ಕಠ್ಮಂಡು ನಿಲ್ದಾಣದಲ್ಲಿ ವಿಮಾನ ಪತನ, 18 ಮಂದಿ ಸಾವು

ಸೌರ್ಯ ಏರ್‌ಲೈನ್ಸ್ ವಿಮಾನದ ಪೈಲಟ್ ಅಪಘಾತದಲ್ಲಿ ಬದುಕುಳಿದಿದ್ದಾರೆ. 18 ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿ ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಮಾತ್ರ ಇದ್ದರು.

Update: 2024-07-24 10:45 GMT

ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಟೇಕಾಫ್ ಆಗುತ್ತಿದ್ದ ಖಾಸಗಿ ಏರ್‌ಲೈನ್ಸ್‌ ವಿಮಾನ ಪತನಗೊಂಡಿದ್ದು, 19 ಜನರ ಪೈಕಿ 18 ಮಂದಿ ಸಾವಿಗೀಡಾಗಿದ್ದಾರೆ.

ಸೌರ್ಯ ಏರ್‌ಲೈನ್ಸ್ ವಿಮಾನ ಪೋಖಾರಾಕ್ಕೆ ತೆರಳುತ್ತಿತ್ತು. ಪೈಲಟ್ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ರನ್‌ವೇಯಿಂದ ಹೊರಬಿದ್ದು ಬೆಂಕಿಗೆ ಆಹುತಿಯಾಯಿತು.

ವಿಮಾನವು ರನ್‌ವೇಯಲ್ಲಿ ವೇಗವಾಗಿ ಚಲಿಸಿ, ಬೆಂಕಿ ಹೊತ್ತಿಕೊಂಡು, ದಟ್ಟವಾದ ಕಪ್ಪು ಹೊಗೆ ಹೊರಚೆಲ್ಲುತ್ತ ಸ್ಫೋಟಗೊಂಡ ದೃಶ್ಯಗಳು ದಾಖಲಾಗಿವೆ. 

ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತಕ್ಕೀಡಾದ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಕನಿಷ್ಠ 19 ಮಂದಿ ಇದ್ದರು. ಅಪಘಾತದ ಸ್ಥಳದಿಂದ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ʻಪೋಖಾರಾಗೆ ಹೊರಟಿದ್ದ ವಿಮಾನವು ಟೇಕಾಫ್ ಸಮಯದಲ್ಲಿ ಅಪಘಾತಕ್ಕೆ ಈಡಾಗಿದೆʼ ಎಂದು ಟಿಐಎ ವಕ್ತಾರ ಸುಭಾಷ್ ಝಾ ಹೇಳಿದ್ದಾರೆ.

ವಿಮಾನದಲ್ಲಿ ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಮಾತ್ರ ಇದ್ದರು ಎಂದು ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇದನ್ನು ಟಿಐಎಯ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ದೃಢಪಡಿಸಿದ್ದಾರೆ.

ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಘಾತದ ನಂತರ ಟಿಐಎಯ ನ್ನು ಮುಚ್ಚಲಾಗಿದೆ. ಇದರಿಂದ ಹತ್ತಾರು ಅಂತಾರಾಷ್ಟ್ರೀಯ ಮತ್ತು ದೇಶಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. 

Tags:    

Similar News