ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಟೀಕೆ; ವಿಷಾದ ವ್ಯಕ್ತಪಡಿಸಿದ ಎಲಾನ್ ಮಸ್ಕ್
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಮಾಡಿದ್ದ ತಮ್ಮ ಕೆಲವು ಪೋಸ್ಟ್‌ಗಳ ಬಗ್ಗೆ ವಿಷಾದವಿದೆ ಎಂದು ತಿಳಿಸಿದ್ದಾರೆ.;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕಳೆದ ಹಲವು ದಿನಗಳಿಂದ ಪರಸ್ಪರ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು. ಎಲಾನ್ ಮಸ್ಕ್ ಟ್ರಂಪ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಸಹ ಹಂಚಿಕೊಂಡಿದ್ದರು, ಇದಕ್ಕೆ ಟ್ರಂಪ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಆದರೆ ಇದೀಗ ಎಲಾನ್ ಮಸ್ಕ್ ತಮ್ಮ ಪೋಸ್ಟ್‌ಗಳಿಗೆ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಮಾಡಿದ್ದ ʼʼನನ್ನ ಕೆಲವು ಪೋಸ್ಟ್‌ಗಳ ಬಗ್ಗೆ ನನಗೆ ವಿಷಾದವಿದೆ. ಅದು ಎಲ್ಲೆ ಮೀರಿದ್ದವು ಎಂದು ಹೇಳಿದ್ದಾರೆ.
ಟ್ರಂಪ್ ಅವರು ತಮ್ಮ ವಿಧೇಯಕಗಳನ್ನು 'ಬಿಗ್ ಬ್ಯೂಟಿಫುಲ್ ಬಿಲ್' ಎಂದು ಶ್ಲಾಘಿಸಿಕೊಂಡರೆ, ಟೆಕ್ ಮಿಲಿಯನೇರ್ ಎಲಾನ್ ಮಸ್ಕ್ ಅವರು 'ಘನ ಘೋರ ಅಪಮಾನಕಾರಿ' ಎಂದು ವ್ಯಂಗ್ಯ ಮಾಡಿದ್ದರು. ಇದಾದ ಬಳಿಕ ಅಮೆರಿಕದ ಅಧ್ಯಕ್ಷರು ಮಸ್ಕ್ ಜತೆಗೆ ತಮ್ಮ ಸಂಬಂಧ ಸುಧಾರಿಸಿಕೊಳ್ಳುವ ಬಗ್ಗೆ ಯಾವುದೇ ಆಸಕ್ತಿ ಇಲ್ಲವೆಂದು ಹೇಳಿದ್ದರು.
ಎಲಾನ್ ಮಸ್ಕ್ ಮತ್ತು ಟ್ರಂಪ್ ನಡುವಿನ ಮನಸ್ತಾಪ ಹೆಚ್ಚುತ್ತಿರುವಾಗಲೇ, ಮಂಗಳವಾರ ಟ್ರಂಪ್ ನೀಡಿದ್ದ ಹೇಳಿಕೆ ವಿವಾದ ಹುಟ್ಟಿಸುವಂತಿತ್ತು. ಸರ್ಕಾರದ ದಕ್ಷತಾ ಇಲಾಖೆಯ ಮುಖ್ಯಸ್ಥರಾಗಿದ್ದ ವೇಳೆ ಎಲಾನ್ ಮಸ್ಕ್ ಮಾದಕ ವಸ್ತುಗಳನ್ನು ವೈಟ್ ಹೌಸ್‌ಗೆ ತರಿಸಿದ್ದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಟ್ರಂಪ್ ಅವರು ನೇರವಾಗಿ ನಿರಾಕರಿಸಿಲ್ಲ. ಆದರೂ, “ನನಗೆ ಖಚಿತವಿಲ್ಲ. ಹಾಗೆನನಿಸುವುದಿಲ್ಲ. ಅದು ಸತ್ಯವಾಗದಿರಲಿ ಎಂದು ನಾನು ಆಶಿಸುತ್ತೇನೆ; ಎಂದು ಪ್ರತಿಕ್ರಿಯೆ ನೀಡಿದ್ದರು.
