಖಂಡಿಸಿದ್ದು, ಮಾಜಿ ಅಧ್ಯಕ್ಷರಿಗೆ ಭದ್ರತೆ ಒದಗಿಸಲು ರಹಸ್ಯ ಸೇವೆಯು ಸಕಲ ಸಂಪನ್ಮೂಲ, ಸಾಮರ್ಥ್ಯ ಮತ್ತು ರಕ್ಷಣಾತ್ಮಕ ಕ್ರಮವನ್ನು ಬಳಸಲಿದೆ ಎಂದು ಹೇಳಿದ್ದಾರೆ.
ನನ್ನನ್ನು ತಡೆಯಲು ಸಾಧ್ಯವಿಲ್ಲ: ʻನನ್ನ ಸಮೀಪದಲ್ಲಿ ಗುಂಡಿನ ದಾಳಿ ನಡೆದಿದೆ. ನಾನು ಸುರಕ್ಷಿತ ಹಾಗೂ ಕ್ಷೇಮದಿಂದ ಇದ್ದೇನೆ. ಇದೆಲ್ಲ ನನ್ನನ್ನು ತಡೆಯುವುದಿಲ್ಲ. ನಾನು ಎಂದಿಗೂ ಶರಣಾಗುವುದಿಲ್ಲ,ʼ ಎಂದು ಹೇಳಿದರು.
ವ್ಯಕ್ತಿಯೊಬ್ಬರು ಟ್ರಂಪ್ ಅವರ ಗಾಲ್ಫ್ ಕ್ಲಬ್‌ನೆಡೆಗೆ ಸ್ಕೋಪ್ ಹೊಂದಿದ್ದ ರೈಫಲ್ ತೋರಿಸಿದರು ಮತ್ತು ಅವರನ್ನು ಬಂಧಿಸಲಾಯಿತು. ಆತನ ಹೆಸರು ರಯಾನ್ ವೆಸ್ಲಿ ರೌತ್ ಎಂದು ಮೂವರು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸೆಗೆ ಜಾಗವಿಲ್ಲ: ಬೈಡೆನ್- ʻಟ್ರಂಪ್ ಇಂಟರ್ ನ್ಯಾಷನಲ್ ಗಾಲ್ಫ್ ಕೋರ್ಸ್‌ನಲ್ಲಿ ನಡೆದ ಘಟನೆ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರಿಗೂ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ,ʼ ಎಂದು ಶ್ವೇತಭವನ ತಿಳಿಸಿದೆ.
ʻನಮ್ಮ ದೇಶದಲ್ಲಿ ರಾಜಕೀಯ ಸೇರಿದಂತೆ ಯಾವುದೇ ಹಿಂಸಾಚಾರಕ್ಕೆ ಸ್ಥಳವಿಲ್ಲ. ಟ್ರಂಪ್ ಅವರಿಗೆ ಭದ್ರತೆ ನೀಡಲು ರಹಸ್ಯ ಸೇವೆಗೆ ನಿರ್ದೇ ಶನ ನೀಡಿದ್ದೇನೆ. ಶಂಕಿತನೊಬ್ಬನನ್ನು ಬಂಧಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ,ʼ ಎಂದು ಬೈಡೆನ್ ಹೇಳಿದ್ದಾರೆ.
ಟ್ರಂಪ್ ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್, ಹತ್ಯೆಯ ಯತ್ನವನ್ನು ಖಂಡಿಸಿದ್ದಾರೆ. ʻಘಟನೆ ಬಗ್ಗೆ ತಿಳಿಸಲಾಗಿದೆ. ಅವರು ಸುರಕ್ಷಿತವಾಗಿ ದ್ದಾರೆ ಎಂದು ತಿಳಿದು ಖುಷಿಯಾಗಿದೆ. ಹಿಂಸಾಚಾರಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ,ʼ ಎಂದು ಹೇಳಿದರು.
ರಹಸ್ಯ ಸೇವೆಯಿಂದ ಬಂಧನ: ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1:30ರ ಸುಮಾರಿಗೆ ಘಟನೆ ನಡೆದಿದೆ. ಗಾಲ್ಫ್ ಮೈದಾನದ ಬಳಿ ಎಕೆ-47 ಹೊಂದಿದ್ದ ವ್ಯಕ್ತಿ ಮೇಲೆ ಸೀಕ್ರೆಟ್ ಸರ್ವೀಸ್ ಏಜೆಂಟರು ಗುಂಡು ಹಾರಿಸಿದರು.
ʻಈಗಷ್ಟೇ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಅವರು ಅತ್ಯಂತ ದೃಢ ವ್ಯಕ್ತಿಗಳಲ್ಲಿ ಒಬ್ಬರು. ಅವರು ಉತ್ಸಾಹದಲ್ಲಿದ್ದಾರೆ,ʼ ಎಂದು ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ.
ಪೆನ್ಸಿಲ್ವೇನಿಯಾ ಹತ್ಯೆ ಯತ್ನ: ಪೆನ್ಸಿಲ್ವೇನಿಯಾದಲ್ಲಿ ನಡೆದ ದಾಳಿಯಲ್ಲಿ ಗುಂಡು ಟ್ರಂಪ್ ಅವರ ಬಲ ಕಿವಿಗೆ ತಗುಲಿತ್ತು. ಘಟನೆ ನಡೆದ ಎರಡು ತಿಂಗಳ ನಂತರ ಮತ್ತೊಂದು ದಾಳಿ ನಡೆದಿದೆ. ಘಟನೆಯ ಜವಾಬ್ದಾರಿ ಹೊತ್ತು ರಹಸ್ಯ ಸೇವೆಯ ಮುಖ್ಯಸ್ಥ ಕಿಂಬರ್ಲಿ ಚೀಟಲ್ ರಾಜೀನಾಮೆ ನೀಡಿದರು. ಐವರು ರಹಸ್ಯ ಸೇವೆಯ ಏಜೆಂಟರು ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ.