ಹೊಸದಿಲ್ಲಿ: ಅಮೆರಿಕದ ಡೆಲವೇರ್ ನಲ್ಲಿ ಸೆಪ್ಟೆಂಬರ್ 21 ರಿಂದ ಮೂರು ದಿನ ಕಾಲ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
ಈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ನಡುವೆ ಮಹತ್ವದ ಮಾತುಕತೆ ನಡೆಯಲಿದ್ದು, ಬಳಿಕ ಎರಡು ದೇಶಗಳು ಕನಿಷ್ಠ ಎರಡು ಒಪ್ಪಂದಗಳಿಗೆ ಸಹಿ ಹಾಕಲಿವೆ. ಅವೆಂದರೆ, ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು (ಐಪಿಇಎಫ್) ಒಪ್ಪಂದ ಮತ್ತು ಭಾರತ-ಯುಎಸ್ ಔಷಧ ಚೌಕಟ್ಟು ಎಂಒಯು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಗುರುವಾರ ಹೇಳಿದರು.
ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮೋದಿ ಅವರು ಬೈಡೆನ್, ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನಿನ ಪ್ರಧಾನಿ ಫುಮಿಯೊ ಕಿಶಿದಾ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ವಿಫಲ ಸಂಚಿನಲ್ಲಿ ಭಾರತದ ಕೈವಾಡವಿದೆ ಎಂಬ ವಾಷಿಂಗ್ಟನ್ ಆರೋಪಿಸಿದ ನಂತರ ಭಾರತ-ಅಮೆರಿಕ ಬಾಂಧವ್ಯದಲ್ಲಿ ಸ್ವಲ್ಪ ಅಸಮಾಧಾನ ತಲೆಯೆತ್ತಿದೆ. ಭಾರತದಲ್ಲಿ ನಡೆಯುತ್ತಿರುವ ತನಿಖೆ ಕುರಿತು ವಿವರ ನೀಡಬೇಕೆಂದು ಅಮೆರಿಕ ಸತತವಾಗಿ ಒತ್ತಡ ಹೇರಿದೆ ಮತ್ತು ಪ್ರಕರಣದಲ್ಲಿ ಹೊಣೆಗಾರಿಕೆ ಬೇಕಿದೆ ಎಂದು ಸ್ಪಷ್ಟಪಡಿಸಿದೆ.
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ಮಾಸ್ಕೋ ಹಾಗೂ ಕೈವ್ ಭೇಟಿ ಕುರಿತು ಮೋದಿ ಅವರು ಬೈಡೆನ್ ಅವರಿಗೆ ತಿಳಿಸುವ ನಿರೀಕ್ಷೆಯಿದೆ.
ʻಪ್ರಧಾನಿ ಮತ್ತು ಬೈಡೆನ್ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಭಾರತ ಮತ್ತು ಅಮೆರಿಕ ನಡುವಿನ ಜಾಗತಿಕ ಸಮಗ್ರ ಕಾರ್ಯತಂತ್ರವನ್ನು ಪರಿಶೀಲಿಸಲು ಅವಕಾಶ ಹೊಂದಿರುತ್ತಾರೆ. ಐಪಿಇಎಫ್ ಸೇರಿದಂತೆ ಕೆಲವು ಒಪ್ಪಂದಗಳ ವಿನಿಮಯಕ್ಕೆ ಎರಡೂ ಕಡೆಯವರಿಗೆ ಅವಕಾಶವಿದೆ ʼ ಎಂದ ಮಿಸ್ರಿ, ಪ್ರಧಾನಿಯವರ ಅಮೆರಿಕ ಪ್ರವಾಸ ಕುರಿತು ಮಾಹಿತಿ ನೀಡಿದರು.
