ಡ್ರಗ್ ಪೆಡ್ಲರ್ ಸುನಿಲ್ ಯಾದವ್ ಅಮೆರಿಕದಲ್ಲಿ ಗುಂಡೇಟಿಗೆ ಬಲಿ
ಸುನಿಲ್ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗೆಳೆಯ ರೋಹಿತ್ ಗೋದಾರಾ ಹೊತ್ತುಕೊಂಡಿದ್ದಾನೆ. ಅಂಕಿತ್ ಬಾದು ಕೊಲೆಗೆ ಪ್ರತಿಕಾರ ತೀರಿಸಿಕೊಂಡಿರುವುದಾಗಿ ಹೇಳಿದ್ದಾನೆ.;
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟಾಕ್ಟನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆದಾರ ಸುನಿಲ್ ಯಾದವ್ ಹತ್ಯೆಯಾಗಿದ್ದಾನೆ. ಯಾದವ್ ಎರಡು ವರ್ಷಗಳ ಹಿಂದೆ ರಾಹುಲ್ ಎಂಬ ಹೆಸರಿನ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪಲಾಯನ ಮಾಡಿದ್ದ
ಈ ಹಿಂದೆ ದುಬೈನಲ್ಲಿ ವಾಸಿಸುತ್ತಿದ್ದ ಯಾದವ್ ನನ್ನು ರಾಜಸ್ಥಾನ ಪೊಲೀಸರು ಮತ್ತು ದುಬೈ ಅಧಿಕಾರಿಗಳ ನಡುವಿನ ಸಂಘಟಿತ ಪ್ರಯತ್ನಗಳ ಮೂಲಕ ಬಂಧಿಸಿ ಭಾರತಕ್ಕೆ ತರಲಾಗಿತ್ತು ಎನ್‌ಡಿಟಿವಿ ವರದಿ ಮಾಡಿತ್ತು. ರಾಜಸ್ಥಾನದ ಗಂಗಾನಗರ ಜಿಲ್ಲೆಯ ಆಭರಣ ವ್ಯಾಪಾರಿ ಪಂಕಜ್ ಸೋನಿ ಎಂಬುವರ ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಸಲಾಗಿತ್ತು, ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ಪರಾರಿಯಾಗಿದ್ದ.
ಎರಡೂ ದೇಶಗಳ ಅಧಿಕಾರಿಗಳಿಂದ ತನಿಖೆ
ಯಾದವ್ ಕೊಲೆ ಪ್ರಕರಣದ ಕುರಿತು ಕ್ಯಾಲಿಫೋರ್ನಿಯಾ ಪೊಲೀಸರು ಮತ್ತು ಭಾರತೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರ ರೋಹಿತ್ ಗೋದಾರಾ ಹತ್ಯೆಯ ಹೊಣೆ ವಹಿಸಿಕೊಂಡಿದ್ದಾನೆ. ಇದು ಸೇಡಿನ ಕೃತ್ಯ ಎಂದು ಹೇಳಿದ್ದಾನೆ.
ಮೂಲತಃ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಅಬೋಹರ್ ಮೂಲದ ಸುನಿಲ್ ಯಾದವ್, ಒಂದು ಕಾಲದಲ್ಲಿ ಬಿಷ್ಣೋಯ್ ಮತ್ತು ಗೋದಾರಾ ಜತೆ ಸ್ನೇಹ ಹೊಂದಿದ್ದ. ಆದಾಗ್ಯೂ, ಅಂಕಿತ್ ಭಾದು ಹತ್ಯೆಯ ನಂತರ ಅವರ ಸ್ನೇಹ ಹಳಸಿತ್ತು. ಭಾದು ಸಾವಿಗೆ ಪೂರಕವಾಗಿ ಪಂಜಾಬ್ ಪೊಲೀಸರೊಂದಿಗೆ ಯಾದವ್ ಸಹಕರಿಸಿದ್ದ ಎಂದು ಗೋದಾರಾ ಹೇಳಿಕೆ ನೀಡಿದ್ದಾನೆ.
ಭಾದು ಕೊಲೆಯಾದ ಬಳಿಕ ಯಾದವ್ ಭಾರತದಿಂದ ಪಲಾಯನ ಮಾಡಿದ್ದ. ಅಮೆರಿಕದಲ್ಲಿ ನೆಲೆ ನಿಂತಿದ್ದ. ಅಲ್ಲಿಂದಲೇ ಕುಳಿತು ಗೋದರಾಮ ಸಹಚರರ ಕುರಿತು ಮಾಹಿತಿ ನೀಡುತ್ತಿದ್ದ. "ನಾವು ನಮ್ಮ ಸಹೋದರ ಅಂಕಿತ್ ಭಾದು ಸಾವಿಗೆ ಸೇಡು ತೀರಿಸಿಕೊಂಡಿದ್ದೇವೆ" ಎಂದು ಗೋದರಾ ಹೇಳಿಕೆ ನೀಡಿದ್ದಾನೆ.