Sri Lanka’s new PM | ಹರಿಣಿ ಅಮರಸೂರ್ಯ ಶ್ರೀಲಂಕಾದ ಹೊಸ ಪ್ರಧಾನಿ

Update: 2024-09-24 13:14 GMT

ದೆಹಲಿಯಿಂದ ಪದವಿ ಪಡೆದಿರುವ ಹರಿಣಿ ಅಮರಸೂರ್ಯ ಅವರು ಶ್ರೀಲಂಕಾದ ಪ್ರಧಾನಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. 1960ರಲ್ಲಿ ಸಿರಿಮಾವೋ ಬಂಡಾರನಾಯಕೆ ಅವರ ನಂತರ ದ್ವೀಪ ರಾಷ್ಟ್ರದಲ್ಲಿ ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಅವರು.

ಹರಿಣಿ ಅಮರಸೂರ್ಯ(54) ಅವರ ನೆಚ್ಚಿನ ಲೇಖಕಿ ಅರುಂಧತಿ ರಾಯ್. ರಾಷ್ಟ್ರೀಯ ಜನತಾ ಶಕ್ತಿ (ಎನ್‌ಪಿಪಿ)ಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಮಾಜಿ ಶಿಕ್ಷಣತಜ್ಞೆ ಅಮರಸೂರ್ಯ,ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. 

ಎನ್‌ಪಿಪಿ ಮೈತ್ರಿಕೂಟದ ಗೆಲುವಿನ ಬಳಿಕ ಪ್ರಧಾನಿ ದಿನೇಶ್ ಗುಣವರ್ಧನ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಚಿವ ಖಾತೆಗಳು: ಅಮರಸೂರ್ಯ ಅವರಿಗೆ ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆ ಖಾತೆ ನೀಡಲಾಗಿದೆ. ಗೃಹಿಣಿ ತಾಯಿ ಮತ್ತು ಚಹಾ ತೋಟದ ಮಾಲೀಕ ತಂದೆಯ ಮಗಳಾದ ಅಮರಸೂರ್ಯ, ಕುಟುಂಬದಿಂದ ರಾಜಕೀಯ ಪ್ರವೇಶಿಸಿದ ಮೊದಲ ವ್ಯಕ್ತಿ. 

ದೆಹಲಿ, ಇಂಗ್ಲೆಂಡಿನಲ್ಲಿ ಶಿಕ್ಷಣ: ಕೊಲಂಬೊದಲ್ಲಿ ಹುಟ್ಟಿ ಬೆಳೆದ ಅವರು, ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜಿನಿಂದ ಪದವಿ ಪಡೆದ ಬಳಿಕ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. 10 ವರ್ಷ ಕಾಲ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. 

ಮಹಿಳಾ ಹಕ್ಕುಗಳ ಲೇಖಕಿಯಾದ ಅವರು ಉತ್ತಮ ವಾಗ್ಮಿ. ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನೇತೃತ್ವದ ಎನ್‌ಪಿಪಿಯ ಪ್ರಮುಖ ಭಾಷಣಕಾರರಾಗಿದ್ದರು. ʻಜೆವಿಪಿ ಹಿಂಸೆಯನ್ನು ತ್ಯಜಿಸಿದೆ ಮತ್ತು ಸಂಸದೀಯ ರಾಜಕೀಯವನ್ನು ದೃಢವಾಗಿ ನಂಬಿದೆ. 22 ದಶಲಕ್ಷ ಜನರಿರುವ ದ್ವೀಪ ರಾಷ್ಟ್ರವನ್ನು ನಡೆಸಲು ಜೆವಿಪಿ ಮತ್ತು ಅದರ ಮಾರ್ಕ್ಸ್‌ವಾದಿ ನಾಯಕ ದಿಸ್ಸನಾಯಕೆ ಅವರನ್ನು ನಂಬಬಹುದು,ʼ ಎಂದು ಜನತೆಗೆ ಮನವರಿಕೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 

ಎನ್‌ಪಿಪಿ ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುನರಾಚಿ ಅವರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದಿಸ್ಸನಾಯಕೆ ಅವರು ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

Tags:    

Similar News