ಲಂಡನ್‌ನಲ್ಲಿ ಬೃಹತ್ ವಲಸೆ ವಿರೋಧಿ ರ‍್ಯಾಲಿ: ಹಿಂಸಾಚಾರ, 25ಕ್ಕೂ ಹೆಚ್ಚು ಮಂದಿ ಬಂಧನ

ಪರಿಸ್ಥಿತಿಯನ್ನು ನಿಯಂತ್ರಿಸಲು 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.;

Update: 2025-09-14 07:28 GMT
Click the Play button to listen to article

ಬ್ರಿಟ್​​ನಲ್ಲಿ ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ಅವರ ನೇತೃತ್ವದಲ್ಲಿ ನಡೆದ ಬೃಹತ್ ವಲಸೆ-ವಿರೋಧಿ ರ‍್ಯಾಲಿಯು ಹಿಂಸಾಚಾರಕ್ಕೆ ತಿರುಗಿದ್ದು, ಲಂಡನ್ ನಗರವು ಅಕ್ಷರಶಃ ರಣರಂಗವಾಗಿತ್ತು. "ಯುನೈಟ್ ದಿ ಕಿಂಗ್‌ಡಮ್" ಹೆಸರಿನ ಈ ರ‍್ಯಾಲಿಯಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಇದು ಬ್ರಿಟನ್‌ನ ಇತಿಹಾಸದಲ್ಲಿಯೇ ನಡೆದ ಅತಿದೊಡ್ಡ ಬಲಪಂಥೀಯ ಪ್ರತಿಭಟನೆಗಳಲ್ಲಿ ಒಂದಾಗಿದೆ.

ಶಾಂತಿಯುತವಾಗಿ ಆರಂಭವಾದ ರ‍್ಯಾಲಿಯು, ನಂತರ ಹಿಂಸಾತ್ಮಕ ರೂಪ ಪಡೆಯಿತು. ಮೆರವಣಿಗೆ ಸಾಗುತ್ತಿದ್ದಂತೆ, ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ 26 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ನಾಲ್ವರಿಗೆ ಹಲ್ಲು ಮುರಿಯುವುದು ಮತ್ತು ಬೆನ್ನುಮೂಳೆ ಗಾಯದಂತಹ ಗಂಭೀರ ಗಾಯಗಳಾಗಿವೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. "ಅನೇಕರು ಶಾಂತಿಯುತವಾಗಿ ಪ್ರತಿಭಟಿಸಲು ಬಂದಿದ್ದರೂ, ಕೆಲವರು ಹಿಂಸಾಚಾರದ ಉದ್ದೇಶದಿಂದಲೇ ಬಂದಿದ್ದರು" ಎಂದು ಸಹಾಯಕ ಆಯುಕ್ತ ಮ್ಯಾಟ್ ಟ್ವಿಸ್ಟ್ ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆಗಳ ಸುರಿಮಳೆ

ರ‍್ಯಾಲಿಯನ್ನುದ್ದೇಶಿಸಿ ವೀಡಿಯೋ ಮೂಲಕ ಮಾತನಾಡಿದ ಎಕ್ಸ್ (ಟ್ವಿಟರ್) ಮಾಲೀಕ ಎಲಾನ್ ಮಸ್ಕ್, "ಅನಿಯಂತ್ರಿತ ವಲಸೆಯಿಂದ ಬ್ರಿಟನ್ ನಾಶವಾಗುತ್ತಿದೆ, ತಕ್ಷಣವೇ ಸರ್ಕಾರ ಬದಲಾವಣೆಯಾಗಬೇಕು" ಎಂದು ಕರೆ ನೀಡಿದರು. ಫ್ರಾನ್ಸ್‌ನ ಬಲಪಂಥೀಯ ನಾಯಕ ಎರಿಕ್ ಜೆಮ್ಮೂರ್, "ದಕ್ಷಿಣದಿಂದ ಬರುವ ಮುಸ್ಲಿಂ ಸಂಸ್ಕೃತಿಯು ನಮ್ಮನ್ನು ಆಕ್ರಮಿಸಿಕೊಳ್ಳುತ್ತಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಟಾಮಿ ರಾಬಿನ್ಸನ್ ಅವರು, "ಈ ದೇಶವನ್ನು ಕಟ್ಟಿದ ಬ್ರಿಟಿಷರಿಗಿಂತ ವಲಸಿಗರಿಗೆ ನ್ಯಾಯಾಲಯದಲ್ಲಿ ಹೆಚ್ಚು ಹಕ್ಕುಗಳಿವೆ" ಎಂದು ಆರೋಪಿಸಿದರು.

"ವಲಸಿಗರನ್ನು ವಾಪಸ್ ಕಳುಹಿಸಿ," ಮತ್ತು "ನಮ್ಮ ದೇಶವನ್ನು ನಮಗೆ ಹಿಂದಿರುಗಿಸಿ" ಎಂಬಂತಹ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿದರು. ಇದೇ ವೇಳೆ, 'ಸ್ಟ್ಯಾಂಡ್ ಅಪ್ ಟು ರೇಸಿಸಂ' ಸಂಘಟನೆಯು ಆಯೋಜಿಸಿದ್ದ ಪ್ರತಿ-ಪ್ರತಿಭಟನೆಯಲ್ಲಿ ಸುಮಾರು 5,000 ಜನರು ಭಾಗವಹಿಸಿ, "ನಿರಾಶ್ರಿತರಿಗೆ ಸ್ವಾಗತ" ಎಂಬ ಫಲಕಗಳನ್ನು ಪ್ರದರ್ಶಿಸಿದರು. ಇಂಗ್ಲಿಷ್ ಕರಾವಳಿಗೆ ದೋಣಿಗಳ ಮೂಲಕ ಅಕ್ರಮವಾಗಿ ವಲಸಿಗರು ಆಗಮಿಸುತ್ತಿರುವ ವಿಷಯವು ಬ್ರಿಟನ್‌ನಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. 

Tags:    

Similar News