ಕಠ್ಮಂಡು: ನೇಪಾಳದಾದ್ಯಂತ ಮಳೆಯಿಂದಾದ ಪ್ರವಾಹ ಮತ್ತು ಭೂಕುಸಿತದಿಂದ ಸತ್ತವರ ಸಂಖ್ಯೆ 200 ಕ್ಕೆ ತಲುಪಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸತತ ಮೂರನೇ ದಿನವೂ ಮುಂದುವರಿದಿದ್ದು, ಕನಿಷ್ಠ 30 ಜನರು ನಾಪತ್ತೆಯಾಗಿದ್ದಾರೆ.
ವಾರಾಂತ್ಯದಲ್ಲಿ ನಿರಂತರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಯಿತು. ಗೃಹ ಸಚಿವಾಲಯದ ವಕ್ತಾರ ರಿಷಿರಾಮ್ ತಿವಾರಿ ಪ್ರಕಾರ, ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 192 ಜನ ಸಾವನ್ನಪ್ಪಿದ್ದಾರೆ. 194 ಮಂದಿ ಗಾಯಗೊಂಡಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದರು.
ಭಾನುವಾರ ಸಿಂಘಾ ದರ್ಬಾರ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯಲ್ಲಿ ಪ್ರಧಾನಿ ಪ್ರಕಾಶ್ ಮಾನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಕ್ಷಣೆ, ಪರಿಹಾರ ಮತ್ತು ಪುನರ್ ಸ್ಥಾಪನೆಯ ಪ್ರಯತ್ನಗಳನ್ನು ಹೆಚ್ಚಿಸಲು ನಿರ್ಧರಿಸಲಾಯಿತು.
ʻಸೇನೆ, ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಇದುವರೆಗೆ ಸುಮಾರು 4,500 ವಿಪತ್ತು ಪೀಡಿತ ವ್ಯಕ್ತಿಗಳನ್ನು ರಕ್ಷಿಸಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಇತರ ತುರ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸ ಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನ ಆಹಾರ, ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದಾರೆ. ಭೂಕುಸಿತದಿಂದ ಪ್ರಮುಖ ಹೆದ್ದಾರಿಗಳಲ್ಲಿ ಅಡಚಣೆ ಉಂಟಾಗಿದ್ದು, ಭಾರತ ಮತ್ತು ದೇಶದ ಇತರ ಜಿಲ್ಲೆಗಳಿಂದ ಬರುವ ತರಕಾರಿಗಳು ತಾತ್ಕಾಲಿಕವಗಿ ಸ್ಥಗಿತಗೊಂಡಿರುವುದರಿಂದ ಬೆಲೆ ಗಗನಕ್ಕೇರಿದೆ.
ʻರಾಷ್ಟ್ರದಾದ್ಯಂತ ಹಲವಾರು ರಸ್ತೆಗಳು ಹಾನಿಗೊಳಗಾಗಿವೆ. ರಾಜಧಾನಿ ಕಠ್ಮಂಡುಗೆ ಹೋಗುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ,ʼ ಎಂದು ದಿ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಹೆದ್ದಾರಿಗಳ ತೆರವು ಪ್ರಯತ್ನಗಳು ನಡೆಯುತ್ತಿವೆ. ಪ್ರವಾಹ ಮತ್ತು ಭೂಕುಸಿತದಿಂದ 1100 ಮೆಗಾವ್ಯಾಟ್ ಸಾಮರ್ಥ್ಯದ ಕನಿಷ್ಠ 20 ಜಲವಿದ್ಯುತ್ ಸ್ಥಾವರಗಳು ಹಾನಿಗೊಳಗಾಗಿವೆ. ಇದರಿಂದ ಕಠ್ಮಂಡು ಮತ್ತು ಇತರ ಪ್ರಮುಖ ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಕಠ್ಮಂಡುವಿನ ಮುಖ್ಯ ನದಿ ಬಾಗ್ಮತಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ ಎಂದು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ಐಸಿಐಎಂಒಡಿ) ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಮತ್ತು ಮಾನ್ಸೂನ್ ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹವಾಮಾನ ಬದಲಾವಣೆಯಿಂದ ಏಷ್ಯಾದಾದ್ಯಂತ ಮಳೆ ಪ್ರಮಾಣ ಮತ್ತು ಕಾಲಾವಧಿ ಬದಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರವಾಹ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ, ಬಯಲು ಪ್ರದೇಶಧಲ್ಲಿ ಯೋಜಿತವಲ್ಲದ ನಿರ್ಮಾಣ ಕಾಮಗಾರಿ. ಇದರಿಂದ ಪ್ರವಾಹ ಬಯಲುಗಳಲ್ಲಿ ಭೂಮಿ ನೀರು ಹೀರಿಕೊಳ್ಳಲು ಮತ್ತು ಒಳಚರಂಡಿಗೆ ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ.
ರಸ್ತೆ ಅವ್ಯವಸ್ಥೆಯಿಂದ ಸಾವಿರಾರು ಪ್ರಯಾಣಿಕರು ವಿವಿಧೆಡೆ ಸಿಲುಕಿಕೊಂಡು,ಪರದಾಡುವಂತಾಗಿದೆ.