ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ರಷ್ಯಾ ಮಹಿಳೆ, ಮಕ್ಕಳ ಪಾಲನೆ ಹಕ್ಕಿಗೆ ಮಾಜಿ ಪತಿ ಬೇಡಿಕೆ

38 ವರ್ಷದ ಡೋರ್ ಗೋಲ್ಡ್‌ಸ್ಟೀನ್, ಕಳೆದ ಎರಡು ವರ್ಷಗಳಿಂದ ನೀನಾ ಕುಟಿನಾ ಅವರಿಂದ ಪ್ರತ್ಯೇಕವಾಗಿದ್ದಾರೆ. ಅದರೆ ಅದಕ್ಕಿಂತ ಹಿಂದೆ ವರ್ಷಕ್ಕೆ ಆರು ತಿಂಗಳು ನೀನಾ ಅವರೊಂದಿಗೆ ಗೋವಾದಲ್ಲಿ ವಾಸಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.;

Update: 2025-07-17 11:33 GMT

ಗೋಕರ್ಣ ಸಮೀಪದ ಅರಣ್ಯದ ಗುಹೆಯೊಂದರಲ್ಲಿ ರಷ್ಯಾದ 40 ವರ್ಷದ ಮಹಿಳೆ ನೀನಾ ಕುಟಿನಾ ಪತ್ತೆಯಾದ ಪ್ರಕರಣಕ್ಕೆ ಮತ್ತೊಂದು ತಿರುವು ದೊರಕಿದೆ. ತಮ್ಮ ಇಬ್ಬರು ಪುತ್ರಿಯರೊಂದಿಗೆ ವಾಸಿಸುತ್ತಿದ್ದ ಮಹಿಳೆಯ ಪ್ರಿಯತಮ ಇಸ್ರೇಲ್​ ಮೂಲಕ ಡೋರ್ ಗೋಲ್ಡ್‌ಸ್ಟೀನ್ ಇದೀಗ ಭಾರತಕ್ಕೆ ಬಂದಿದ್ದು, ಮಕ್ಕಳ ಪಾಲನೆ ಹಕ್ಕು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಮಕ್ಕಳು ಭಾರತದಿಂದ ರಷ್ಯಾಕ್ಕೆ ಗಡೀಪಾರು ಆಗುವ ಸಾಧ್ಯತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಗೋಲ್ಡ್‌ಸ್ಟೀನ್, ನ್ಯಾಯ ಕೊಡಿ ಅಳಲು ತೋಡಿಕೊಂಡಿದ್ದಾರೆ.

"ನಾನು ವಾರಕ್ಕೆ ಎರಡರಿಂದ ಮೂರು ಬಾರಿ ಅವರನ್ನು ಭೇಟಿಯಾಗಿ, ಅವರ ಯೋಗಕ್ಷೇಮ ನೋಡಿಕೊಳ್ಳಲು ಬರುತ್ತಿದ್ದೆ. ಅವರು ರಷ್ಯಾಕ್ಕೆ ಹೋದರೆ ಅವರೊಂದಿಗೆ ಸಂಪರ್ಕದಲ್ಲಿರುವುದು ಕಷ್ಟವಾಗುತ್ತದೆ. ಹಾಗಾಗಿ, ಅವರು ಭಾರತದಲ್ಲಿಯೇ ಇರಬೇಕು ಎಂದು ನಾನು ಆಶಿಸುತ್ತೇನೆ" ಎಂದು ಡೋರ್ ಗೋಲ್ಡ್‌ಸ್ಟೀನ್ ಬುಧವಾರ (ಜುಲೈ 16) ಮಾಧ್ಯಮಗಳಿಗೆ ತಿಳಿಸಿದ್ದರು.

ಸಂಪರ್ಕ ಕಡಿತ ಮತ್ತು ಪತ್ತೆ

38 ವರ್ಷದ ಡೋರ್ ಗೋಲ್ಡ್‌ಸ್ಟೀನ್, ಕಳೆದ ಎರಡು ವರ್ಷಗಳಿಂದ ನೀನಾ ಕುಟಿನಾ ಅವರಿಂದ ಪ್ರತ್ಯೇಕವಾಗಿದ್ದಾರೆ. ಅದರೆ ಅದಕ್ಕಿಂತ ಹಿಂದೆ ವರ್ಷಕ್ಕೆ ಆರು ತಿಂಗಳು ನೀನಾ ಅವರೊಂದಿಗೆ ಗೋವಾದಲ್ಲಿ ವಾಸಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ನೀನಾ ತಮ್ಮ ಮಕ್ಕಳೊಂದಿಗೆ ಗೋವಾ ತೊರೆದ ನಂತರ ಸಂಪರ್ಕ ಕಳೆದುಕೊಂಡಿದ್ದೆ ಎಂದು ಅವರು ಮಾಹಿತಿ ನೀಡಿದ್ದಾರೆ.

