ಪುಟಿನ್ ಒಬ್ಬ ಹುಚ್ಚ; ಉಕ್ರೇನ್ ವಿರುದ್ಧ ಡ್ರೋನ್ ದಾಳಿ ಮಾಡಿದ್ದಕ್ಕೆ ಟ್ರಂಪ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ...

ನಾನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೆ. ಆದರೆ, ಅವರಿಗೆ ಏನೋ ಆಗಿದೆ. ಆತ ಸಂಪೂರ್ಣವಾಗಿ ಹುಚ್ಚನಾಗಿದ್ದಾನೆ," ಎಂದು ಟ್ರಂಪ್ ಹೇಳಿದ್ದಾರೆ.;

Update: 2025-05-26 04:09 GMT

ಉಕ್ರೇನ್​ ವಿರುದ್ಧ ಸತತವಾಗಿ ಡ್ರೋನ್ ದಾಳಿ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಆಘಾತಕಾರಿ ಹೇಳಿಕೆಯೊಂದನ್ನು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಆತನೊಬ್ಬ ಹುಚ್ಚ ಎಂದು ಕರೆದಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಮೂರನೇ ದಿನವೂ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಟ್ರಂಪ್ ಈ ರೀತಿ ಟೀಕಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಟ್ರಂಪ್, "ನಾನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೆ. ಆದರೆ, ಅವರಿಗೆ ಏನೋ ಆಗಿದೆ. ಆತ ಸಂಪೂರ್ಣವಾಗಿ ಹುಚ್ಚನಾಗಿದ್ದಾನೆ," ಎಂದು ಹೇಳಿದ್ದಾರೆ. "ಯಾವುದೇ ಕಾರಣವಿಲ್ಲದೆ ಉಕ್ರೇನ್‌ನ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹಾರಿಸಲಾಗುತ್ತಿದೆ. ಇದರಿಂದ ಸಾವಿರಾರು ಅಮಾಯಕ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಪುಟಿನ್ ಬಯಸಿದರೆ ಅದು ರಷ್ಯಾದ ಪತನಕ್ಕೆ ಕಾರಣವಾಗಲಿದೆ ಎಂದೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಸ್ಕಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, "ಅವರ (ಝೆಲೆನ್ಸ್‌ಸ್ಕಿ) ಬಾಯಿಂದ ಹೊರಬರುವ ಎಲ್ಲ ಮಾತುಗಳು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಅದು ನನಗೆ ಇಷ್ಟವಿಲ್ಲ. ಅದನ್ನು ನಿಲ್ಲಿಸುವುದು ಉತ್ತಮ," ಎಂದು ಹೇಳಿದ್ದಾರೆ.

ಅಧ್ಯಕ್ಷ ಹುದ್ದೆಗೇರುವ ಮುನ್ನ, ಚುನಾವಣಾ ಪ್ರಚಾರದಲ್ಲಿ ಉಕ್ರೇನ್-ರಷ್ಯಾ ಯುದ್ಧವನ್ನು ನಿಲ್ಲಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗೆ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ.

Tags:    

Similar News