ಅಮೆರಿಕ ಮಧ್ಯಸ್ಥಿಕೆ: ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆ
ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆ ನಡುವಿನ ಕದನ ವಿರಾಮವು ಬುಧವಾರ ಮುಂಜಾನೆಯಿಂದ ಚಾಲ್ತಿಗೆ ಬಂದಿದೆ..;
ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಗಳು ಅಮೆರಿಕ ಮಧ್ಯಸ್ಥಿಕೆಯ ಶಾಂತಿ ಒಪ್ಪಂದವನ್ನು ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆ ನಡುವಿನ ಕದನ ವಿರಾಮವು ಬುಧವಾರ ಮುಂಜಾನೆ ಆರಂಭವಾಗಿದ್ದು, ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ 14 ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಈ ಬಗ್ಗೆ ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಕದನ ವಿರಾಮ ಒಪ್ಪಂದದ ಪ್ರಕಾರ ಮುಂದಿನ 60 ದಿನಗಳಲ್ಲಿ ಇಸ್ರೇಲ್ ಕ್ರಮೇಣ ತನ್ನ ಸೈನ್ಯವನ್ನು ಲೆಬನಾನ್‌ನಿಂದ ಹಿಂತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಒಪ್ಪಂದವನ್ನು ಅನುಮೋದಿಸಿದ ಬಳಿಕ ಈ ಭಾಷಣ ಮಾಡಿದರು.
"ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ವಿನಾಶಕಾರಿ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕ ಪ್ರಸ್ತಾಪವನ್ನು ಇಸ್ರೇಲ್ ಮತ್ತು ಲೆಬನಾನ್ ಸರ್ಕಾರಗಳು ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷವನ್ನು ಮುಕ್ತಾಯಗೊಳಿಸಲು ಕದನ ವಿರಾಮವನ್ನು ರೂಪಿಸಲು ಇಸ್ರೇಲ್ ಮತ್ತು ಲೆಬನಾನ್ ಸರ್ಕಾರಗಳೊಂದಿಗೆ ಕೆಲಸ ಮಾಡಲು ನಾನು ನನ್ನ ತಂಡಕ್ಕೆ ನಿರ್ದೇಶನ ನೀಡಿದ್ದೇನೆ. ಈ ಒಪ್ಪಂದಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿದ್ದು, ಸ್ಥಳೀಯ ಕಾಲಮಾನ ಅಂದರೆ ನಾಳೆ ಬೆಳಗ್ಗೆ 4:00 ಗಂಟೆಗೆ ಕದನವಿರಾಮ ಜಾರಿಗೆ ಬರಲಿದೆ. ಲೆಬನಾನ್-ಇಸ್ರೇಲ್ ಗಡಿಯಾದ್ಯಂತ ಹೋರಾಟವು ಕೊನೆಗೊಳ್ಳುತ್ತದೆ. ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ," ಎಂದು ಅವರು ತಿಳಿಸಿದರು.
ಹಿಜ್ಬುಲ್ಲಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಲ್ಲಿ ಉಳಿದುಕೊಂಡಿರುವವರು ಮತ್ತೆ ಇಸ್ರೇಲ್ ಭದ್ರತೆಗೆ ಬೆದರಿಕೆ ಹಾಕಲು ಬಿಡುವುದಿಲ್ಲ. ಮುಂದಿನ 60 ದಿನಗಳಲ್ಲಿ ಲೆಬನಾನಿನ ಸೇನೆ ಮತ್ತು ರಾಜ್ಯ ಭದ್ರತಾ ಪಡೆಗಳು ನಿಯೋಜಿಸಿ ಮತ್ತೊಮ್ಮೆ ತಮ್ಮ ಸ್ವಂತ ಭೂಪ್ರದೇಶದ ಮೇಲೆ ಹಿಡಿತ ಸಾಧಿಸುತ್ತವೆ. ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಭಯೋತ್ಪಾದಕ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಮುಂದಿನ 60 ದಿನಗಳಲ್ಲಿ ಇಸ್ರೇಲ್ ತನ್ನ ಉಳಿದ ಪಡೆಗಳನ್ನು ಕ್ರಮೇಣ ಹಿಂತೆಗೆದುಕೊಳ್ಳಬೇಕು. ಎರಡೂ ಕಡೆಯ ನಾಗರಿಕರು ಶೀಘ್ರದಲ್ಲೇ ಸುರಕ್ಷಿತವಾಗಿ ತಮ್ಮ ಸಮುದಾಯಗಳಿಗೆ ಮರಳುತ್ತಾರೆ. ಅವರ ಮನೆಗಳು, ಶಾಲೆಗಳು, ಹೊಲಗಳು, ವ್ಯವಹಾರಗಳು ಮತ್ತು ಅವರ ಜೀವನವನ್ನು ಪುನರ್ನಿರ್ಮಿಸಲು ಆರಂಭಿಸುತ್ತಾರೆ ಎಂದು ಬಿಡೆನ್ ವಿವರಿಸಿದ್ದಾರೆ.