ಟ್ರಂಪ್ ಈಗಾಗಲೇ ಮಸ್ಕ್ ಮೇಲಿನ ತನ್ನ ಅಸಮಾಧಾನವನ್ನು ಬಹಿರಂಗಪಡಿಸಿದ್ದು, ಮಸ್ಕ್ ಅವರ ಕಂಪನಿಗೆ ನೀಡಿರುವ ಸರ್ಕಾರಿ ಒಪ್ಪಂದಗಳನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಎಲಾನ್ ಮಸ್ಕ್ ಜೊತೆಗೆ ತಮ್ಮ ಸಂಬಂಧ ಸುಧಾರಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರು ಅಧ್ಯಕ್ಷರ ಕಚೇರಿಗೆ ಅಗೌರವ ತೋರಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
'ಸಂಬಂಧಗಳನ್ನು ಸರಿಪಡಿಸುವ ಬಯಕೆ ಇಲ್ಲ'
ಎಲಾನ್ ಮಾಸ್ಕ್ ಬಹಳಷ್ಟು ಅವಮಾನಕಾರಿಯಾಗಿ ನಡೆದುಕೊಂಡಿದ್ದಾರೆ. ಇದು ತುಂಬಾ ಕೆಟ್ಟ ವಿಷಯ. ʼʼನೀವು ಅಧ್ಯಕ್ಷರ ಸ್ಥಾನಕ್ಕೆ ಅವಮಾನ ಮಾಡಬಾರದುʼʼ ಎಂದು ಟ್ರಂಪ್ ಹೇಳಿದ್ದರು.
ಇವರಿಬ್ಬರ ಜಗಳ ಎಷ್ಟು ಮಿತಿ ಮೀರಿ ಹೋಗಿತ್ತು ಎಂದರೆ, ‘ನಾನು ಇಲ್ಲದಿದ್ದರೆ, ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು" ಎಂದು ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮಗಳ ಮೂಲಕ ಟ್ರಂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದನ್ನು ಟ್ರಂಪ್ ತಳ್ಳಿಹಾಕಿದ್ದರು.
ರಷ್ಯಾದ ಸಹಾಯ?
ಇದಕ್ಕೂ ಮೊದಲು, ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಕೂಡ ಮಾಸ್ಕೋ, ʼಸಮಂಜಸವಾದ ಶುಲ್ಕʼನೀಡಿದರೆ, ಎಲಾನ್ ಮಸ್ಕ್ ಹಾಗೂ ಟ್ರಂಪ್ ನಡುವೆ ಶಾಂತಿಗಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ ಎಂದು ಹೇಳಿದ್ದರು. ಅವರು ʼಸಮಂಜಸವಾದ ಶುಲ್ಕʼ ಎಂದು ಹೇಳಿರುವ ಉದ್ದೇಶ - ಮಸ್ಕ್ ಒಡೆತನದ ಸ್ಟಾರ್ಲಿಂಕ್ ಷೇರುಗಳನ್ನು ಪಾವತಿಯಾಗಿ ನೀಡುವುದು ಎಂಬುದಾಗಿತ್ತು.
ಇದಕ್ಕೂ ಮೊದಲು, ಎಲಾನ್ ಮಸ್ಕ್ ಅವರು X ನಲ್ಲಿ ತಮ್ಮ ಕೆಲವು ಪೋಸ್ಟ್‌ಗಳನ್ನು ಅಳಿಸಿಹಾಕಿದ್ದರು. 2019 ರಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಕಳ್ಳಸಾಗಣೆ ಆರೋಪ ಹೊತ್ತಿದ್ದ ಜೆಫ್ರಿ ಎಪ್ಸ್ಟೀನ್ ಅವರ ತನಿಖೆಯ ಫೈಲ್‌ಗಳನ್ನು ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿಲ್ಲ. ಏಕೆಂದರೆ ಅವುಗಳಲ್ಲಿ ಟ್ರಂಪ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದರು.