ಭಾರತದೊಂದಿಗೆ ಶಾಂತಿ ಮಾತುಕತೆಗೆ ಮುಂದಾದ ಪಾಕಿಸ್ತಾನದ ಪ್ರಧಾನಿ
ಸಿಯಾಲ್ಕೋಟ್‌ನ ಸೇನಾ ಸೌಲಭ್ಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಶಾಂತಿಯ ಷರತ್ತುಗಳಲ್ಲಿ ಕಾಶ್ಮೀರ ವಿಷಯದ ಚರ್ಚೆಯೂ ಸೇರಿರಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.;
ಪಹಲ್ಗಾಮ್ನಲ್ಲಿ ಉಗ್ರರಿಂದ 26 ಭಾರತೀಯ ನಾಗರಿಕರು ಹತ್ಯೆಯಾದ ನಂತರ ಭಾರತವು ಪ್ರತೀಕಾರವಾಗಿ 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ನಡೆಸಿತ್ತು ಆ ಬಳಿಕ ಎರಡೂ ದೇಶಗಳ ನಡುವೆ ಸೈನಿಕ ಸಂಘರ್ಷದ ನಡೆದು ಇದೀಗ ತಾತ್ಕಾಲಿಕ ವಿರಾಮ ಪ್ರಕಟಿಸಲಾಗಿದೆ. ಈ ನಡುವೆ ಪಾಕಿಸ್ತಾನದ ಪ್ರಧಾನಮಂತ್ರಿಯು "ಶಾಂತಿ"ಯ ದೃಷ್ಟಿಯಿಂದ ಭಾರತ ಜತೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರು ಗುರುವಾರ (ಮೇ 15) ತಮ್ಮ ದೇಶದ ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಭಾರತದೊಂದಿಗೆ ನಡೆದ ಸೈನಿಕ ಮುಖಾಮುಖಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಅವರು ಸಂವಾದ ನಡೆಸುವ ವೇಳೆ ಶಾಂತಿ ಮಂತ್ರ ಪಠಿಸಿದ್ದಾರೆ.
ಬುಧವಾರದಂದು, ಶರೀಫ್ ಅವರು ಸಿಯಾಲ್ಕೋಟ್‌ನ ಪಸ್ರೂರ್ ಕಂಟೋನ್ಮೆಂಟ್‌ಗೆ ಭೇಟಿ ನೀಡಿ ಅಲ್ಲಿನ ಸೈನಿಕರು ಮತ್ತು ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದರು.
ಶಾಂತಿಯ ಷರತ್ತುಗಳು
"ನಾವು (ಭಾರತದೊಂದಿಗೆ) ಶಾಂತಿಗಾಗಿ ಮಾತುಕತೆ ನಡೆಸಲು ಸಿದ್ಧರಿದ್ದೇವೆ," ಎಂದು ಹೇಳಿದ ಅವರು ಶಾಂತಿಯ ನಿಯಮಗಳಲ್ಲಿ ಕಾಶ್ಮೀರ ವಿಷಯದ ಚರ್ಚೆಯೂ ಇರಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಕಮ್ರಾ ವಾಯುನೆಲೆಗೆ ಶರೀಫ್ ಅವರೊಂದಿಗೆ ಉಪಪ್ರಧಾನಮಂತ್ರಿ ಇಸಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್, ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಕೂಡ ಹಾಜರಿದ್ದರು.
ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಂತರ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದ ನಡೆದಿತ್ತು. ಈ ಒಪ್ಪಂದದ ನಂತರ ಶರೀಫ್ ಅವರು ಭೇಟಿ ನೀಡಿದ ಎರಡನೇ ರಕ್ಷಣಾ ಸೌಲಭ್ಯ ಇದಾಗಿದೆ.
ಆಪರೇಷನ್ ಸಿಂದೂರ್
ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು "ಭಾರತದ ಅವಿಭಾಜ್ಯ ಮತ್ತು ಅನನ್ಯ ಭಾಗಗಳು" ಎಂದು ಸ್ಪಷ್ಟವಾಗಿ ಹೇಳುತ್ತಾ ಬಂದಿದೆ.
ಏಪ್ರಿಲ್ 22ರಂದು ಪಾಹಲಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ, ಭಾರತವು ಪ್ರತೀಕಾರವಾಗಿ ಮೇ 6 ಮತ್ತು 7ರಂದು (ಮಂಗಳವಾರ ಮತ್ತು ಬುಧವಾರ) 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ ನಿಖರ ದಾಳಿಗಳ ಮೂಲಕ ಹಲವಾರು ಭಯೋತ್ಪಾದಕ ಶಿಬಿರಗಳು ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸಲಾಗಿದೆ.
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಸೇರಿದಂತೆ ನಿರ್ದಿಷ್ಟ ಭಯೋತ್ಪಾದಕ ಗುರಿಗಳನ್ನು ಗುರಿಯಾಗಿಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿವೆ.
ಪಾಕಿಸ್ತಾನವು ಮೇ 8, 9 ಮತ್ತು 10ರಂದು ಹಲವಾರು ಭಾರತೀಯ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತು. ಆದರೆ, ಭಾರತೀಯ ಸಶಸ್ತ್ರ ಪಡೆಗಳು ತಮ್ಮದೇ ಆದ ಸ್ಥಳೀಯ ತಂತ್ರಜ್ಞಾನಗಳು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಪಾಕಿಸ್ತಾನದ ದಾಳಿಯಿಂದ ಕನಿಷ್ಠ ಹಾನಿಯಾಗುವಂತೆ ನೋಡಿಕೊಂಡಿತು.