ಹಸೀನಾ ಅವರನ್ನು ಹಸ್ತಾಂತರಿಸದಿದ್ದರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ: ಬಿಎನ್‌ಪಿ
ಬಾಂಗ್ಲಾದೇಶದ ನೆಲದಲ್ಲಿ ಭಾರತದ ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಿಗೆ ಬಿಎನ್‌ಪಿ ಅನುಮತಿ ನೀಡುವುದಿಲ್ಲ ಎಂದು ಪಕ್ಷದ ಮಹಾ ಕಾರ್ಯದರ್ಶಿ ಜನರಲ್ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಹೇಳಿದ್ದಾರೆ.;
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರವು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದು. ಆದರೆ ದೆಹಲಿಯಲ್ಲಿ ಅವರ ವಾಸ್ತವ್ಯದ ಮುಂದುವರಿಕೆ ಸಂಬಂಧಗಳನ್ನು ಹದಗೆಡಿಸಬಹುದು ಎಂದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಹೇಳಿದೆ.
ʻತಮ್ಮ ಪಕ್ಷ ಭಾರತದೊಂದಿಗೆ ಬಲವಾದ ಸಂಬಂಧವನ್ನು ಬಯಸುತ್ತದೆ. ಹಿಂದಿನ ಭಿನ್ನಾಭಿಪ್ರಾಯ ಮರೆತು, ಮುಂದೆ ನಡೆಯಲು ಸಿದ್ಧವಿದೆ. ಭಾರತದ ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಿಗೆ ಬಿಎನ್‌ಪಿ ಅನುಮತಿಸುವುದಿಲ್ಲ,ʼ ಎಂದು ಪಕ್ಷದ ಮಹಾ ಕಾರ್ಯದರ್ಶಿ ಜನರಲ್ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಹೇಳಿದ್ದಾರೆ.
ಅದಾನಿ ಯೋಜನೆ ಪರಿಶೀಲನೆ: ʻಪಕ್ಷ ಅಧಿಕಾರಕ್ಕೆ ಬಂದರೆ, ಅವಾಮಿ ಲೀಗ್ ಆಡಳಿತದಲ್ಲಿ ಸಹಿ ಹಾಕಲಾದ ಅದಾನಿ ವಿದ್ಯುತ್ ಒಪ್ಪಂದವನ್ನು ಪರಿಶೀಲಿಸುತ್ತದೆ ಮತ್ತು ಮರು ಮೌಲ್ಯಮಾಪನ ಮಾಡುತ್ತದೆ. ಶೇಖ್ ಹಸೀನಾ ಅವರು ಮತ್ತು ಅವರ ಆಡಳಿತ ನಡೆಸಿದ ಎಲ್ಲಾ ಅಪರಾಧಗಳು ಮತ್ತು ಭ್ರಷ್ಟಾಚಾರಕ್ಕೆ ದೇಶದ ಕಾನೂನನ್ನು ಎದುರಿಸಬೇಕಿದೆ. ಭಾರತವು ಬಾಂಗ್ಲಾದೇಶಿಯರ ಭಾವನೆಗಳನ್ನು ಗೌರವಿಸಿ, ಹಸೀನಾ ಅವರು ಬಾಂಗ್ಲಾಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಬೇಕು, ʼಎಂದು ಹೇಳಿದರು.
ಹಸೀನಾ ಟೀಕೆ: ʻಶೇಖ್ ಹಸೀನಾ ಮತ್ತು ಅವಾಮಿ ಲೀಗ್ ಎರಡೂ ಇಲ್ಲಿ ತಪ್ಪು ಮಾಡಿವೆ. ಅವರ ಪರವಾಗಿ ನಿಲ್ಲುವುದು ಭಾರತದ ಬಗೆಗಿನ ಗ್ರಹಿಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹಸೀನಾ ಬಾಂಗ್ಲಾಕ್ಕೆ ಮರಳುವುದನ್ನು ಖಚಿತಪಡಿಸದಿದ್ದರೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತವೆ. ಹಸೀನಾ ಆಡಳಿತಕ್ಕೆ ಬೆಂಬಲ ನೀಡುತ್ತಿದೆ ಎಂದು ಭಾರತದ ಮೇಲೆ ಈಗಾಗಲೇ ಕೋಪವಿದೆ,ʼ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ʻಇಂಡಿಯಾ ಔಟ್ʼ ಅಭಿಯಾನಕ್ಕೆ ಭಾರತದ ವಿರುದ್ಧದ ಸ್ಪಷ್ಟ ಕೋಪ ಕಾರಣ. ಭಾರತ ಬಾಂಗ್ಲಾ ದೇಶೀಯರ ಬದಲು ಅವಾಮಿ ಲೀಗ್ ಜೊತೆಗಿನ ಸಂಬಂಧದಲ್ಲಿ ತೃಪ್ತಿ ಹೊಂದಿತು ಎಂದು ಹೇಳಿದರು.
ರಾಜತಾಂತ್ರಿಕ ಲೋಪ: ʻಬಾಂಗ್ಲಾದೇಶದೊಟ್ಟಿಗೆ ಭಾರತದ ರಾಜತಾಂತ್ರಿಕತೆ ಪ್ರಾಯೋಗಿಕವಾಗಿರಲಿಲ್ಲ. ಭಾರತ ಬಾಂಗ್ಲಾದೇಶದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಬೇಕು.ಬಿಎನ್‌ಪಿ ಅಧಿಕಾರಕ್ಕೆ ಬಂದರೆ ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು, ತಪ್ಪುಗ್ರಹಿಕೆಗಳು-ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ,ʼ ಎಂದು ಅಲಂಗೀರ್ ಹೇಳಿದರು.
ʻಬಾಂಗ್ಲಾದೇಶದಲ್ಲಿ ಇಂತಹ ದೊಡ್ಡ ರಾಜಕೀಯ ಕ್ರಾಂತಿಯ ನಂತರವೂ ಭಾರತವು ನಮ್ಮೊಂದಿಗೆ ಮಾತುಕತೆ ಪ್ರಾರಂಭಿಸಿಲ್ಲ.ಆದರೆ, ಚೀನಾ, ಅಮೆರಿಕ, ಇಂಗ್ಲೆಂಡ್ ಮತ್ತು ಪಾಕಿಸ್ತಾನಗಳು ಈಗಾಗಲೇ ಹಾಗೆ ಮಾಡಿವೆ,ʼ ಎಂದು ಹೇಳಿದರು.
ಹಿಂದುಗಳ ರಕ್ಷಣೆ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ದೇಶದ ʻಆಂತರಿಕ ವಿಷಯʼ. ʻಹಿಂದುಗಳ ಮೇಲಿನ ದಾಳಿ ವರದಿಗಳು ನಿಖರವಾಗಿಲ್ಲ. ಏಕೆಂದರೆ, ಹೆಚ್ಚಿನ ಘಟನೆಗಳು ಕೋಮುವಾದಕ್ಕಿಂತ ಹೆಚ್ಚಾಗಿ ರಾಜಕೀಯ ಪ್ರೇರಿತವಾಗಿವೆ. ವರ್ಷದೊಳಗೆ ಬಾಂಗ್ಲಾದೇಶದಲ್ಲಿ ಹೊಸ ಚುನಾವಣೆಗಳು ನಡೆಯಲಿವೆ,ʼ ಎಂದು ಅಲಂಗೀರ್ ಹೇಳಿದರು.