ಅಮೆರಿಕ ಸರ್ಕಾರದ ದಕ್ಷತಾ ಇಲಾಖೆಯ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸಿದ ಎಲಾನ್​ ಮಸ್ಕ್​

2024ರ ಚುನಾವಣಾ ಪ್ರಚಾರಕ್ಕೆ ಮಸ್ಕ್, ಟ್ರಂಪ್‌ಗೆ ಹಣಕಾಸಿನ ಸಹಾಯವನ್ನು ಮಾಡಿದ್ದರು. ಚುನಾವಣಾ ಪೂರ್ವ ಪ್ರವಾಸಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ನಂತರ ರಿಪಬ್ಲಿಕನ್ ಅಧಿಕಾರ ವಹಿಸಿಕೊಂಡಾಗ ಟ್ರಂಪ್‌ ಬೆಂಬಲಕ್ಕೆ ನಿಂತು ಆಡಳಿತದಲ್ಲಿ ಸಹಾಯ ಮಾಡಿದ್ದರು.;

Update: 2025-05-29 04:35 GMT

ಬಿಲಿಯನೇರ್ ಉದ್ಯಮಿ ಹಾಗೂ ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆಯ (DOGE) ಮುಖ್ಯಸ್ಥರಾಗಿದ್ದ ಎಲಾನ್ ಮಸ್ಕ್ ಅವರು ಟ್ರಂಪ್ ಸರ್ಕಾರವನ್ನು ತೊರೆದಿದ್ದಾರೆ. ತಮ್ಮ ಮಾಲೀಕತ್ವದ ಸೋಶಿಯಲ್ ಮೀಡಿಯಾ ಫ್ಲ್ಯಾಟ್​ಫಾರ್ಮ್​ ಎಕ್ಸ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿರುವ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ, ವಿಶೇಷ ಸರ್ಕಾರಿ ಉದ್ಯೋಗಿಯಾಗಿ ಅಧ್ಯಕ್ಷ ಟ್ರಂಪ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿರುವುದರಿಂದ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

"ವ್ಯರ್ಥ ವೆಚ್ಚಗಳಿಗೆ ಕಡಿವಾಣ ಹಾಕಲು ಅವಕಾಶ ನೀಡಿದ್ದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದು ಮಸ್ಕ್ ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್ ಜಾರಿಗೆ ತಂದಿರುವ ವೆಚ್ಚ ಕಡಿವಾಣದ ಕಾನೂನು ಟೀಕಿಸಿದ ಒಂದು ದಿನದ ನಂತರ ಮಸ್ಕ್ ಹೊರಕ್ಕೆ ನಡೆದಿದ್ದಾರೆ. ಈ ಮಸೂದೆಯು ಬಜೆಟ್ ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು DOGE ತಂಡದ ಕೆಲಸವನ್ನು ದುರ್ಬಲಗೊಳಿಸುತ್ತದೆ ಎಂದು ಮಸ್ಕ್ ಟ್ರಂಪ್ ಅವರನ್ನು ಟೀಕಿಸಿದ್ದರು.

ಟ್ರಂಪ್‌ ಜತೆಗಿನ ಸಂಬಂಧ

2024ರ ಚುನಾವಣಾ ಪ್ರಚಾರಕ್ಕೆ ಮಸ್ಕ್, ಟ್ರಂಪ್‌ಗೆ ಹಣಕಾಸಿನ ಸಹಾಯವನ್ನು ಮಾಡಿದ್ದರು. ಚುನಾವಣಾ ಪೂರ್ವ ಪ್ರವಾಸಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ನಂತರ ರಿಪಬ್ಲಿಕನ್ ಅಧಿಕಾರ ವಹಿಸಿಕೊಂಡಾಗ ಟ್ರಂಪ್‌ ಬೆಂಬಲಕ್ಕೆ ನಿಂತು ಆಡಳಿತದಲ್ಲಿ ಸಹಾಯ ಮಾಡಿದ್ದರು.

ಅಮೆರಿಕದಲ್ಲಿ ಅಧಿಕಾರ ಬದಲಾದ ತಕ್ಷಣ ಸರ್ಕಾರಿ ಖರ್ಚಿನ ದಿಕ್ಕು ಕೂಡ ಬದಲಾಗಿತ್ತು. ಟ್ರಂಪ್ ಸರ್ಕಾರಿ ದಕ್ಷತಾ ಇಲಾಖೆಯ ಮುಖ್ಯಸ್ಥರಾಗಿ ಎಲಾನ್ ಮಸ್ಕ್ ಅವರನ್ನು ಆಯ್ಕೆ ಮಾಡಿದ್ದರು. ಮಸ್ಕ್ ಈ ಸ್ಥಾನವನ್ನು ವಹಿಸಿಕೊಂಡ ತಕ್ಷಣ, ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವ, ವ್ಯವಸ್ಥೆಯನ್ನು ಸರಳ ಮತ್ತು ಪರಿಣಾಮಕಾರಿಯಾಗಿ ಮಾಡುವ ಕೆಲಸವನ್ನು ಪ್ರಾರಂಭಿಸಿದ್ದರು. ಈ ಅಭಿಯಾನದಿಂದಾಗಿ ಸಾವಿರಾರು ಸರ್ಕಾರಿ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಬೆಳವಣಿಗೆಯ ಬಳಿಕ ಟ್ರಂಪ್ ಸರ್ಕಾರದಿಂದ ಮಸ್ಕ್ ಹೊರ ಹೋಗಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಿದ್ದವು. ಆದರೆ ಶ್ವೇತಭವನ ಅದನ್ನು ಅಲ್ಲಗಳೆದಿತ್ತು. ಇದೀಗ ಅವರು ತಮ್ಮ ಕೆಲಸ ಮುಗಿದಿದೆ ಎಂದು ಅಧಿಕೃತವಾಗಿ ಘೋಷಿಸುವ ಮೂಲಕ ಅಲ್ಲಿಂದ ಹೊರ ಬಿದ್ದಿದ್ದಾರೆ.

ಮಸ್ಕ್ ಅವರು Starship ರಾಕೆಟ್ ಸ್ಫೋಟದಂತಹ ವೈಫಲ್ಯಗಳನ್ನು ಅನುಭವಿಸಿದ್ದರೂ, ತಮ್ಮ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರಿ ದಕ್ಷತಾ ಇಲಾಖೆಯಲ್ಲಿ ಅವರ ಪಾತ್ರವು ಮುಗಿದಿದ್ದರೂ, ಅವರ ಮುಂದಿನ ಹೆಜ್ಜೆಗಳು ಕುತೂಹಲ ಮೂಡಿಸಿವೆ.

---

Tags:    

Similar News