ಕೆನಡಾ ದೇವಾಲಯದ ಮೇಲೆ ದಾಳಿ: ಎಸ್ಎಫ್ಜೆ ಸಂಯೋಜಕ ಇಂದರ್ಜೀತ್ ಗೋಸಾಲ್ ಬಂಧನ, ಬಿಡುಗಡೆ

ಅಮೆರಿಕ ಮೂಲದ ಎಸ್ಎಫ್‌ಜೆ ಭಾರತದಲ್ಲಿ ನಿಷೇಧಿತ ಸಂಘಟನೆಯಾಗಿದ್ದು. ಇದು ಕೆನಡಾದಲ್ಲಿ ಹಿಂದೂಗಳ ಮೇಲಿನ ದಾಳಿಯ ರೂವಾರಿ. 35 ವರ್ಷದ ಗೋಸಾಲ್ ಬ್ರಾಂಪ್ಟನ್ ನಿವಾಸಿಯಾಗಿದ್ದು, ಹಿಂದೂಗಳ ಸಭೆ ಮೇಲೆ ದಾಳಿ ಮಾಡಿದ್ದಾನೆ;

Update: 2024-11-10 11:37 GMT
ಇಂದರ್ಜೀತ್‌ ಗೋಸ್ವಾಲ್‌.

ನವೆಂಬರ್ 3ರಂದು ಕೆನಡಾದ ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾತ್ಮಕ ದಾಳಿಗೆ ಸಂಬಂಧಿಸಿದಂತೆ ಕೆನಡಾದ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸಂಯೋಜಕ ಇಂದರ್ಜೀತ್ ಗೋಸಾಲ್‌ನನ್ನು ಅಲ್ಲಿನ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

ಅಮೆರಿಕ ಮೂಲದ ಎಸ್ಎಫ್‌ಜೆ ಭಾರತದಲ್ಲಿ ನಿಷೇಧಿತ ಸಂಘಟನೆಯಾಗಿದೆ. ಈ ಸಂಘಟನೆ ಕೆನಡಾದಲ್ಲಿ ಹಿಂದೂಗಳ ಮೇಲಿನ ದಾಳಿಯ ರೂವಾರಿಯಾಗಿದೆ. 35 ವರ್ಷದ ಗೋಸಾಲ್ ಬ್ರಾಂಪ್ಟನ್ ನಿವಾಸಿಯಾಗಿದ್ದು, ಹಿಂದೂಗಳ ಸಭೆ ಮೇಲೆ ದಾಳಿ ಮಾಡಿ ಆಯುಧದಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನವೆಂಬರ್ 3ರಂದು ಏನಾಯಿತು?

ನವೆಂಬರ್ 3 ರಂದು ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದ ಮೇಲೆ ದಾಳಿ ನಡೆದಿದ್ದು, ದಾಳಿಕೋರರು ಖಲಿಸ್ತಾನ ಬೆಂಬಲಿಸುವ ಬ್ಯಾನರ್‌ಗಳನ್ನು ಹಿಡಿದಿರುವುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.ದೇವಾಲಯದ ಸುತ್ತಲಿನ ಮೈದಾನದಲ್ಲಿ ಪರಸ್ಪರ ಗುದ್ದಾಡಿರುವುದು ಮತ್ತು ಧ್ವಜ ಕಂಬಗಳಿಂದ ಪರಸ್ಪರ ಹೊಡೆಯುವುದನ್ನು ವೀಡಿಯೊಗಳು ತೋರಿಸಿವೆ.

ದೇವಾಲಯದಲ್ಲಿ ನಡೆದ ಸಭೆಯ ಸಮಯದಲ್ಲಿ ನಡೆದ ವಾಗ್ವಾದದ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಆಕ್ರಮಣಕಾರರನ್ನು ಶಿಬಿರದಲ್ಲಿ ಇರುವವರು ಹಿಮ್ಮೆಟ್ಟಿಸಲು ಯತ್ನಿಸಿದ್ದು ಇದು ಗಲಾಟೆಗೆ ಕಾರಣವಾಯಿತು ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.

ಪ್ರದರ್ಶನದ ಸಮಯದಲ್ಲಿ ಸಂಭವಿಸಿದ ಹಲವಾರು ಅಪರಾಧಗಳ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಹಿಂದೂಗಳ ಮೇಲೆ ಹಲ್ಲೆ ಮಾಡಲು ಧ್ವಜಗಳು ಮತ್ತು ಕೋಲುಗಳನ್ನು ಬಳಸಿರುವ ವಿಡಿಯೊಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ .

ಗೋಸಾಲ್ ಬಂಧನ

ಸ್ಟ್ರಾಟೆಜಿಕ್ ಇನ್ವೆಸ್ಟಿಗೇಷನ್ ಟೀಮ್ (ಎಸ್ಐಟಿ) ತನಿಖಾಧಿಕಾರಿಗಳು ಬ್ರಾಂಪ್ಟನ್‌ನ ಇಂದರ್ಜೀತ್ ಗೋಸಾಲ್‌ನನ್ನು ಬಂಧಿಸಿದೆ ಎಂದು ಕೆನಡಾದ ಪೊಲೀಸರು ಹೇಳಿಕೆ ನೀಡಿದ್ದಾರೆ.

ಗೋಸಾಲ್ ಕೆನಡಾದ ಎಸ್ಎಫ್‌ಜಿ ಸಂಯೋಜಕ ಎಂದು ʼಟೊರೊಂಟೊ ಸ್ಟಾರ್ʼ ವರದಿ ಮಾಡಿದೆ. ನವೆಂಬರ್ 8ರಂದು ಆತನನ್ನು ಬಂಧಿಸಲಾಗಿದ್ದು, ಆಯುಧದಿಂದ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ. ಆತನನ್ನು ಷರತ್ತುಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಬ್ರಾಂಪ್ಟನ್ ನ ಒಂಟಾರಿಯೊ ಕೋರ್ಟ್ ಆಫ್ ಜಸ್ಟೀಸ್‌ನಲ್ಲಿ ಹಾಜರಾಗಲಿದ್ದಾಣೆ ಎಂದು ಅದು ಹೇಳಿದೆ. ನವೆಂಬರ್ 3 ಮತ್ತು 4ರ ಘಟನೆಗಳ ಸಮಯದಲ್ಲಿ ಅಪರಾಧ ಘಟನೆಗಳ ತನಿಖೆಗಾಗಿ ಮೀಸಲಾದ ಎಸ್ಐಟಿಯನ್ನು ರಚಿಸಲಾಗಿದೆ.

ಭಾರತ, ಕೆನಡಾ ಮುನಿಸು 

ನವೆಂಬರ್ 3 ರಂದು, ಖಲಿಸ್ತಾನಿ ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು ಜನರೊಂದಿಗೆ ಘರ್ಷಣೆ ನಡೆಸಿದ್ದರು. ದೇವಾಲಯದ ಅಧಿಕಾರಿಗಳು ಮತ್ತು ಭಾರತೀಯ ದೂತಾವಾಸ ಆಯೋಜಿಸಿದ್ದ ಕಾನ್ಸುಲರ್ ಕಾರ್ಯಕ್ರಮಕ್ಕೆ ಅವರು ಅಡ್ಡಿಪಡಿಸಿದ್ದರು.

ಭಾನುವಾರದ ಘಟನೆಯನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಖಂಡಿಸಿದ್ದು, ಪ್ರತಿಯೊಬ್ಬ ಕೆನಡಿಯನ್ ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದರು. ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ನಿರೀಕ್ಷೆಯೊಂದಿಗೆ ಭಾರತ ಈ ದಾಳಿ ಖಂಡಿಸಿದೆ.

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ನವದೆಹಲಿ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹಳಸಿದ ಸಂಬಂಧಗಳು

ಖಲಿಸ್ತಾನ್ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೋ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಬಿಗಡಾಯಿಸಿದ್ದವು.

ಟ್ರುಡೊ ಅವರ ಆರೋಪಗಳನ್ನು "ಅಸಂಬದ್ಧ" ಎಂದು ಭಾರತ ತಿರಸ್ಕರಿಸಿದೆ.

ಕೆನಡಾದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರ ಶಕ್ತಿಗಳಿಗೆ ಕೆನಡಾ ಯಾವುದೇ ಸ್ಥಳಾವಕಾಶ ನೀಡುತ್ತಿರುವುದು ಉಭಯ ದೇಶಗಳ ನಡುವಿನ ವೈಮಸ್ಸಿಗೆ ಕಾರಣವಾಗಿದೆ. 

Tags:    

Similar News