"ನಾನು ಗೋಕರ್ಣದ ಬೀಚ್‌ಗಳಲ್ಲಿ ಅವರನ್ನು ಹುಡುಕಿದರೂ ಸಿಗಲಿಲ್ಲ. ಈಗ ಮಕ್ಕಳೊಂದಿಗೆ ಇರಲು ಅವಕಾಶ ನೀಡುತ್ತಿಲ್ಲ. ನಾನು ಈಗ ಅವರ ಜೊತೆ ಇಲ್ಲದ ಕಾರಣ ಹೀಗೆ ಮಾಡುತ್ತಿದ್ದಾರೆ" ಎಂದು ಗೋಲ್ಡ್‌ಸ್ಟೀನ್ ಆರೋಪಿಸಿದ್ದಾರೆ. .

ಪ್ರೀತಿಯ ಆರಂಭ ಮತ್ತು ಕಾಣೆಯಾದ ದೂರು

ಗೋಲ್ಡ್‌ಸ್ಟೀನ್ ಅವರು ಎಂಟು ವರ್ಷಗಳ ಹಿಂದೆ ಗೋವಾದಲ್ಲಿ ನೀನಾ ಕುಟಿನಾ ಅವರನ್ನು ಭೇಟಿಯಾಗಿ, ಪರಸ್ಪರ ಪ್ರೀತಿ ಬೆಳೆಸಿರುವುದಾಗಿ ತಿಳಿಸಿದ್ದಾರೆ. "ನಾವು ಭಾರತದಲ್ಲಿ ಏಳು ತಿಂಗಳು ಒಟ್ಟಿಗೆ ಕಳೆದಿದ್ದೇವೆ, ಬಳಿಕ ಉಕ್ರೇನ್‌ಗೆ ಹೋಗಿ ಅಲ್ಲಿಯೂ ಸಮಯ ಕಳೆದಿದ್ದೇವೆ" ಎಂದು ಗೋಲ್ಡ್‌ಸ್ಟೀನ್ ಹೇಳಿದ್ದಾರೆ.

ಗೋಲ್ಡ್‌ಸ್ಟೀನ್ ತಮ್ಮ ಪುತ್ರಿಯರಾದ ಪ್ರೀಮಾ (6 ವರ್ಷ) ಮತ್ತು ಅಮಾ (5 ವರ್ಷ) ಅವರನ್ನು ಭೇಟಿ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಭಾರತಕ್ಕೆ ಆಗಾಗ್ಗೆ ಬರುತ್ತಿದ್ದರು. ಆದರೆ, ಈ ಬಾರಿ ಮಾರ್ಚ್‌ನಲ್ಲಿ ಭಾರತ ತೊರೆದ ಬಳಿಕ ಯುದ್ಧದ ಕಾರಣದಿಂದ ಮತ್ತೆ ಬರಲು ಸಾಧ್ಯವಾಗಿರಲಿಲ್ಲ. "ಕೆಲವು ತಿಂಗಳ ಹಿಂದೆ ನನಗೆ ತಿಳಿಸದೆ ಅವರೆಲ್ಲರೂ ಗೋವಾ ತೊರೆದರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ನಾಪತ್ತೆ ದೂರು ನೀಡಿದೆ" ಎಂದು ಅವರು ಹೇಳಿಕೊಂಡಿದ್ದಾರೆ.

"ಗೋಕರ್ಣದಲ್ಲಿ ಮಕ್ಕಳು ಹಾಗೂ ನೀನಾ ಪತ್ತೆಯಾದ ಸುದ್ದಿ ಕೇಳಿದ ತಕ್ಷಣ ಬೆಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಿ ಅವರನ್ನು ಭೇಟಿಯಾಗಲು ಯತ್ನಿಸಿದೆ" ಎಂದು ಗೋಲ್ಡ್‌ಸ್ಟೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಲನೆ ಹಕ್ಕು ಮತ್ತು ಭಾರತೀಯ ಪೌರತ್ವದ ಪ್ರಶ್ನೆ

ಗೋಲ್ಡ್‌ಸ್ಟೀನ್ ಈಗ ತಮ್ಮ ಮಕ್ಕಳ ಪಾಲನೆ ಹಕ್ಕು ಪಡೆಯಲು ಉತ್ಸುಕರಾಗಿದ್ದಾರೆ. ತಮ್ಮ ಮೊದಲ ಮಗಳು ಹುಟ್ಟಿದಾಗಿನಿಂದಲೂ ನೀನಾಗೆ ಆರ್ಥಿಕ ಸಹಾಯ ಮಾಡುತ್ತಿದ್ದೆನೆಂದು ಅವರು ಹೇಳಿಕೊಂಡಿದ್ದಾರೆ.