ಬೈಡೆನ್ ಅವರು ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ಫಾರ್ ಪ್ರಾಸ್ಪೆರಿಟಿ (ಐಪಿಇಎಫ್) ಯನ್ನು ಮೇ 2022 ರಲ್ಲಿ ಪ್ರಾರಂಭಿಸಿದರು. ಶುದ್ಧ ಇಂಧನ, ಪೂರೈಕೆ-ಸರಪಳಿ ಪುನರುಜ್ಜೀವನ ಮತ್ತು ಡಿಜಿಟಲ್ ವ್ಯಾಪಾರ ಕ್ಷೇತ್ರದಲ್ಲಿ ಸಮಾನಮನಸ್ಕ ರಾಷ್ಟ್ರಗಳ ನಡುವೆ ಸಹಕಾರವನ್ನು ಈ ಉಪಕ್ರಮ ಗುರಿಯಾಗಿರಿಸಿಕೊಂಡಿದೆ. ಭಾರತ, ಜಪಾನ್ ಮತ್ತು ಆಸ್ಟ್ರೇಲಿಯ ಅಲ್ಲದೆ, ಬ್ರೂನೈ ದಾರುಸ್ಸಲಾಮ್, ಫಿಜಿ, ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಇತರ ಸದಸ್ಯ ರಾಷ್ಟ್ರಗಳು.
ʻಅಮೆರಿಕ ಪ್ರವಾಸದ ವೇಳೆ ಮೋದಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುತ್ತಾರೆಯೇ?ʼ ಎಂಬ ಪ್ರಶ್ನೆಗೆ ಮಿಸ್ರಿ ನೇರ ಉತ್ತರ ನೀಡಲಿಲ್ಲ.
ʻಪ್ರಧಾನಿ ಅವರ ಹಲವು ಸಭೆಗಳನ್ನು ನಿಗದಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ನಿರ್ದಿಷ್ಟ ಸಭೆ ಅಂತಿಮಗೊಂಡಿದೆಯೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ. ನಮಗೆ ಎಷ್ಟು ಸಮಯ ಇದೆ ಮತ್ತು ಯಾರನ್ನು ಭೇಟಿ ಮಾಡಬಹುದು ಎಂಬುದನ್ನು ಎಲ್ಲಾ ಕೋನಗಳಿಂದ ನೋಡುತ್ತೇವೆ. ಈ ಸಂಬಂಧ ಮಾಹಿತಿ ನೀಡುತ್ತೇವೆ,ʼ ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷೀಯ ರೇಸ್‌ನಲ್ಲಿರುವ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್, ಮುಂದಿನ ವಾರ ಮೋದಿ ಅವರನ್ನು ಭೇಟಿಯಾಗುವುದಾಗಿ 2 ದಿನಗಳ ಹಿಂದೆ ಹೇಳಿದ್ದರು.
ಭವಿಷ್ಯದ ಶೃಂಗಸಭೆ: ಮೋದಿ ಅವರು ವಿಲ್ಮಿಂಗ್ಟನ್‌ನಿಂದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನಡೆಯಲಿರುವ ʻಭವಿಷ್ಯದ ಶೃಂಗಸಭೆʼ ಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ಪ್ರಯಾಣಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಪ್ರಧಾನಿ, ಅಂತರ್ಗತ ಮತ್ತು ಸಮಾನ ಸುಸ್ಥಿರ ಅಭಿವೃದ್ಧಿ ಕುರಿತು ಮಾತನ್ನಾಡುವ ನಿರೀಕ್ಷೆಯಿದೆ.
ʻಆಗಸ್ಟ್ 17 ರಂದು ನಡೆದ 3ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಎತ್ತಲಾದ ಹಲವು ವಿಷಯಗಳು ವಿಶ್ವಸಂಸ್ಥೆಯ ಶೃಂಗಸಭೆಯಲ್ಲೂ ಧ್ವನಿಯನ್ನು ಕಂಡುಕೊಳ್ಳಬಹುದು,ʼಎಂದು ಮಿಸ್ರಿ ಸೂಚಿಸಿದರು.