Operation Devil Hunt : ಬಾಂಗ್ಲಾದೇಶದಲ್ಲಿ ಹಿಂಸಾಚಾರ ತಡೆಗೆ 'ಡೆವಿಲ್ ಹಂಟ್' ಕಾರ್ಯಾಚರಣೆ: 1,300 ಮಂದಿ ಬಂಧನ

Operation Devil Hunt: ಶೇಖ್ ಹಸೀನಾ ನೇತೃತ್ವದ ಹಿಂದಿನ ಸರ್ಕಾರ ಪತನಗೊಂಡ ಬಳಿಕ, ಅವಾಮಿ ಲೀಗ್ ನಾಯಕರ ಮತ್ತು ಅವರ ಕುಟುಂಬದ ಸದಸ್ಯರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಯುತ್ತಿದೆ.;

Update: 2025-02-10 04:17 GMT
ಮುಜಿಬುರ್​ ರಹ್ಮಾನ್​ ಅವರ ಚಿತ್ರದ ಮೇಲೆ ಕಾಲಿಟ್ಟಿರುವ ಪ್ರತಿಭಟನಾಕಾರರು.

ಢಾಕಾ : ದೇಶದಲ್ಲಿ ಮಿತಿಮೀರುತ್ತಿರುವ ಹಿಂಸಾಚಾರ ತಡೆಗೆ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ 'ಆಪರೇಶನ್ ಡೆವಿಲ್ ಹಂಟ್' (Operation Devil Hunt) ಕಾರ್ಯಾಚರಣೆ ಆರಂಭಿಸಿದೆ. ಕ್ಷಿಪ್ರ ಪ್ರಕ್ರಿಯೆಯಲ್ಲಿ 1,300 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅವಾಮಿ ಲೀಗ್ ನಾಯಕರು ಮತ್ತು ಅವರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳ ಗುಂಪು ಹಿಂಸೆ ಹಾಗೂ ದೌರ್ಜನ್ಯ ನಡೆಸುತ್ತಿದೆ.

ಶೇಖ್ ಹಸೀನಾ ನೇತೃತ್ವದ ಹಿಂದಿನ ಸರ್ಕಾರ ಪತನಗೊಂಡ ಬಳಿಕ, ಅವಾಮಿ ಲೀಗ್ ನಾಯಕರ ಮತ್ತು ಅವರ ಕುಟುಂಬದ ಸದಸ್ಯರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಬಾಂಗ್ಲಾದೇಶದ ಭದ್ರತಾ ಪಡೆಗಳು ದೇಶದಾದ್ಯಂತ ಕಾರ್ಯಾಚರಣೆ ಹಮ್ಮಿಕೊಂಡಿವೆ.

ಗಾಜಿಪುರದಲ್ಲಿನ ಅವಾಮಿ ಲೀಗ್ ನಾಯಕನ ನಿವಾಸದ ಬಳಿ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಬಳಿಕ ಹಿಂಸೆ ಪ್ರಾರಂಭಗೊಂಡಿತ್ತು. ಅದು ನಂತರ ದೇಶದ ಇತರ ಭಾಗಗಳಿಗೂ ಹರಡಿತು, ಈ ಗುಂಪುಗಳು ಅವಾಮಿ ಲೀಗ್ ಆಸ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.

ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ

ಸೈನ್ಯ, ಪೊಲೀಸ್ ಮತ್ತು ವಿಶೇಷ ಭದ್ರತಾ ಘಟಕಗಳಿರುವ ಜಂಟಿ ಪಡೆಗಳು ಕಾರ್ಯಾಚರಣೆ ಆರಂಭಿಸಿ ಇದುವರೆಗೆ 1,308 ಮಂದಿಯನ್ನು ಬಂಧಿಸಿವೆ. ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ "ಡೆವಿಲ್​​ಗಳನ್ನು" (ದೆವ್ವಗಳನ್ನು) ನಿರ್ಮೂಲನೆ ಮಾಡಬೇಕೆಂದು ಪಣ ತೊಟ್ಟಿವೆ.

2024ರ ಆಗಸ್ಟ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಪ್ರಧಾನಮಂತ್ರಿ ಸ್ಥಾನದಿಂದ ಇಳಿದು ಭಾರತಕ್ಕೆ ಬಂದಿಳಿದಿದ್ದರು . ಪ್ರತಿಭಟನೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆರಂಭಗೊಂಡ ಮೀಸಲು ವಿರೋಧಿ ಆಂದೋಲನವಾಗಿತ್ತು. ಬಳಿಕ ಅದು ದೇಶವ್ಯಾಪಿ ಹಿಂಸೆಗೆ ಮಾರ್ಪಟ್ಟಿತು.

ಹಸೀನಾ ಸರ್ಕಾರದ ಪತನದ ಬಳಿಕ ಯೂನುಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಾದ ಬಳಿಕ ಅವಾಮಿ ಲೀಗ್ ಬೆಂಬಲಿಗರು ಮತ್ತು ಯೂನುಸ್ ಸರ್ಕಾರದ ಬೆಂಬಲಿಗರು (ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ - BNP) ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಿದೆ.

ಕಳೆದ ಬುಧವಾರ, ಸಾವಿರಾರು ಪ್ರತಿಭಟನಾಕಾರರು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರಹ್ಮಾನ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಜಿಬುರ್ ರಹ್ಮಾನ್ ಶೇಖ್ ಹಸೀನಾ ಅವರ ತಂದೆ. 1971ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶದ ಸ್ವಾತಂತ್ರ್ಯ ಘೋಷಿಸಿದ ಸ್ಥಳ ಅದು ಎಂಬ ಐತಿಹ್ಯವನ್ನು ಕಟ್ಟಡ ಹೊಂದಿತ್ತು.

''ಆಪರೇಷನ್​ ಡೆವಿಲ್ ಹಂಟ್'' ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧದ ಕಾರ್ಯಾಚರಣೆ ಎಲ್ಲಾ ದುಷ್ಕರ್ಮಿಗಳನ್ನು ನಿರ್ಮೂಲ ಮಾಡುತ್ತೇವೆ ," ಎಂದು ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಆಲಂ ಚೌಧರಿ ಹೇಳಿದ್ದಾರೆ.

ಭದ್ರತಾ ಪಡೆಗಳು ಹಸೀನಾ ಬೆಂಬಲಿಗರನ್ನು ಮಾತ್ರ ಗುರಿಯಾಗಿಸುತ್ತಿವೆ ಎಂಬ ಆರೋಪವೂ ಎದುರಾಗಿದೆ. ಜಹಾಂಗೀರ್ ಆಲಂ ಚೌಧರ ಅದನ್ನು ನಿರಾಕರಿಸಿದ್ದು, ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವವರನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

'ಆಪರೇಶನ್ ಡೆವಿಲ್ ಹಂಟ್' ನ ಮೇಲ್ವಿಚಾರಣೆ ಮಾಡಲು ಒಂದು ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಶುಕ್ರವಾರ ನೀಡಿದ ಹೇಳಿಕೆಯಲ್ಲಿ, ಮುಖ್ಯ ಸಲಹೆಗಾರ ಯೂನುಸ್, "ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಮತ್ತು ಮಾಜಿ ಪ್ರಧಾನಮಂತ್ರಿಯ ಕುಟುಂಬ ಮತ್ತು ಅವಾಮಿ ಲೀಗ್ ನಾಯಕರ ಆಸ್ತಿಗಳ ಮೇಲೆ ದಾಳಿ ನಿಲ್ಲಿಸಬೇಕೆಂದು ಹೇಳಿದ್ದಾರೆ.  

Tags:    

Similar News