ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಆತ್ಮಹತ್ಯೆ

Update: 2024-02-08 06:49 GMT

ನ್ಯೂಯಾರ್ಕ್, ಫೆ 8- ಪರ್ಡ್ಯೂ ವಿಶ್ವವಿದ್ಯಾಲಯದ ಭಾರತೀಯ-ಅಮೆರಿಕನ್ ವಿದ್ಯಾರ್ಥಿಯೊಬ್ಬರು ಇಂಡಿಯಾನಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಸಮೀರ್ ಕಾಮತ್ ‌ಅವರ ಶವ ಫೆಬ್ರವರಿ 5 ರಂದು ಇಂಡಿಯಾನಾದ ವಿಲಿಯಮ್ಸ್‌ಪೋರ್ಟ್‌ನಲ್ಲಿರುವ ಅರಣ್ಯದಲ್ಲಿ ಪತ್ತೆಯಾಗಿದೆ. ಫೆಬ್ರವರಿ 6 ರಂದು ಶವಪರೀಕ್ಷೆಯನ್ನು ನಡೆಸಲಾಗಿದ್ದು, ತಲೆಗೆ ಗುಂಡೇಟು ಕಾರಣ ಎಂದು ತಿಳಿದುಬಂದಿದೆ. 

ಕಾಮತ್ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಅಧ್ಯಯನ ನಡೆಸುತ್ತಿದ್ದರು. ಮಸಾಚುಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 2021ರಲ್ಲಿ ಪರ್ಡ್ಯೂಗೆ ಬಂದರು ಎಂದು ಪರ್ಡ್ಯೂ ವಿಶ್ವವಿದ್ಯಾನಿಲಯ ಹೇಳಿದೆ. 

ಕಾಮತ್ ಅವರ ಸಾವು ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ದುರಂತ ಘಟನೆಗಳ ಸರಣಿಯಲ್ಲಿ ಇತ್ತೀಚಿನದು. ಕಳೆದ ತಿಂಗಳು ಪರ್ಡ್ಯೂ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ನೀಲ್ ಆಚಾರ್ಯ(19) ಶವವಾಗಿ ಪತ್ತೆಯಾಗಿದ್ದರು. ಕಳೆದ ತಿಂಗಳು ಜಾರ್ಜಿಯಾದಲ್ಲಿ ನಿರಾಶ್ರಿತ ಮಾದಕ ವ್ಯಸನಿಯೊಬ್ಬ ವಿವೇಕ್ ಸೈನಿ(25) ಅವರನ್ನು ಹತ್ಯೆ ಮಾಡಿದ್ದ. ಫೆಬ್ರವರಿ ಆರಂಭದಲ್ಲಿ, ಹೈದರಾಬಾದ್ ಮೂಲದ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಸೈಯದ್ ಮಜಾಹಿರ್ ಅಲಿ ಮೇಲೆ ಚಿಕಾಗೋದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಬೆನ್ನಟ್ಟಿ ಹಲ್ಲೆ ನಡೆಸಿದ್ದರು. 

(ಆತ್ಮಹತ್ಯೆಗಳನ್ನು ತಡೆಯಬಹುದು. ಸಹಾಯಕ್ಕಾಗಿ ನೇಹಾ ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ - 044-24640050; ಆಸರೆ ಸಹಾಯವಾಣಿ - +91-9820466726; ಕಿರಣ್ - 5900000 0019, ದಿಶಾ 0471- 2552056, ಮೈತ್ರಿ 0484 2540530, ಮತ್ತು ಸ್ನೇಹಾ 044-24640050)

Similar News