ನೇಪಾಳ: ಕೊಚ್ಚಿ ಹೋದ ಬಸ್‌, 3 ಭಾರತೀಯರು ಸೇರಿದಂತೆ 11 ಮೃತದೇಹ ಪತ್ತೆ

Update: 2024-07-15 10:10 GMT
ನೇಪಾಳದ ಚಿತ್ವಾನ್ ಜಿಲ್ಲೆ ಸಿಮಾಲ್ಟಾಲ್ ಪ್ರದೇಶದಲ್ಲಿ ಎರಡು ಬಸ್‌ಗಳು ನದಿಯಲ್ಲಿ ಮುಳುಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನೇಪಾಳದಲ್ಲಿ ನೀರಿನಲ್ಲಿ ಮುಳುಗಿದ್ದ ಮೂವರು ಭಾರತೀಯರು ಸೇರಿದಂತೆ, 11 ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಸೋಮವಾರ (ಜುಲೈ 15) ತಿಳಿಸಿದ್ದಾರೆ.

ಶುಕ್ರವಾರ ಸಂಭವಿಸಿದ ಭೂಕುಸಿತದ ಬಳಿಕ ಎರಡು ಬಸ್‌ಗಳು ನೀರಿನಲ್ಲಿ ಮುಳುಗಿದ್ದವು. ನಾಪತ್ತೆಯಾದ ಬಸ್‌ಗಳು ಮತ್ತು ಅವುಗಳಲ್ಲಿ ಪ್ರಯಾಣಿಸುತ್ತಿದ್ದ 50 ಜನರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ಆರಂಭಿಸಿದ್ದು, ನದಿ ತೀರದ ವಿವಿಧೆಡೆ ಶವಗಳು ಪತ್ತೆಯಾಗಿವೆ. 

ಮೃತರಲ್ಲಿ ಮೂವರು ಭಾರತೀಯರು, ನಾಲ್ವರು ನೇಪಾಳಿ ಪ್ರಜೆಗಳಾಗಿದ್ದು, ನಾಲ್ಕು ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಅವರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರಾ ಎಂಬುದು ಕೂಡ ಸ್ಪಷ್ಟವಾಗಿಲ್ಲ ಎಂದು ಸರ್ಕಾರಿ ಅಧಿಕಾರಿ ಖಿಮಾ ನಂದ ಭೂಸಾಲ್ ಹೇಳಿದ್ದಾರೆ. 

ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ 120 ಕಿಮೀ ದೂರದಲ್ಲಿರುವ ಸಿಮಾಲ್ಟಾಲ್ ಬಳಿ ಪ್ರಮುಖ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್‌ಗಳು ಶುಕ್ರವಾರ ಬೆಳಗ್ಗೆ ಮುಳುಗಿದವು. ಬಸ್‌ನಿಂದ ಕೆಳಗಿಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೆಲವು ಶವಗಳನ್ನು ಭಾರತದ ಗಡಿ ಸಮೀಪದಿಂದ ವಶಪಡಿಸಿಕೊಳ್ಳಲಾಗಿದೆ. ಭೂಕುಸಿತ ಸಂಭವಿಸಿದ ಸ್ಥಳದಿಂದ 100 ಕಿ.ಮೀ ದೂರದಲ್ಲಿ ಇಬ್ಬರು ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯ ಮುಂದುವರಿಕೆ: ಭದ್ರತಾ ಪಡೆಗಳ ರಕ್ಷಕರು ಅಯಸ್ಕಾಂತ, ಸ್ಕೂಬಾ ಡೈವಿಂಗ್ ಉಪಕರಣಗಳು ಮತ್ತು ನೀರೊಳಗಿನ ಸೋನಾರ್ ಇಮೇಜಿಂಗ್ ಸಾಧನಗಳನ್ನು ಬಳಸುತ್ತಿದ್ದಾರೆ. ಭಾರೀ ಯಂತ್ರಗಳು ಹೆದ್ದಾರಿಯನ್ನು ತೆರವುಗೊಳಿಸಿದವು. ಜೂನ್ ನಿಂದ ಸೆಪ್ಟೆಂಬರ್ ವರೆಗೆ ನೇಪಾಳದಲ್ಲಿ ಭಾರೀ ಮಳೆ ಆಗುತ್ತದೆ. ಆಗಾಗ ಭೂಕುಸಿತ ಸಂಭವಿಸುತ್ತದೆ.

Tags:    

Similar News