"ನಾನು ತಿಂಗಳಿಗೊಮ್ಮೆ ಹಣ ನೀಡುತ್ತೇನೆ ಮತ್ತು ಆರು ತಿಂಗಳು ಭಾರತದಲ್ಲಿ ಅವರ ಜೊತೆ ಕಳೆಯುತ್ತೇನೆ, ಉಳಿದ ಆರು ತಿಂಗಳು ಬೇರೆ ಜವಾಬ್ದಾರಿಗಳಿವೆ. ವೀಸಾ ಕೂಡ ಆರು ತಿಂಗಳಿಗೆ ಮಾತ್ರ ಇದೆ" ಎಂದು ಗೋಲ್ಡ್‌ಸ್ಟೀನ್ ಹೇಳಿದ್ದಾರೆ. ಗೋಲ್ಡ್‌ಸ್ಟೀನ್ ಅವರ ಚಿಕ್ಕ ಮಗಳು ಅಮಾ ಭಾರತದಲ್ಲಿ ಜನಿಸಿದ್ದು, ನೀನಾ ಇಲ್ಲಿಯೇ ಐದು ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. "ಅಮಾ ಭಾರತದ ಪೌರತ್ವವನ್ನು ಹೊಂದಿದ್ದು, ಗಡೀಪಾರು ಆಗಬಾರದು" ಎಂದು ಅವರು ಹೇಳಿಕೊಂಡಿದ್ದಾರೆ.

ಗುಹೆಯಲ್ಲಿನ ಜೀವನ ಮತ್ತು ನೀನಾ ಆರೋಪಗಳು

ಪ್ರೀಮಾ (6) ಮತ್ತು ಅಮಾ (4) ಎಂಬ ಮಕ್ಕಳು, ನೀನಾ ಜೊತೆಗೆ ಕುಮಟಾ ತಾಲೂಕಿನ ರಾಮತೀರ್ಥ ಪರ್ವತದ ಒಂದು ಗುಹೆಯಲ್ಲಿ ಜುಲೈ 11 ರಂದು ಪತ್ತೆಯಾಗಿದ್ದರು. ಈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ ಪೊಲೀಸರು ಪರಿಶೀಲನೆಗೆ ಬಂದಾಗ ಅವರು ಪತ್ತೆಯಾಗಿದ್ದರು. ಮೂವರೂ ಮೂರು ವಾರಗಳಿಂದ ಗುಹೆಯೊಳಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ನೀನಾ ಕುಟಿನಾ ತಮ್ಮ ಜೀವನಕ್ಕೆ ಅಡ್ಡಿಪಡಿಸಿದ್ದರ ಬಗ್ಗೆ ಕೋಪ ವ್ಯಕ್ತಪಡಿಸಿದ್ದರು. "ನನ್ನ ಜೀವನ ಮಾಧ್ಯಮಗಳಲ್ಲಿ ತೋರಿಸಿದ ಹಾಗೆ ಇರಲಿಲ್ಲ. ಗುಹೆಯಿಂದ ಹೊರಕ್ಕೆ ಬಂದ ಬಳಿಕ ನಮ್ಮ ಜೀವನ ಕಷ್ಟವಾಗಿತ್ತು" ಎಂದು ಅವರು ಹೇಳಿಕೊಂಡಿದ್ದಾರೆ.

"ನಮ್ಮನ್ನು ಈಗ ಅನಾನುಕೂಲ ಸ್ಥಳದಲ್ಲಿ ಇಟ್ಟಿದ್ದಾರೆ. ಅದು ಕೊಳಕು ಪ್ರದೇಶವಾಗಿದ್ದು, ಗೌಪ್ಯತೆಯ ಅವಕಾಶವೂ ಇಲ್ಲ. ತಿನ್ನಲು ಅಗತ್ಯ ಆಹಾರಗಳು ಕೂಡ ಇಲ್ಲ. ನಮ್ಮ ಸರಂಜಾಮುಗಳ ಜೊತೆ ಇದ್ದ ನನ್ನ ಮಗನ ಚಿತಾಭಸ್ಮವನ್ನೂ ವಶಕ್ಕೆ ಪಡೆಯಲಾಗಿದೆ" ಎಂದು ನೀನಾ ಆರೋಪಿಸಿದ್ದಾರೆ.

Similar News