ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಆಪರೇಷನ್ ಸಿಂದೂರ್‌ನ ನಂತರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಇಂದಿನಿಂದ (ಮೇ 8) ರಾತ್ರಿಯಿಡೀ ಬ್ಲ್ಯಾಕ್‌ಔಟ್ ಜಾರಿಗೊಳಿಸಲಾಗಿದೆ.
ಗುರುದಾಸ್‌ಪುರ ಜಿಲ್ಲಾಧಿಕಾರಿಯು ಒಂದು ಪ್ರಮುಖ ನಾಗರಿಕ ಮುನ್ನೆಚ್ಚರಿಕಾ ಕ್ರಮವಾಗಿ, ಜಿಲ್ಲೆಯಾದ್ಯಂತ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಂಪೂರ್ಣ ಬ್ಲ್ಯಾಕ್‌ಔಟ್ ಆದೇಶವನ್ನು ಜಾರಿಗೊಳಿಸಿದ್ದಾರೆ. ಈ ಆದೇಶವು ಮುಂದಿನ ಸೂಚನೆಯವರೆಗೆ ಮುಂದುವರಿಯಲಿದೆ. ಆದರೆ, ಕಂಟೋನ್ಮೆಂಟ್ ವಲಯಗಳು ಮತ್ತು ಮಿಲಿಟರಿ ಪ್ರದೇಶಗಳಲ್ಲಿ ಬ್ಲ್ಯಾಕ್‌ಔಟ್ ನಡೆಸಲಾಗುವುದಿಲ್ಲ.
ಗುರುದಾಸ್‌ಪುರ ಕೇಂದ್ರೀಯ ಜೈಲು ಮತ್ತು ಆಸ್ಪತ್ರೆಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಈ ಸಂಸ್ಥೆಗಳು ನಿಗದಿತ ಸಮಯದಲ್ಲಿ ತಮ್ಮ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿರಿಸಿ, ಬೆಳಕು ಹೊರಗೆ ಸೋರದಂತೆ ಖಚಿತಪಡಿಸಿಕೊಳ್ಳಬೇಕು. ಎಲ್ಲಾ ನಿವಾಸಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಈ ಬ್ಲ್ಯಾಕ್‌ಔಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ಹೊರಗಿನ ಬೆಳಕು ಕಾಣಿಸದಂತೆ ಖಾತರಿಪಡಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಪಂಜಾಬ್‌ನಲ್ಲಿ ಮೊದಲ ಬಾರಿಗೆ
ಮೇ 7ರಂದು ಪಾಕಿಸ್ತಾನದ ಭಯೋತ್ಪಾದಕ ಗುರಿಗಳ ಮೇಲೆ ಆಪರೇಷನ್ ಸಿಂದೂರ್ ಆರಂಭಗೊಂಡ ನಂತರ ಉಂಟಾದ ಉದ್ವಿಗ್ನತೆ ಬಳಿಕ ಪಂಜಾಬ್‌ನಲ್ಲಿ ಇಂತಹ ಬ್ಲ್ಯಾಕ್‌ಔಟ್ ಜಾರಿಗೊಳಿಸಲಾಗಿರುವುದು ಇದೇ ಮೊದಲು.
ಗುರುದಾಸ್‌ಪುರದ ರಣತಂತ್ರದ ಮಹತ್ವ
ಗುರುದಾಸ್‌ಪುರ, ಬಿಯಾಸ್ ಮತ್ತು ರಾವಿ ನದಿಗಳ ನಡುವಿನ ಬರಿ ದೋಆಬ್‌ನ ಹೃದಯಭಾಗದಲ್ಲಿದೆ. ಇದು ಜಮ್ಮು ಮತ್ತು ಕಾಶ್ಮೀರದ ಕಣಿವೆಗೆ ಪ್ರವೇಶದ್ವಾರವಾಗಿದ್ದು, ಕಾಂಗ್ರಾ ಕಣಿವೆಗೆ ಪ್ರವೇಶ ಮಾರ್ಗವಾಗಿದೆ. ಇಲ್ಲಿ ರಾವಿ ನದಿಗೆ ರಣಜಿತ್ ಸಾಗರ್ ಮತ್ತು ಬಿಯಾಸ್ ನದಿಯ ಮೇಲಿರುವ ಪೊಂಗ್ ಎಂಬ ಎರಡು ಪ್ರಮುಖ ಜಲಾಶಯಗಳಿವೆ. .
ಪಟಾಕಿ ನಿಷೇಧ
ಅಮೃತಸರ ಮತ್ತು ತಾರನ್ ತಾರನ್ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಪಟಾಕಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಅಮೃತಸರದ ಜಿಲ್ಲಾಧಿಕಾರಿ ಸಾಕ್ಷಿ ಸಾಹ್ನಿ ಅವರು, ಮದುವೆಗಳು, ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಕಾಶ ಪಟಾಕಿಗಳು ಮತ್ತು ಚೈನೀಸ್ ಪಟಾಕಿಗಳು ಸೇರಿದಂತೆ ಎಲ್ಲಾ ರೀತಿಯ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಆದೇಶ ಹೊರಡಿಸಿದ್ದಾರೆ.