Spain Flash Floods | ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ; 158 ಸಾವು, ಹಲವರು ಕಣ್ಮರೆ

ಸ್ಪೇನ್‌ನ ವೆಲೆನ್ಸಿಯಾ ಪ್ರದೇಶದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಭಾರೀ ಮಳೆ ಸುರಿದು, ಪ್ರವಾಹ ಏರ್ಪಟ್ಟಿದೆ. ಇದು ಸ್ಪೇನ್ ಇತಿಹಾಸದಲ್ಲೇ ಮೊದಲು ಹಾಗೂ ಅತ್ಯಂತ ಘೋರ ಪ್ರವಾಹವಾಗಿದೆ.;

Update: 2024-11-01 07:02 GMT

ಪೂರ್ವ ಸ್ಪೇನ್‌ನಲ್ಲಿ ಡಾನಾ ಚಂಡಮಾರುತ ಅಪ್ಪಳಿಸಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಕನಿಷ್ಠ 158 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಕಣ್ಮರೆಯಾಗಿದ್ದು, ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಭೀಕರ ದುರಂತದ ಹಿನ್ನೆಲೆಯಲ್ಲಿ ಸ್ಪೇನ್ ಸರ್ಕಾರ ದೇಶಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.

ವಿಶ್ವಸಂಸ್ಥೆ ತನ್ನ ʼಎಕ್ಸ್ʼ ಖಾತೆಯಲ್ಲಿ ಹಂಚಿಕೊಂಡಿರುವ ಪ್ರವಾಹದ ವಿಡಿಯೋದಲ್ಲಿ ಕಾರುಗಳು ಕೊಚ್ಚಿಕೊಂಡು ಹೋಗಿರುವುದು ಕಂಡು ಬಂದಿದೆ.

ಡಾನಾ ಚಂಡಮಾರುತದ ಪರಿಣಾಮ ಪ್ರವಾಹ ಸೃಷ್ಟಿಯಾಗಿದ್ದು, ಈವರೆಗೆ ಒಟ್ಟು 158 ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ ಎಂದು ಸ್ಪೇನ್ ಸಹಕಾರ ಸಚಿವಾಲಯದ ಉಸ್ತುವಾರಿ ಸಚಿವ ಏಂಜೆಲ್ ವಿಕ್ಟರ್ ಟೊರೆಸ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವೇಲೆನ್ಸಿಯಾ ಪ್ರದೇಶದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಭಾರೀ ಮಳೆ ಸುರಿದು, ಪ್ರವಾಹ ಏರ್ಪಟ್ಟಿದೆ. ಈ ದುರಂತ ಸ್ಪೇನ್ ಇತಿಹಾಸದಲ್ಲೇ ಮೊದಲು ಹಾಗೂ ಅತ್ಯಂತ ಘೋರ ಪ್ರವಾಹವಾಗಿದೆ ಎಂದು ಹೇಳಿದ್ದಾರೆ.

ಸುನಾಮಿ ರೀತಿಯ ಪ್ರವಾಹದಿಂದ ಕಟ್ಟಡಗಳು ಧರೆಗುರುಳಿವೆ. ಮೂಲಸೌಕರ್ಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪ್ರವಾಹಕ್ಕೆ ಸಿಲುಕಿದ ಕಾರುಗಳು ರಸ್ತೆಯ ಪಕ್ಕದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ದೃಶ್ಯ ಕಂಡು ಬರುತ್ತಿದೆ. ಹಲವು ನಗರಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಅಂದಾಜಿಗೆ ಸಿಗದಂತಾಗಿದೆ. ಪುನರ್ವಸತಿ ಕಲ್ಪಿಸಲು ತಿಂಗಳುಗಳೇ ಹಿಡಿಯಬಹುದು ಎಂದು ಹೇಳಲಾಗಿದೆ.

ಸ್ಪೇನ್‌ನಲ್ಲಿ ಡಾನಾ ಚಂಡಮಾರುತದ ಪ್ರಭಾವದಿಂದ ಪ್ರವಾಹ ಸಂಭವಿಸಿದೆ. ಹವಾಮಾನ ವೈಪರೀತ್ಯದಿಂದ ಅನಿರೀಕ್ಷಿತ ಮಳೆ ಹಾಗೂ ಪ್ರವಾಹ ಉಂಟಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಕಾರ್ಯದರ್ಶಿ ಜನರಲ್ ಸೆಲೆಸ್ಟ್ ಸೌಲೊ ಅಭಿಪ್ರಾಯಪಟ್ಟಿದ್ದಾರೆ.

Tags:    

Similar News