ಅಮೆರಿಕದ ಮಾಜಿ ಅಧ್ಯಕ್ಷ ಜೊ ಬೈಡೆನ್​ಗೆ ಪ್ರಾಸ್ಟೇಟ್ ಕ್ಯಾನ್ಸರ್: ಏನಿದು ಕಾಯಿಲೆ? ಬರದಂತೆ ನೋಡಿಕೊಳ್ಳುವುದು ಹೇಗೆ?

ಪ್ರಾಸ್ಟೇಟ್ ಕಾರ್ಯನಿರ್ವಹಣೆಗೆ ಪುರುಷ ಹಾರ್ಮೋನ್‌ಗಳಾದ ಟೆಸ್ಟೊಸ್ಟಿರಾನ್ ಮತ್ತು ಡೈಹೈಡ್ರೊಟೆಸ್ಟೊಸ್ಟಿರಾನ್) ಅಗತ್ಯ. ಇದು ಪ್ರಾಸ್ಟೇಟ್ ಹಿಗ್ಗುವಿಕೆ ಮತ್ತು ಕ್ಯಾನ್ಸರ್ ಬೆಳವಣಿಗೆಗೂ ಕಾರಣವಾಗಬಹುದು.;

Update: 2025-05-19 11:55 GMT

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಸುಧಾರಿತ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಹೀಗಾಗಿ ಈ ಮಾರಕ ಕಾಯಿಲೆ ಕಾಯಿಲೆ ಬಗ್ಗೆ ವಿಶ್ವದಾದ್ಯಂತ ಚರ್ಚೆ ಶುರುವಾಗಿದೆ. 82 ವರ್ಷದ ಬೈಡನ್ ಅವರು ಮೂತ್ರ ವಿಸರ್ಜನೆಯ ಸಮಸ್ಯೆಗಳನ್ನು ಎದುರಿಸಿದ ನಂತರ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಪ್ರಾಸ್ಟೇಟ್‌ ಗ್ರಂಥಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ಶುಕ್ರವಾರ ಪ್ರಾಸ್ಟೇಟ್ ಕ್ಯಾನ್ಸರ್ ದೃಢಪಟ್ಟಿದ್ದು, ಕ್ಯಾನ್ಸರ್ ಕೋಶಗಳು ಮೂಳೆಗೂ ಹರಡಿವೆ ಎಂಬುದಾಗಿ ಅಲ್ಲಿನ ವೈದ್ಯಕೀಯ ಮೂಲಗಳು ಮಾಹಿತಿ ನೀಡಿವೆ. ಅವರ ಗ್ಲೀಸನ್ ಸ್ಕೋರ್ 9 ಆಗಿರುವುದರಿಂದ ಅತ್ಯಂತ ಆಕ್ರಮಣಕಾರಿ ಕ್ಯಾನ್ಸರ್ ಆಗಿರಬಹುದು ಎಂದು ಹೇಳಲಾಗಿದೆ.

ಹಾಗಾದರೆ ಪ್ರಾಸ್ಟೆಟ್ ಕ್ಯಾನ್ಸರ್ ಎಂದರೇನು? ಅದು ಯಾಕೆ ಬರುತ್ತದೆ. ಅದಕ್ಕೆ ಪರಿಹಾರ ಏನು ಎಂಬುದನ್ನು ನೋಡೋಣ.

ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು?

ಪ್ರಾಸ್ಟೇಟ್ ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗವಾಗಿದೆ. ಇದು ಮೂತ್ರಾಶಯದ ಕೆಳಗೆ ಇದ್ದು, ಮೂತ್ರ ಮತ್ತು ವೀರ್ಯವನ್ನು ಹೊರತರುವ ಮೂತ್ರನಾಳವನ್ನು ಸುತ್ತುವರಿದಿರುತ್ತದೆ. ಪ್ರಾಸ್ಟೇಟ್ ಕಾರ್ಯನಿರ್ವಹಣೆಗೆ ಪುರುಷ ಹಾರ್ಮೋನ್‌ಗಳಾದ ಟೆಸ್ಟೊಸ್ಟಿರಾನ್ ಮತ್ತು ಡಿಎಚ್​​ಟಿ (ಡೈಹೈಡ್ರೊಟೆಸ್ಟೊಸ್ಟಿರಾನ್) ಅಗತ್ಯ. ಡಿಎಚ್​ಟಿ ಸಾಮಾನ್ಯ ಪ್ರಾಸ್ಟೇಟ್ ಬೆಳವಣಿಗೆಗೆ ಮುಖ್ಯವಾಗಿದ್ದರೂ, ಇದು ಪ್ರಾಸ್ಟೇಟ್ ಹಿಗ್ಗುವಿಕೆ ಮತ್ತು ಕ್ಯಾನ್ಸರ್ ಬೆಳವಣಿಗೆಗೂ ಕಾರಣವಾಗಬಹುದು.

ಆರಂಭಿಕ ರೋಗ ಪತ್ತೆಯ ಅಗತ್ಯ

ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಬದುಕುವ ಸಾಧ್ಯತೆ ಹೆಚ್ಚು. ಆದರೂ, ಇದು ಪುರುಷರಲ್ಲಿ ಕ್ಯಾನ್ಸರ್‌ನಿಂದ ಎದುರಾಗುವ ಸಾವಿಗೆ ಎರಡನೇ ಪ್ರಮುಖ ಕಾರಣ. ಇದು ಮುಖ್ಯವಾಗಿ "ವಯಸ್ಸಾದವರ ರೋಗ" ಎಂದು ಪರಿಗಣಿಸಲಾಗುತ್ತದೆ. ಆಫ್ರಿಕನ್ ಅಮೆರಿಕನ್ ಪುರುಷರು ಮತ್ತು ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಇರುವವರಿಗೆ ಈ ರೋಗದ ಅಪಾಯ ಹೆಚ್ಚು. ವಯಸ್ಸು, ಜನಾಂಗ ಮತ್ತು ಆನುವಂಶಿಕತೆ ಬದಲಾಯಿಸಲಾಗದ ಅಪಾಯಗಳಾದರೂ, ಆರಂಭಿಕ ತಪಾಸಣೆ ಮತ್ತು ಸ್ಕ್ರೀನಿಂಗ್ ಜೀವ ಉಳಿಸಲು ಸಹಾಯ ಮಾಡುತ್ತದೆ.

ತಡೆಗಟ್ಟುವುದು ಹೇಗೆ?

1. ಆಹಾರ ಪದ್ಧತಿ ಬದಲಾವಣೆಗಳಿಂದ ಹೆಚ್ಚು ಪರಿಣಾಮಕಾರಿಯಾಗಿ ಈ ಕ್ಯಾನ್ಸರ್ ತಡೆಗಟ್ಟಬಹುದು

ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆ ಕಡಿಮೆ ಮಾಡಬೇಕು. ಆರೋಗ್ಯಕರ ಕೊಬ್ಬುಗಳಾದ ಒಮೆಗಾ-3ಗೆ ಆದ್ಯತೆ ನೀಡಬೇಕು.

ಹಣ್ಣು ಮತ್ತು ತರಕಾರಿ ಹೆಚ್ಚು ತಿನ್ನಬೇಕು. ಸೊಪ್ಪು ಸೇರಿದಂತೆ ವಿವಿಧ ಬಗೆಯ ತರಕಾರಿ, ಹಣ್ಣು ಸೇವಿಸಬೇಕು. ಟೊಮೇಟೊದಲ್ಲಿನ ಲೈಕೋಪೀನ್ ಮತ್ತು ಕ್ರೂಸಿಫರಸ್ ಮತ್ತು ತರಕಾರಿಗಳಲ್ಲಿನ ಸಲ್ಫೊರಾಫೇನ್ ಪ್ರಯೋಜನಕಾರಿ.

ಸೋಯಾ ಪಿಎಸ್​​ಎ ಮಟ್ಟ ಕಡಿಮೆ ಮಾಡಿದರೆ, ಗ್ರೀನ್ ಟೀ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇವೆರಡು ಸೇವನೆ ಉತ್ತಮ.

ಹೆಚ್ಚಿನ ತಾಪಮಾನದಲ್ಲಿ ಕರಿಯುವ ಅಥವಾ ಗ್ರಿಲ್ ಮಾಡುವ ಮಾಂಸದಲ್ಲಿ ಕ್ಯಾನ್ಸರ್ ಕಾರಕಗಳು ಉತ್ಪತ್ತಿಯಾಗಬಹುದು.

ಹಾಲಿನ ಆಹಾರ ಮತ್ತು ಕ್ಯಾಲ್ಸಿಯಂ ಅಧಿಕವಿರುವ ಆಹಾರ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು.

2. ವ್ಯಾಯಾಮದ ಮಹತ್ವ: ನಿಯಮಿತ ವ್ಯಾಯಾಮ ಮಾಡುವವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ದೈಹಿಕ ಚಟುವಟಿಕೆ ಆರೋಗ್ಯಕರ. ಸ್ಥೂಲಕಾಯವು ಅಪಾಯಕಾರಿ ಅಂಶ.

3. ಮದ್ಯಪಾನ ಮತ್ತು ಧೂಮಪಾನ ತ್ಯಜಿಸಬೇಕು: ಧೂಮಪಾನ ಮಾಡುವವರಿಗೆ ಕ್ಯಾನ್ಸರ್ ಮರುಕಳಿಸುವ ಮತ್ತು ಹರಡುವ ಅಪಾಯ ಹೆಚ್ಚು. ಮದ್ಯಪಾನವನ್ನು ಮಿತಿಗೊಳಿಸಿ.

4. ವಿಟಮಿನ್ ಡಿ ಸೇವನೆ ವಿಟಮಿನ್ ಡಿ ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡಬಹುದು. ವಿಟಮಿನ್ ಡಿ ಸಮೃದ್ಧ ಆಹಾರ ಸೇವಿಸಿ ಅಥವಾ ಪ್ರತಿದಿನ 10 ನಿಮಿಷ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.

ಚಿಕಿತ್ಸೆ ಮತ್ತು ಔಷಧಗಳು

ದೇಹದಲ್ಲಿ ಹಾರ್ಮೋನ್ ಮಟ್ಟ ಕಡಿಮೆ ಮಾಡುವ ಅಥವಾ ಅವು ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ಪ್ರವೇಶಿಸದಂತೆ ತಡೆಯುವ ಔಷಧಗಳನ್ನು ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ. ಡಿಎಚ್​​ಟಿ ಪ್ರಾಸ್ಟೇಟ್ ಕ್ಯಾನ್ಸರ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಫಿನಾಸ್ಟರೈಡ್ ಅಥವಾ ಡುಟಾಸ್ಟರೈಡ್‌ನಂತಹ ಡಿಎಚ್​​ಟಿ ಕಡಿಮೆ ಮಾಡುವ ಔಷಧಗಳು ಕ್ಯಾನ್ಸರ್ ಅಪಾಯವನ್ನು ಸುಮಾರು 25% ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳುತ್ತವೆ.

Tags:    

Similar News