ಕೆನಡಾದಲ್ಲಿ ಹಿಂದೂಗಳ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ; ವ್ಯಾಪಕ ಆಕ್ರೋಶ
ಹಿಂದೂ ಸಭಾ ದೇವಾಲಯದಲ್ಲಿ ಭಕ್ತರ ಮೇಲಿನ ದಾಳಿಯನ್ನು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಖಂಡಿಸಿದ್ದು, ಇಂತಹ ಹಿಂಸಾತ್ಮಕ ಕೃತ್ಯಗಳು ಸ್ವೀಕಾರಾರ್ಹವಲ್ಲʼ ಎಂದು ಹೇಳಿದ್ದಾರೆ.;
ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ದೇವಸ್ಥಾನದ ಭಕ್ತರ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ದಾಳಿಯ ವೀಡಿಯೊ ಪೋಸ್ಟ್ ಮಾಡಿದ್ದು, ಇದರಲ್ಲಿ ಖಲಿಸ್ತಾನಿ ಧ್ವಜಗಳನ್ನು ಹಿಡಿದಿರುವ ಪ್ರತ್ಯೇಕತಾವಾದಿಗಳ ಗುಂಪು ಹಿಂದೂಗಳನ್ನು ನಿಂದಿಸಿ, ಹಿಂಸಾತ್ಮಕ ಹಲ್ಲೆ ನಡೆಸುತ್ತಿದ್ದಾರೆ.
ಹಿಂದೂ ಸಭಾ ದೇವಾಲಯದಲ್ಲಿ ಭಕ್ತರ ಮೇಲಿನ ದಾಳಿಯನ್ನು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಖಂಡಿಸಿದ್ದು, ಇಂತಹ ಹಿಂಸಾತ್ಮಕ ಕೃತ್ಯಗಳು ಸ್ವೀಕಾರಾರ್ಹವಲ್ಲʼ ಎಂದು ಹೇಳಿದ್ದಾರೆ.
ಕೆನಡಾ ಪ್ರತಿಯೊಬ್ಬ ನಿವಾಸಿಗಯು ತನ್ನ ನಂಬಿಕೆಯನ್ನು ಮುಕ್ತವಾಗಿ ಪಾಲಿಸಲು ಸ್ವತಂತ್ರರಿದ್ದಾರೆ. ಅವರ ಧಾರ್ಮಿಕ ಆಚರಣೆಗೆ ಚ್ಯುತಿ ತರುವ ಘಟನೆಗಳನ್ನು ಕೆನಡಾ ಸಹಿಸುವುದಿಲ್ಲ. ಘಟನೆ ಕುರಿತು ತ್ವರಿತವಾಗಿ ಸ್ಪಂದಿಸಿದ ಪೀಲ್ ಪ್ರಾದೇಶಿಕ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಹಿಂದೂ ಭಕ್ತರ ಮೇಲಿನ ಖಲಿಸ್ತಾನಿಗಳ ದಾಳಿಯನ್ನು ಭಾರತ ಮೂಲದ ಸಂಸದ ಚಂದ್ರ ಆರ್ಯ ಅವರು ಕೂಡ ಖಂಡಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಖಲಿಸ್ತಾನಿ ಉಗ್ರರು ಕೆನಡಾದಲ್ಲಿ ಮನಸೋಇಚ್ಛೆ ದುಷ್ಕೃತ್ಯಗಳಲ್ಲಿ ಭಾಗಿಸಲು ಉಚಿತ ಪಾಸ್ ಪಡೆದಂತಿದೆ. ರಾಜಕೀಯ ಬೆಂಬಲದ ಜೊತೆಗೆ ಕಾನೂನು ಜಾರಿ ಸಂಸ್ಥೆಗಳಿಂದಲೂ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಅವರು ಭಾವಿಸಿದಂತಿದೆ ಎಂದು ಎಕ್ಸ್ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
ಹಿಂದೂಗಳಿಗೆ ಭದ್ರತೆ ಮತ್ತು ಸುರಕ್ಷತೆಯ ಹಕ್ಕನ್ನು ಖಾತ್ರಿಪಡಿಸದೇ ಹೋದರೆ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮೇಯರ್ ಅಸಮಾಧಾನ
ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ಹಿಂದೂ ಸಭಾ ದೇವಾಲಯ ಆವರಣದಲ್ಲಿ ನಡೆದಿರುವ ಹಿಂಸಾಚಾರದ ಕೃತ್ಯವನ್ನು ಖಂಡಿಸಿದ್ದಾರೆ.
ಕೆನಡಾದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದೆ. ಪ್ರತಿಯೊಬ್ಬರೂ ತಮ್ಮ ಪೂಜಾ ಸ್ಥಳಗಳಲ್ಲಿ ಸುರಕ್ಷಿತವಾಗಿರಬೇಕು ಯಾವುದೇ ಬಾಹ್ಯ ಹಿಂಸಾಚಾರವನ್ನು ನಾನು ಖಂಡಿಸುತ್ತೇನೆ ಎಂದು ಬ್ರೌನ್ ಹೇಳಿದ್ದಾರೆ. ಪೀಲ್ ಪೊಲೀಸರು ಅಶಾಂತಿ ಸೃಷ್ಟಿಸಿದ, ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಕೆನಡಾ ದೇಶದ ಇತರ ಸಂಸದರು ಖಲಿಸ್ತಾನಿಗಳ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೆಡರಲ್ ಸಚಿವೆ ಅನಿತಾ ಆನಂದ್, ಕನ್ಸರ್ವೇಟಿವ್ ನಾಯಕ ಪಿಯರೆ ಪೊಯ್ಲಿವ್ರೆ, ಬ್ರಾಂಪ್ಟನ್ ನಾರ್ತ್ ಸಂಸದೆ ರೂಬಿ ಸಹೋಟಾ ಸೇರಿದಂತೆ ಹಲವರು ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದ ಸಂಬಂಧ ಈಗಾಗಲೇ ಕೆನಡಾ ಹಾಗೂ ಭಾರತದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರವಾಗಿದೆ. ನಿಜ್ಜಾರ್ ಹತ್ಯೆಯಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದ ಬಳಿಕ ಕೆನಡಾ ಜೊತೆಗಿನ ಸಂಬಂಧ ಹದಗೆಟ್ಟಿದೆ.