ಶಾಸನ ಸಭೆಗಳು ಚಿಂತಕರ ಚಾವಡಿಗಳಾಗಬೇಕು: ಬೋಸ್ಟನ್ ಶೃಂಗಸಭೆಯಲ್ಲಿ ಬಸವರಾಜ ಹೊರಟ್ಟಿ
ದೇಶದ ಉನ್ನತಿಯಲ್ಲಿ ಶಾಸನ ಸಭೆಗಳ ಹಾಗೂ ಜನಪ್ರತಿನಿಧಿಗಳ ಕ್ರೀಯಾಶೀಲತೆ ಹಾಗೂ ಪಕ್ಷಬೇಧವಿಲ್ಲದ ಅಭಿವೃದ್ದಿ ಪರ ಚಿಂತನೆಯಿಂದ ಮಾತ್ರ ರಾಷ್ಟ್ರದ ಭವಿಷ್ಯ ಉಜ್ವಲವಾಗಬಲ್ಲದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.;
ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜತೆ ಕರ್ನಾಟಕದ ನಿಯೋಗ
"ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸರ್ವಾಂಗೀಣ ಪ್ರಗತಿಯಲ್ಲಿ ಶಾಸನ ಸಭೆಗಳು ಮತ್ತು ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ತರವಾದದ್ದು," ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರತಿಪಾದಿಸಿದರು.
ಅಮೆರಿಕದ ಬೋಸ್ಟನ್ ನಗರದಲ್ಲಿ ಆಯೋಜಿಸಲಾಗಿರುವ 'ಶಾಸಕಾಂಗ ಶೃಂಗಸಭೆ 2025'ರಲ್ಲಿ, 'ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ' ಮತ್ತು 'ರಾಷ್ಟ್ರೀಯ ಶಾಸಕರ ಸಮಾವೇಶ ಭಾರತ ಸಂಸ್ಥೆ'ಗಳ ಸಹಯೋಗದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ಸಂಸದೀಯ ಅನುಭವವನ್ನು ಹಂಚಿಕೊಂಡರು.
"ದೇಶದ ಉನ್ನತಿಯು, ಶಾಸನ ಸಭೆಗಳಲ್ಲಿ ನಡೆಯುವ ಕ್ರೀಯಾಶೀಲ ಚಟುವಟಿಕೆಗಳು ಮತ್ತು ಜನಪ್ರತಿನಿಧಿಗಳ ಪಕ್ಷಭೇದ ಮರೆತ ಅಭಿವೃದ್ಧಿಪರ ಚಿಂತನೆಯಿಂದ ಮಾತ್ರ ಸಾಧ್ಯ. ಶಾಸನ ಸಭೆಗಳು ಕೇವಲ ಚರ್ಚಾ ವೇದಿಕೆಗಳಾಗದೆ, ಸಮಾಜದ ಮೂಲಭೂತ ಅವಶ್ಯಕತೆಗಳಾದ ಬಡತನ, ಜನರ ಸಂಕಷ್ಟ ಮತ್ತು ಬವಣೆಗಳ ನಿವಾರಣೆಯ ಬಗ್ಗೆ ಚಿಂತನೆ ನಡೆಸುವ 'ಚಿಂತಕರ ಚಾವಡಿ'ಗಳಾಗಿ ಪರಿವರ್ತನೆಯಾದಾಗ ಮಾತ್ರ ಪ್ರಜಾಪ್ರಭುತ್ವದ ನೈಜ ಆಶಯಗಳು ಈಡೇರುತ್ತವೆ," ಎಂದು ಅವರು ಹೇಳಿದರು.
ಜನಪ್ರತಿನಿಧಿಗಳು ಸಾಮಾನ್ಯ ಜನರ ಬದುಕು, ಬವಣೆಗಳನ್ನು ಅರಿಯಲು ಅವರೊಂದಿಗೆ ನೇರ ಸಂಪರ್ಕದಲ್ಲಿರುವುದು ಅತ್ಯವಶ್ಯಕ. ಆಗ ಮಾತ್ರ ಅವರ ಬದುಕನ್ನು ಹಸನಗೊಳಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವಾಸ ಉಳಿಸಿಕೊಳ್ಳಲಿ
"ಜಾತಿ, ಧರ್ಮ, ಲಿಂಗಗಳ ಭೇದವಿಲ್ಲದೆ ಜನರ ಮತಗಳಿಂದ ಆಯ್ಕೆಯಾಗುವ ಅವಕಾಶವನ್ನು ಪ್ರಜಾಪ್ರಭುತ್ವ ನಮಗೆ ಕಲ್ಪಿಸಿಕೊಟ್ಟಿದೆ. ಪ್ರತಿಯೊಬ್ಬ ಜನಪ್ರತಿನಿಧಿಯೂ ಈ ವಿಶ್ವಾಸವನ್ನು ಉಳಿಸಿಕೊಂಡು, ಸಂಸದೀಯ ಮೌಲ್ಯಗಳನ್ನು ರಕ್ಷಿಸುತ್ತಾ, ದೇಶದ ಅಭ್ಯುದಯಕ್ಕೆ ಕಟಿಬದ್ಧರಾಗಬೇಕು. ಇಂದಿನ ಆಧುನಿಕ ದಿನಗಳಲ್ಲಿ ಅಭಿವೃದ್ಧಿಯೇ ನಮ್ಮೆಲ್ಲರ ಮೂಲಮಂತ್ರವಾಗಬೇಕು," ಎಂದು ಹೊರಟ್ಟಿ ಕರೆ ನೀಡಿದರು.
ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ಶಾಸನ ಸಭೆಗಳು ಸಜ್ಜಾಗಬೇಕು ಎಂದು ಒತ್ತಿ ಹೇಳಿದ ಅವರು, "ಪ್ರತಿಯೊಬ್ಬ ಜನಪ್ರತಿನಿಧಿಯೂ ನಿರ್ದಿಷ್ಟ ನೀತಿ ಸಂಹಿತೆಗಳನ್ನು ಅಳವಡಿಸಿಕೊಂಡು, ಅವುಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಸಂಕಲ್ಪದೊಂದಿಗೆ ದೇಶದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು," ಎಂದರು.
ಈ ಶೃಂಗಸಭೆಯಲ್ಲಿ ದೇಶದ ಸಂಸದರು, ವಿವಿಧ ರಾಜ್ಯಗಳ ಸಚಿವರು, ಶಾಸಕರು, ರಾಜಕೀಯ ತಜ್ಞರು ಮತ್ತು ನೀತಿ ನಿರೂಪಕರು ಸೇರಿದಂತೆ ಸುಮಾರು 15,000ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಶೃಂಗಸಭೆಯ ಅಂಗವಾಗಿ, ಸಭಾಪತಿ ಬಸವರಾಜ ಹೊರಟ್ಟಿ ಅವರ ನೇತೃತ್ವದ ನಿಯೋಗವು ಅಮೆರಿಕದ ಮ್ಯಾಸಚೂಸೆಟ್ಸ್ ಸ್ಟೇಟ್ ಹೌಸ್ ಮತ್ತು ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಭಾರತೀಯ ಮೂಲದ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿತು.