ಡೆಮಾಕ್ರಟಿಕ್ ಪಕ್ಷ ಪಾರದರ್ಶಕತೆಯಿಂದ ಅಧ್ಯಕ್ಷೀಯ ನಾಮನಿರ್ದೇಶನ ಪ್ರಕ್ರಿಯೆ ನಡೆಸುತ್ತದೆ: ಜೇಮ್ ಹ್ಯಾರಿಸನ್
ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಬಳಿಕ ಡೆಮಾಕ್ರಟಿಕ್ ಪಕ್ಷ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜೇಮ್ ಹ್ಯಾರಿಸನ್ ಅವರು, ʻನವೆಂಬರ್‌ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೆ ಹೊಸ ಅಧ್ಯಕ್ಷೀಯ ಅಭ್ಯರ್ಥಿಯ ನಾಮನಿರ್ದೇಶನಕ್ಕೆ ಪಾರದರ್ಶಕ ಮತ್ತು ಕ್ರಮಬದ್ಧವಾದ ಪ್ರಕ್ರಿಯೆಯನ್ನು ಕೈಗೊಳ್ಳಲಿದೆʼ ಎಂದು ಹೇಳಿದ್ದಾರೆ.
ಭಾನುವಾರ ಬೈಡನ್ (81) ಅವರು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು ಮತ್ತು ಡೆಮಾಕ್ರಟಿಕ್ ಪಕ್ಷದ ಹೊಸ ಅಭ್ಯರ್ಥಿಯಾಗಿ ಭಾರತೀಯ ಮತ್ತು ಆಫ್ರಿಕನ್ ಮೂಲದ ಹ್ಯಾರಿಸ್ ಅವರನ್ನು ಅನುಮೋದಿಸಿದರು.
ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಸಮಾವೇಶವು ಆಗಸ್ಟ್ 19 ರಂದು ಚಿಕಾಗೋದಲ್ಲಿ ಪ್ರಾರಂಭವಾಗಲಿದ್ದು, ನವೆಂಬರ್ ಸಾರ್ವತ್ರಿಕ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ದೇಶದಾದ್ಯಂತ ಸುಮಾರು 4,000 ಪ್ರತಿನಿಧಿಗಳು ಸೇರುತ್ತಾರೆ.
ಬೈಡೆನ್ ಅವರು ಪಕ್ಷದಿಂದ ಭಾರೀ ಬೆಂಬಲ ಪಡೆದಿದ್ದರು. ಅವರಿಗೆ 3,800 ಕ್ಕೂ ಹೆಚ್ಚು ಪ್ರತಿನಿಧಿಗಳು ಬೆಂಬಲಿಸಿದ್ದರಾರೆ. ಇದೀಗ ಬೈಡೆನ್ ಅವರೇ ಅನುಮೋದನೆ ಮಾಡಿರುವುದರಿಂದ ಪಕ್ಷದ ನಾಮನಿರ್ದೇಶನವನ್ನು ಪಡೆಯಲು ಹ್ಯಾರಿಸ್ ಅವರಿಗೆ ಅನುಕೂಲವಾಗಿದೆ.
ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹ್ಯಾರಿಸ್ ಅವರ ನಾಮನಿರ್ದೇಶನವನ್ನು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅನುಮೋದಿಸಿದ್ದಾರೆ. ಆದಾಗ್ಯೂ, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮಾಜಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಹ್ಯಾರಿಸ್ ಅನ್ನು ಅನುಮೋದಿಸಿಲ್ಲ.
ನಾಮನಿರ್ದೇಶನಕ್ಕೆ ಪಾರದರ್ಶಕ ಮತ್ತು ನ್ಯಾಯಯುತ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಿರುವ ಡಿಎನ್‌ಸಿ ಅಧ್ಯಕ್ಷ ಹ್ಯಾರಿಸನ್ ಅವರು, ʻʻನಾವು ಈಗ ಮಾಡಬೇಕಾದ ಕೆಲಸವು ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ, ಪಕ್ಷವು ಪಾರದರ್ಶಕ ಮತ್ತು ಕ್ರಮಬದ್ಧತೆಯನ್ನು ಕೈಗೊಳ್ಳುತ್ತದೆ. ನವೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಅಭ್ಯರ್ಥಿಯೊಂದಿಗೆ ಯುನೈಟೆಡ್ ಡೆಮಾಕ್ರಟಿಕ್ ಪಕ್ಷವಾಗಿ ಮುಂದುವರಿಯುತ್ತದೆ. ಈ ಪ್ರಕ್ರಿಯೆಯು ಪಕ್ಷದ ಸ್ಥಾಪಿತ ನಿಯಮಗಳು ಮತ್ತು ಕಾರ್ಯವಿಧಾನಗಳಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಪ್ರತಿನಿಧಿಗಳು ಅಮೆರಿಕದ ಜನರಿಗೆ ಶೀಘ್ರವಾಗಿ ಅಭ್ಯರ್ಥಿಯ ಹೆಸರನ್ನು ತಲುಪಿಸಲು ಉತ್ಸುಕರಾಗಿದ್ದಾರೆ ಮತ್ತು ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆʼʼ ಎಂದು ಅವರು ಹೇಳಿದರು.
ʻʻನವೆಂಬರ್‌ನಲ್ಲಿ ಗೆಲ್ಲುವ ನಮ್ಮ ಸಂಕಲ್ಪದಲ್ಲಿ ಪ್ರಜಾಪ್ರಭುತ್ವವಾದಿಗಳು ಸಿದ್ಧರಾಗಿದ್ದಾರೆ ಮತ್ತು ಒಗ್ಗೂಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲು ನಾವು ಮುಂದುವರಿಯುತ್ತೇವೆ, ಡೆಮಾಕ್ರಟ್‌ಗಳಾಗಿ ನಮ್ಮ ಮೌಲ್ಯಗಳು ಒಂದೇ ಆಗಿರುತ್ತವೆ - ವೆಚ್ಚವನ್ನು ಕಡಿಮೆ ಮಾಡುವುದು, ಸ್ವಾತಂತ್ರ್ಯವನ್ನು ಮರುಸ್ಥಾಪಿಸುವುದು, ಎಲ್ಲಾ ಜನರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಸರ್ವಾಧಿಕಾರದ ಬೆದರಿಕೆಯಿಂದ ಪ್ರಜಾಪ್ರಭುತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ, ಅದನ್ನ ಅಮೆರಿಕದ ಜನರಿಗೆ ಭರವಸೆಯಾಗಿ ನೀಡುತ್ತೇವೆʼʼ ಎಂದು ಅವರು ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಅವರು ನೀಡಿದ ಸಾಟಿಯಿಲ್ಲದ ಪ್ರಗತಿಗೆ ಅಮೆರಿಕದ ಜನರು ಅಧ್ಯಕ್ಷ ಬಿಡೆನ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದು ಹ್ಯಾರಿಸನ್ ಹೇಳಿದರು.
ʻʻನಾವು ಆ ಪರಂಪರೆಯನ್ನು ಗೌರವಿಸುತ್ತೇವೆ ಮತ್ತು ಈ ನವೆಂಬರ್‌ನಲ್ಲಿ ಡೆಮಾಕ್ರಟಿಕ್ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವ ಮತ್ತು ಆಯ್ಕೆ ಮಾಡುವ ದೃಢವಾದ ಬದ್ಧತೆಯ ಮೂಲಕ ಅವರು ಇಂದು ಮಾಡಿದ ನಿರ್ಧಾರವನ್ನು ಗೌರವಿಸುತ್ತೇವೆ, ಅವರು ಮುಂದಿನ ನಾಲ್ಕು ವರ್ಷಗಳಲ್ಲಿ ಆ ಜ್ಯೋತಿಯನ್ನು ಹೊತ್ತೊಯ್ಯುತ್ತಾರೆʼʼ ಎಂದು ಅವರು ಹೇಳಿದರು.